ಕೋಲ್ಕತ್ತಾ: ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಹೊಸ ದಾಖಲೆ ಬರೆದಿದೆ. ಈ ಪಂದ್ಯದಲ್ಲಿ 222 ಸ್ಕೋರ್ ಮಾಡುವ ಮೂಲಕ ಐಪಿಎಲ್ನಲ್ಲಿ ಅತೀ ಹೆಚ್ಚು ಬಾರಿ 220+ ಸ್ಕೋರ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳ ದಾಖಲೆ ಸರಿಗಟ್ಟಿದೆ.
ಈಡೆನ್ ಗಾರ್ಡನ್ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೇಯಸ್ ಅಯ್ಯರ್ ನೇತೃತ್ವದ ತಂಡವು ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 222 ರನ್ ಗಳಿಸಿತು. ಎರಡನೇ ಬಾರಿಗೆ ರಾಯಲ್ ಚಾಲೆಂಜರ್ಸ್ ವಿರುದ್ಧ ಕೆಕೆಆರ್ ಗಳಿಸಿದ ಅತ್ಯಧಿಕ ಮೊತ್ತ ಇದಾಗಿದೆ. ಇದಕ್ಕೂ ಮುನ್ನ 2008 ರಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿ ವಿರುದ್ದ 222/3 ಕಲೆಹಾಕಿತ್ತು.
ಐಪಿಎಲ್ನಲ್ಲಿ ಹೆಚ್ಚು ಬಾರಿ 220+ ಸ್ಕೋರ್ ಮಾಡಿದ ತಂಡಗಳು
ಚೆನ್ನೈ ಸೂಪರ್ ಕಿಂಗ್ಸ್: ಸಿಎಸ್ಕೆ ಮೂರು ಬಾರಿ 220+ ರನ್ ಗಳಿಸಿದೆ. 2008ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 240/5 ರನ್ ಕಲೆಹಾಕಿತ್ತು. ನಂತರ 2010 ರಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ದ 246/5 ರನ್ಕಲೆ ಹಾಕಿತ್ತು.
ಸನ್ ರೈಸರ್ಸ್ ಹೈದರಾಬಾದ್: ಎಸ್ಆರ್ಹೆಚ್ ಮೂರು ಬಾರಿ 220+ ಸ್ಕೋರ್ ಮಾಡಿದ ಎರಡನೇ ತಂಡವಾಗಿದೆ. ಈ ಸಾಧನೆಯನ್ನು ಪ್ರಸಕ್ತ ಋತುವಿನಲ್ಲೇ ಮಾಡಿರುವುದು ವಿಶೇಷ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 287, ಮುಂಬೈ ಇಂಡಿಯನ್ಸ್ ವಿರುದ್ಧ 277 ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 266 ರನ್ ಗಳಿಸಿದೆ.
ಕೋಲ್ಕತ್ತಾ ನೈಟ್ ರೈಡರ್ಸ್: ಕೆಕೆಆರ್ ಈ ಸಾಧನೆ ಮಾಡಿದ ಮೂರನೇ ತಂಡವಾಗಿದೆ. ಪ್ರಸಕ್ತ ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅವರು 272 ಗಳಿಸಿದ್ದರೆ, ಆರ್ಸಿಬಿ ವಿರುದ್ದ 222 ರನ್, 2013 ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 223 ರನ್ ಗಳಿಸಿತ್ತು.
ನಿನ್ನೆ ನಡೆದ ರಣರೋಚಕ ಪಂದ್ಯದಲ್ಲಿ ಆರ್ಸಿಬಿ ತಂಡ 1 ರನ್ನಿಂದ ಕೆಕೆಆರ್ ವಿರುದ್ದ ಸೋಲನುಭವಿಸಿತು. ಬೃಹತ್ ಗುರಿಯನ್ನು ಪಡೆದಿದ್ದ ಬೆಂಗಳೂರು ಕೊನೆಯ ಬೌಲ್ವರೆಗೂ ಹೋರಾಟ ನಡೆಸಿತು. ವಿಲ್ ಜಾಕ್ಸ್, ರಜತ್ ಪಾಟೀದಾರ್ ಅವರ ಶತಕದ ಜೊತೆಯಾಟದಿಂದ ಗೆಲುವಿನ ಲಯಕ್ಕೆ ಮರಳುವ ಸೂಚನೆಯನ್ನೂ ನೀಡಿತ್ತು. ಈ ಇಬ್ಬರು ನಿರ್ಗಮಿಸಿದ ಬಳಿಕ ಮತ್ತೆ ಕುಸಿತ ಕಂಡ ತಂಡ ಸೋಲುವ ಹಂತಕ್ಕೆ ತಲುಪಿತು. ಕೊನೆಯ ಓವರ್ನಲ್ಲಿ ಗೆಲುವಿಗೆ 21ರನ್ಗಳ ಅವಶ್ಯಕತೆ ಇದ್ದಾಗ ತಂಡ ಸೋಲುವುದು ಬಹುತೇಕ ಖಚಿತ ಎಂದೇ ಅಂದಾಜಿಸಲಾಗಿತ್ತು. ಆದರೇ ಕರಣ್ ಶರ್ಮಾ ಭರ್ಜರಿ ಮೂರು ಸಿಕ್ಸ್ರ ಸಿಡಿಸಿ ಅಭಿಮಾನಿಗಳಲ್ಲಿ ಗೆಲುವಿನ ಆಸೆ ಮೂಡಿಸಿದರಾದರೂ. ಇನ್ನೇನು ಗೆದ್ದೆವು ಅಂದುಕೊಂಡಿದ್ದ ಆರ್ಸಿಬಿ ಭಾರೀ ನಿರಾಸೆ ಅನುಭವಿಸಿ ಸತತ 6ನೇ ಸೋಲು ಕಂಡು ಪ್ಲೇ ಆಫ್ನಿಂದ ಹೊರಬಿತ್ತು.
ಇದನ್ನೂ ಓದಿ: ಸಾಯಿ ಕಿಶೋರ್ ಬೌಲಿಂಗ್ ದಾಳಿಗೆ ನಲುಗಿದ ಪಂಜಾಬ್: ಗುಜರಾತ್ಗೆ ನಾಲ್ಕನೇ ಗೆಲುವು - GT Beat PBKS