ಪ್ಯಾರಿಸ್ (ಫ್ರಾನ್ಸ್): ಭಾರತದ ಸ್ಟಾರ್ ಷಟ್ಲರ್ ಲಕ್ಷ್ಯ ಸೇನ್ ಅವರು ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ನಲ್ಲಿ ಹಾಲಿ ಒಲಿಂಪಿಕ್ ಚಾಂಪಿಯನ್ ಡೆನ್ಮಾರ್ಕ್ನ ವಿಕ್ಟರ್ ಎಕ್ಸೆಲ್ಸೆನ್ ಎದುರು ಸೋಲು ಕಂಡಿದ್ದಾರೆ.
ಈ ಪಂದ್ಯದಲ್ಲಿ ಭಾರತದ 22 ವರ್ಷದ ಯುವ ಷಟ್ಲರ್, ಮೊದಲ ಸೆಟ್ ಸ್ವಲ್ಪ ಅಂತರದಿಂದ ಗೆಲ್ಲುವುದನ್ನು ತಪ್ಪಿಸಿಕೊಂಡರು. ಪಂದ್ಯವನ್ನು ಅಬ್ಬರದಿಂದ ಪ್ರಾರಂಭಿಸಿದ್ದ ಲಕ್ಷ್ಯ ಆಕ್ರಮಣಕಾರಿಯಾಗಿ ಕಾಣಿಸಿದರು ಪಂದ್ಯದ ಮಧ್ಯ ವಿರಾಮದ ವೇಳೆಗೆ 11-9 ಅಂಕಗಳೊಂದಿಗೆ 2 ಅಂಕಗಳ ಮುನ್ನಡೆಯನ್ನೂ ಪಡೆದಿದ್ದರು. ಇದಾದ ಬಳಿಕವೂ ಅಮೋಘ ಪ್ರದರ್ಶನ ನೀಡಿದ ಲಕ್ಷ್ಯ ಎದುರಾಳಿ ಆಟಗಾರನಿಗೆ ಯಾವುದೇ ಅವಕಾಶ ನೀಡಲಿಲ್ಲ. ಮೊದಲ ಸೆಟ್‌ನ ಕೊನೆ ಹಂತದ ವರೆಗೂ ಲಕ್ಷ್ಯ 18-15 ಅಂತರದಿಂದ ಮುನ್ನಡೆ ಸಾಧಿಸಿದ್ದರು. ಆದರೆ ವಿಕ್ಟರ್ ಬಲವಾದ ಪುನರಾಗಮನ ಮಾಡಿ ಪಂದ್ಯದ ಗತಿಯನ್ನೇ ಬದಲಾಯಿಸಿದರು. ಹಿನ್ನಡೆ ಅನುಭವಿಸಿದ್ದ ವಿಕ್ಟರ್ ಮೊದಲ ಸುತ್ತಿನ ಕೊನೆ ಹಂತದ ವೇಳೆಗೆ 20-20 ಅಂತರದಿಂದ ಪಂದ್ಯವನ್ನು ಸಮಗೊಳಿಸಿದರು ಮತ್ತು ನಂತರ ಸತತ ಎರಡು ಗೇಮ್ ಪಾಯಿಂಟ್‌ಗಳನ್ನು ಪಡೆಯುವ ಮೂಲಕ ಮೊದಲ ಸೆಟ್ ಅನ್ನು 22-20 ಅಂತರದಿಂದ ಡೆನ್ಮಾರ್ಕ್ ಆಟಗಾರ ಗೆದ್ದುಕೊಂಡರು.
ಎರಡನೇ ಸೆಟ್ನಲ್ಲೂ ತಮ್ಮ ಪ್ರದರ್ಶನ ಮುಂದುವರೆಸಿದ ವಿಕ್ಟರ್ 21 -14 ಅಂತರದಿಂದ ಲಕ್ಷ್ಯಸೇನ್ ವಿರುದ್ಧ ಗೆಲುವು ಸಾಧಿಸಿ ಫೈನಲ್ಗೆ ಅರ್ಹತೆ ಪಡೆದರು. ಇದರೊಂದಿಗೆ ಲಕ್ಷ್ಯ ಸೇನ್ ಅವರ ಚಿನ್ನದ ಪದಕ ಕನಸು ಭಗ್ನಗೊಂಡಿತು. ಆದರೂ ಲಕ್ಷ್ಯ ಸೇನ್ಗೆ ಪದಕ ಗೆಲ್ಲಲು ಮತ್ತೊಂದು ಅವಕಾಶ ಇದೆ. ಏಕೆಂದರೆ ಫೈನಲ್ನಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ನಿರ್ಧಾರವಾಗಲಿದೆ. ಆದರೆ ಕಂಚಿನ ಪದಕಕ್ಕಾಗಿ ಮತ್ತೊಂದು ಪಂದ್ಯ ನಡೆಯಲಿದೆ. ಅದರಲ್ಲಿ ಲಕ್ಷ್ಯ ಸೇನ್ ಪೈಪೋಟಿ ನಡೆಸಲಿದ್ದಾರೆ.
ಇದಕ್ಕೂ ಮೊದಲು ಶುಕ್ರವಾರ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಭಾರತದ ಷಟ್ಲರ್ ಲಕ್ಷ್ಯ ಸೇನ್ ಸೆಮಿಫೈನಲ್‌ಗೆ ತಲುಪುವ ಮೂಲಕ ಇತಿಹಾಸ ನಿರ್ಮಿಸಿದರು. 76 ನಿಮಿಷಗಳ ಈ ಪಂದ್ಯದಲ್ಲಿ ಸೇನ್ 19-21, 21-15, 21-12 ಸೆಟ್ಗಳಿಂದ ಚೈನೀಸ್ ತೈಪೆಯ ಚೌ ಟಿಯೆನ್ ಚೆನ್ ವಿರುದ್ಧ ಕಠಿಣ ಪೈಪೋಟಿ ನೀಡಿ ಗೆಲುವು ಸಾಧಿಸಿದ್ದರು. ಇದರೊಂದಿಗೆ ಲಕ್ಷ್ಯ ಸೇನ್ ಒಲಿಂಪಿಕ್ ಬ್ಯಾಡ್ಮಿಂಟನ್ನಲ್ಲಿ ಮುಂದಿನ ಸುತ್ತಿಗೆ ಅರ್ಹತೆ ಪಡೆದಿದ್ದರು.