ಕೋಲ್ಕತ್ತಾ: ಇಲ್ಲಿನ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಐಪಿಎಲ್ನ 28ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಭರ್ಜರಿ 8 ವಿಕೆಟ್‌ಗಳ ಜಯ ದಾಖಲಿಸಿದೆ. ಲಕ್ನೋ ನೀಡಿದ್ದ 162 ರನ್‌ಗಳ ಗುರಿ ಬೆನ್ನತ್ತಿದ ಕೆಕೆಆರ್ ಪಿಲಿಫ್ ಸಾಲ್ಟ್ (89) ಅಮೋಘ ಬ್ಯಾಟಿಂಗ್ ನೆರವಿನಿಂದ 15.4 ಓವರ್‌ಗಳಲ್ಲಿಯೇ ಕೇವಲ 2 ವಿಕೆಟ್ ಕಳೆದುಕೊಂಡು ತಲುಪಿತು. ಈ ಮೂಲಕ ಪ್ರಸಕ್ತ ಋತುವಿನಲ್ಲಿ ನಾಲ್ಕನೇ ಗೆಲುವಿನ ನಗೆ ಬೀರಿತು.
ಮೊದಲು ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ಗೆ ಉತ್ತಮ ಆರಂಭ ಸಿಗಲಿಲ್ಲ. ತಂಡವು ಎರಡನೇ ಓವರ್‌ನಲ್ಲಿಯೇ ಆರಂಭಿಕ ಬ್ಯಾಟರ್ ಕ್ವಿಂಟನ್ ಡಿ ಕಾಕ್ (10) ವಿಕೆಟ್ ಒಪ್ಪಿಸಿದರು. ಬಳಿಕ ದೀಪಕ್ ಹೂಡಾ 10 ಎಸೆತಗಳಲ್ಲಿ ಎಂಟು ರನ್ ಗಳಿಸಲಷ್ಟೇ ಶಕ್ತರಾದರು. ಲಕ್ನೋ ನಾಯಕ ಕೆಎಲ್ ರಾಹುಲ್ 27 ಎಸೆತಗಳಲ್ಲಿ 39 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು.
ನಂತರ ಮಾರ್ಕಸ್ ಸ್ಟೋನಿಸ್ 5 ಎಸೆತಗಳಲ್ಲಿ 10 ರನ್ ಗಳಿಸಿ ನಿರ್ಗಮಿಸಿದರು. ಆಯುಷ್ ಬದೋನಿ 27 ಎಸೆತಗಳಲ್ಲಿ 29 ರನ್‌ಗಳ ಇನ್ನಿಂಗ್ಸ್ ಆಡಿದರು. ಕೃನಾಲ್ ಪಾಂಡ್ಯ ಏಳು ರನ್ ಗಳಿಸಿ ಅಜೇಯರಾಗಿ ಉಳಿದರು. ಕೋಲ್ಕತ್ತಾ ಪರ ಮಿಚೆಲ್ ಸ್ಟಾರ್ಕ್ ಮೂರು ವಿಕೆಟ್ ಪಡೆದರು.
ಎರಡು ಬಾರಿಯ ಚಾಂಪಿಯನ್ ಕೆಕೆಆರ್ ತಂಡ ಪ್ರಸಕ್ತ ಋತುವಿನಲ್ಲಿ ಅದ್ಭುತ ಪ್ರದರ್ಶನ ತೋಡುತ್ತಿದೆ. ತಂಡವು ಆಡಿದ 5 ಪಂದ್ಯಗಳ ಪೈಕಿ 4ರಲ್ಲಿ ಗೆಲುವು ಸಾಧಿಸಿದಂತಾಗಿದೆ. 8 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿಲ್ಲಿ ಎರಡನೇ ಸ್ಥಾನವನ್ನು ಕಾಯ್ದುಕೊಂಡಿದೆ. ಮತ್ತೊಂದೆಡೆ ಲಕ್ನೋ ಸೂಪರ್ ಜೈಂಟ್ಸ್ ಆಡಿರುವ 6 ಪಂದ್ಯಗಳಲ್ಲಿ 3ರಲ್ಲಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕಿಳಿದಿದೆ.
ಇದನ್ನೂ ಓದಿ: ಪಾಂಡ್ಯ ಗೇಲಿ ಮಾಡಬೇಡಿ, ಅವರು ಭಾರತ ತಂಡದ ಸದಸ್ಯ: ಮುಂಬೈ ಫ್ಯಾನ್ಸ್‌ಗೆ ಬುದ್ಧಿ ಹೇಳಿದ ಕೊಹ್ಲಿ - Virat Kohli