ನವದೆಹಲಿ : ಇಂಡಿಯನ್ ಪ್ರೀಮಿಯರ್ ಲೀಗ್ 2024ರ (ಐಪಿಎಲ್) 17ನೇ ಆವೃತ್ತಿ ಆರಂಭಕ್ಕೂ ಮುನ್ನ ಪ್ಲೇ ಆಫ್‌ಗೆ ಪ್ರವೇಶಿಸುವ ಟಾಪ್ ನಾಲ್ಕು ತಂಡಗಳ ಭವಿಷ್ಯವನ್ನು ವಿಶ್ವದ ಕ್ರಿಕೆಟ್ ದಿಗ್ಗಜರು ನುಡಿದಿದ್ದಾರೆ. ಈ ಭವಿಷ್ಯದಿಂದ ಕ್ರಿಕೆಟ್ ಕಟ್ಟೆಯಲ್ಲಿ ಚರ್ಚೆ ಆರಂಭವಾಗಿದೆ. ಮಾಧ್ಯಮವೊಂದರಲ್ಲಿ ಪ್ಲೇ ಆಫ್‌ಗೆ ಪ್ರವೇಶಿಸುವ ಟಾಪ್ ನಾಲ್ಕು ತಂಡಗಳ ಬಗ್ಗೆ ಲೆಕ್ಕಚಾರ ಹಾಕಲಾಗಿದೆ.
ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಹೇಳಿರುವಂತೆ, ಮುಂಬೈ ಇಂಡಿಯನ್ಸ್, ಲಕ್ನೋ ಸೂಪರ್ ಜೈಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಪ್ಲೇ ಆಫ್‌ಗೆ ಅರ್ಹತೆ ಪಡೆಯಲಿವೆ. ಮತ್ತೊಂದೆಡೆ ಮುಂಬೈ ಇಂಡಿಯನ್ಸ್, ಸನ್‌ರೈಸರ್ಸ್ ಹೈದರಾಬಾದ್, ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಕೂಡ ಪ್ಲೇ ಆಫ್‌ಗೆ ಬರಲಿವೆ ಎಂದು ಆಸ್ಟ್ರೇಲಿಯನ್ ಕ್ರಿಕೆಟಿಗ ಟಾಮ್ ಮೂಡಿ ಅಭಿಪ್ರಾಯಪಟ್ಟಿದ್ದಾರೆ.
ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ಡೇಲ್ ಸ್ಟೇಯ್ನ್ ಕೇವಲ 3 ತಂಡಗಳನ್ನು ಆಯ್ಕೆ ಮಾಡಿದ್ದು, ಇತರ ತಂಡಗಳಿಗೂ ಅವಕಾಶವಿದೆ ಎಂದು ಹೇಳಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಪ್ಲೇಆಫ್‌ಗೆ ಲಗ್ಗೆ ಇಡಲಿವೆ ಎಂದಿದ್ದಾರೆ. ಆಸ್ಟ್ರೇಲಿಯಾದ ದಂತಕಥೆ ವೇಗದ ಬೌಲರ್ ಗ್ಲೆನ್ ಮೆಕ್‌ಗ್ರಾತ್ ಕೇವಲ 2 ತಂಡಗಳ ಹೆಸರನ್ನು ಮಾತ್ರ ಹೆಸರಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪ್ಲೇ ಆಫ್ ತಲುಪಲಿದೆ ಎಂದು ಮೆಕ್‌ಗ್ರಾತ್ ಭವಿಷ್ಯ ನುಡಿದಿದ್ದಾರೆ.
ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಟಾಪ್ - 4 ತಂಡಗಳಾಗಿ ಪ್ಲೇಆಫ್ ತಲುಪಬಹುದು ಎಂದು ಭಾರತದ ಮಾಜಿ ಆಲ್ ರೌಂಡರ್ ಇರ್ಫಾನ್ ಪಠಾಣ್ ಹೇಳಿದ್ದಾರೆ. ಇತ್ತ ಅಂಬಟಿ ರಾಯುಡು, ಚೆನ್ನೈ, ಕೆಕೆಆರ್, ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ತಂಡಗಳನ್ನು ಆಯ್ಕೆ ಮಾಡಿದ್ದಾರೆ.
ಚೆನ್ನೈನ ಮಾಜಿ ಆರಂಭಿಕ ಆಟಗಾರ ಮುರಳಿ ವಿಜಯ್ ಮುಂಬೈ, ಚೆನ್ನೈ, ರಾಜಸ್ಥಾನ ಮತ್ತು ಆರ್‌ಸಿಬಿ ಪ್ಲೇ ಆಫ್‌ಗೆ ಬರಲಿವೆ ಎಂದು ಬೆಟ್ಟಿಂಗ್ ಕಟ್ಟಿದ್ದಾರೆ. ಭಾರತದ ಮಾಜಿ ವೇಗದ ಬೌಲರ್ ಎಸ್. ಶ್ರೀಶಾಂತ್ ಕೂಡ ಚೆನ್ನೈ, ರಾಜಸ್ಥಾನ, ಮುಂಬೈ ಮತ್ತು ಗುಜರಾತ್ ಐಪಿಎಲ್ 2024ರ ಟಾಪ್ ನಾಲ್ಕು ತಂಡಗಳಾಗುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಎಲ್ಲ ಆಟಗಾರರ ಆಯ್ಕೆ ಕ್ರಿಕೆಟ್ ಆಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದು, ಇಂದು ರಾತ್ರಿ 8 ರಿಂದ ಸಾಕಷ್ಟು ಆ್ಯಕ್ಷನ್ ಮತ್ತು ಮನರಂಜನೆ ನೋಡಲು ಕಾತರರಾಗಿದ್ದಾರೆ. ಏಕೆಂದರೆ ಇಂದಿನಿಂದ ಮುಂದಿನ 3 ತಿಂಗಳ ಕಾಲ ಎಲ್ಲ 10 ಐಪಿಎಲ್ ತಂಡಗಳು ಟ್ರೋಫಿಯನ್ನು ವಶಪಡಿಸಿಕೊಳ್ಳಲು ಕಾರ್ಯೋನ್ಮುಖರಾಗಲಿವೆ.