ಅಹಮದಾಬಾದ್: ಫೈನಲ್ ಟಿಕೆಟ್ಗಾಗಿ ನಡೆಯುತ್ತಿರುವ ಹೋರಾಟದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಯಾಕೋ ಎಡವಿದಂತಿದೆ. ಅತಿಯಾದ ಆತ್ಮವಿಶ್ವಾಸ ಮತ್ತು ಕೆಕೆಆರ್ ಅದ್ಭುತ ಆಟದಿಂದಾಗಿ ಪ್ಯಾಟ್ ಕಮಿನ್ಸ್ ಪಡೆ 20 ಓವರ್ಗಳಲ್ಲಿ 159 ರನ್ಗೆ ಆಲೌಟ್ ಆಗಿದೆ. ಆರಂಭದಲ್ಲೇ ಸನ್ ಪಡೆಯನ್ನು ಮಿಚೆಲ್ ಸ್ಟಾರ್ಕ್ ಮಾರಕ ದಾಳಿ ನಡೆಸಿ ಕಟ್ಟಿಹಾಕಿದರು.
-
Innings Break!
— IndianPremierLeague (@IPL) May 21, 2024
A sharp effort on the field by Kolkata Knight Riders 👏👏
Chase on the other side ⏳
A place in the final on the line ‼️
Scorecard ▶️ https://t.co/U9jiBAl187#TATAIPL | #KKRvSRH | #Qualifier1 | #TheFinalCall pic.twitter.com/2gdzlOAi5E
ಹೈದರಾಬಾದ್ ತಂಡದ ಬ್ಯಾಟಿಂಗ್ ಆಧಾರವಾಗಿದ್ದ ಆರಂಭಿಕರಾದ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಬೇಗನೆ ವಿಕೆಟ್ ನೀಡಿದರು. ಅದರಲ್ಲೂ ಹೆಡ್ ಇನಿಂಗ್ಸ್ನ ಎರಡನೇ ಎಸೆತದಲ್ಲೇ ಕ್ಲೀನ್ಬೌಲ್ಡ್ ಆಗಿ ಭಾರೀ ನಿರಾಸೆ ಮೂಡಿಸಿದರು. ಇದರ ಬೆನ್ನಲ್ಲೇ ಅಭಿಷೇಕ್ ಶರ್ಮಾ 3 ರನ್ ಗಳಿಸಿದ್ದಾಗ ಬಲವಾದ ಹೊಡೆತಕ್ಕೆ ಕೈಹಾಕಿ ಸುಟ್ಟುಕೊಂಡರು. ಇದರಿಂದ ತಂಡ 13 ರನ್ಗೆ ಇಬ್ಬರು ಡ್ಯಾಶಿಂಗ್ ಆರಂಭಿಕರನ್ನು ಕಳೆದುಕೊಂಡಿತು.
ಯುವ ಆಲ್ರೌಂಡರ್ ನಿತೀಶ್ಕುಮಾರ್ ರೆಡ್ಡಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ 9, ಬ್ಯಾಟಿಂಗ್ನಲ್ಲಿ ಬಡ್ತಿ ಪಡೆದ ಶಹಬಾಜ್ ಅಹ್ಮದ್ ಸೊನ್ನೆಗೆ ವಿಕೆಟ್ ನೀಡಿ ತಂಡವನ್ನು ಇಕ್ಕಟ್ಟಿಗೆ ಸಿಲುಕಿಸಿದರು. 39 ರನ್ ಗಳಿಸುವಷ್ಟರಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡ ಹೈದರಾಬಾದ್ ರನ್ ಬರ ಎದುರಿಸಿತು.
ರಾಹುಲ್ ತ್ರಿಪಾಠಿ ಕ್ಲಾಸಿಕ್ ಬ್ಯಾಟಿಂಗ್: ದಿಢೀರ್ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ರಾಹುಲ್ ತ್ರಿಪಾಠಿ ಅರ್ಧಶತಕ ಬಾರಿಸಿ ಆಧರಿಸಿದರು. ಪಂದ್ಯದ ಮಹತ್ವ ಅರಿತಂತೆ ಆಡಿದ ಬಲಗೈ ಆಟಗಾರ 35 ಎಸೆತಗಳಲ್ಲಿ 55 ರನ್ ಮಾಡಿದರು. ಇವರಿಗೆ ಹೆನ್ರಿಚ್ ಕ್ಲಾಸಿನ್ ಉತ್ತಮ ಸಾಥ್ ನೀಡಿದರು. 21 ಎಸೆತಗಳಲ್ಲಿ 32 ರನ್ ಗಳಿಸಿದರು. ಕ್ಲಾಸಿನ್ ಔಟಾದ ಬಳಿಕ ಅಬ್ದುಲ್ ಸಮದ್ 16 ರನ್ಗೆ ವಿಕೆಟ್ ನೀಡಿದರು. ಇದರಿಂದ ತಂಡ ಮತ್ತೆ ಕುಸಿಯಲಾರಂಭಿಸಿತು.
ಈ ವೇಳೆ ಬ್ಯಾಟಿಂಗ್ ಹೊಣೆ ಹೊತ್ತ ನಾಯಕ ಪ್ಯಾಟ್ ಕಮಿನ್ಸ್ 24 ಎಸೆತಗಳಲ್ಲಿ 30 ರನ್ ಬಾರಿಸಿದರು. ಇದರಿಂದ ತಂಡ 150 ರ ಗಡಿ ದಾಟಿತು. ಕೊನೆಯಲ್ಲಿ 19.3 ಓವರ್ಗಳಲ್ಲಿ 159 ರನ್ ಗಳಿಸಿ ಗಂಟುಮೂಟೆ ಕಟ್ಟಿತು. ಫೈನಲ್ ಟಿಕೆಟ್ ಪಡೆಯಲು ಕೋಲ್ಕತ್ತಾ ನೈಟ್ ರೈಡರ್ಸ್ 160 ರನ್ ಗಳಿಸಿದರೆ ಸಾಕು.
ಸ್ಟಾರ್ಕ್, ಚಕ್ರವರ್ತಿ ಮಾರಕ ದಾಳಿ: ಆರಂಭದಲ್ಲೇ ಸನ್ ತಂಡವನ್ನು ಮಿಚೆಲ್ ಸ್ಟಾರ್ಕ್ ಕಟ್ಟಿಹಾಕಿದರು. 4 ಓವರ್ಗಳಲ್ಲಿ 3 ವಿಕೆಟ್ ಪಡೆದರು. ಟ್ರಾವಿಸ್ ಹೆಡ್, ನಿತೀಶ್ಕುಮಾರ್, ಶಹಬಾಜ್ ವಿಕೆಟ್ ಪಡೆದು ಮಿಂಚಿದರು. ಬಿಗಿ ಬೌಲಿಂಗ್ ದಾಳಿ ನಡೆಸಿ ವರುಣ್ ಚಕ್ರವರ್ತಿ ಕೋಟಾದ 4 ಓವರ್ಗಳಲ್ಲಿ 26 ರನ್ ನೀಡಿ 2 ವಿಕೆಟ್ ಕಿತ್ತು.
ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ. ಇತ್ತಂಡಗಳು ಫೈನಲ್ ಟಿಕೆಟ್ಗಾಗಿ ಸೆಣಸಾಟ ನಡೆಸಲಿವೆ. ಇಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ತಲುಪಲಿದೆ. ಸೋತ ತಂಡ ಎರಡನೇ ಕ್ವಾಲಿಫೈಯರ್ ಆಡುವ ಅವಕಾಶ ಪಡೆಯಲಿದೆ. ಕೆಕೆಆರ್ ಈವರೆಗೂ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದು, ಮೊದಲ ತಂಡವಾಗಿ ಪ್ಲೇಆಫ್ಗೆ ಬಂದಿದೆ.
ತಂಡಗಳು ಇಂತಿವೆ - ಕೋಲ್ಕತ್ತಾ ನೈಟ್ ರೈಡರ್ಸ್: ರಹಮಾನುಲ್ಲಾ ಗುರ್ಬಾಜ್, ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ರಿಂಕು ಸಿಂಗ್, ಆ್ಯಂಡ್ರೆ ರಸೆಲ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ವೈಭವ್ ಅರೋರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.
ಸನ್‌ರೈಸರ್ಸ್ ಹೈದರಾಬಾದ್: ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ನಿತೀಶ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್, ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್(ನಾಯಕ), ಭುವನೇಶ್ವರ್ ಕುಮಾರ್, ವಿಜಯಕಾಂತ್ ವ್ಯಾಸಕಾಂತ್, ಟಿ ನಟರಾಜನ್.
ಇದನ್ನೂ ಓದಿ: ಐಪಿಎಲ್ ಟ್ರೋಫಿಗಾಗಿ RRRR ನಡುವೆ ಫೈಪೋಟಿ: ಏನಿದು R ವಿಶೇಷ? - WHAT A WONDER RRRR FIGHT