ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಬಗ್ಗೆ ತಿಳಿಯದೇ ಇರುವವರು ಯಾರೂ ಇಲ್ಲ. ಕೂಲ್ ಕ್ಯಾಪ್ಟನ್ ಎಂದೇ ಪ್ರಸದ್ದಿ ಪಡೆದಿರುವ ಮಾಹಿ ಮೈದಾನದ ಒಳಗೆ ಮಾತ್ರವಲ್ಲದೇ ಹೊರಗಡೆಯೂ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಯಶಸ್ವಿ ನಾಯಕರಾಗಿರುವ ಧೋನಿ 2007ರ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಹಾಗೂ 2013ರ ಚಾಂಪಿಯನ್ ಟ್ರೋಫಿ ಗೆದ್ದ ಟೀಂ ಇಂಡಿಯಾದ ನಾಯಕತ್ವ ವಹಿಸಿದ್ದರು. ಅಲ್ಲದೇ, 3 ಐಸಿಸಿ ಟ್ರೋಫಿಗಳನ್ನು ಗೆದ್ದ ವಿಶ್ವದ ಏಕೈಕ ನಾಯಕ ಎಂಬ ದಾಖಲೆಯೂ ಇವರ ಹೆಸರಲ್ಲಿದೆ.
ಯಶಸ್ವಿ ನಾಯಕ ಮತ್ತು ವಿಕೆಟ್ ಕೀಪರ್ ಆಗಿರುವ ಧೋನಿ ಇಂದಿನ ಅನೇಕ ಯುವ ಕ್ರಿಕೆಟರ್ಗಳಿಗೆ ರೋಲ್ ಮಾಡಲ್ ಕೂಡ ಆಗಿದ್ದಾರೆ. ಈ ಪಟ್ಟಿಯಲ್ಲಿ ಟೀಂ ಇಂಡಿಯಾದ ಯುವ ಬೌಲರ್ ಖಲೀಲ್ ಅಹ್ಮದ್ ಕೂಡ ಒಬ್ಬರು. ಈ ಕುರಿತು ಸ್ವತಃ ಖಲೀಲ್ ಅಹ್ಮದ್ ಹೇಳಿಕೊಂಡಿದ್ದಾರೆ.
ಕಾಮೆಂಟೇಟರ್ ಆಕಾಶ್ ಚೋಪ್ರಾ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ನಡೆಸಿದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಖಲೀಲ್ ಅಹ್ಮದ್, ಧೋನಿ ಅವರನ್ನು ತಮ್ಮ ಮಾರ್ಗದರ್ಶಕರಾಗಿ ಪರಿಗಣಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಧೋನಿ ಅವರೊಂದಿಗಿನ ಫೋಟೋಗಳನ್ನು ಗಮನಿಸಿದರೆ ನೀವು ಅವರಿಗೆ ಒಳ್ಳೆಯ ಸ್ನೇಹಿತ ಎಂದೆನಿಸುತ್ತದೆ ಎಂಬ ಆಕಾಶ್ ಚೋಪ್ರಾರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಖಲೀಲ್, ಮಹಿ ಭಾಯ್ ನನ್ನ ಸ್ನೇಹಿತವಲ್ಲವೇ ಅಲ್ಲ, ನನ್ನ ಅಣ್ಣನೂ ಅಲ್ಲ, ಅವರು ನನ್ನ ಪಾಲಿಗೆ ಗುರು ಇದ್ದಂತೆ ಎಂದು ಹೇಳಿಕೊಂಡಿದ್ದಾರೆ.
ಜಹೀರ್ ಖಾನ್ ಬೌಲಿಂಗ್ ನೋಡಿಕೊಂಡು ಬೆಳೆದಿದ್ದ ನಾನು ಬಾಲ್ಯದಿಂದಲೂ ಟೀಂ ಇಂಡಿಯಾದಲ್ಲಿ ಮೊದಲ ಓವರ್ನಲ್ಲೇ ಬೌಲಿಂಗ್ ಮಾಡಬೇಕೆಂಬ ಮಹದಾಸೆ ಹೊಂದಿದ್ದೆ. ಆದ್ರೆ ಏಷ್ಯಾಕಪ್‌ನಲ್ಲಿ ನನಗೆ ಈ ಅವಕಾಶ ಸಿಕ್ಕಿತ್ತು. ಮಾಹಿ ಅವರು ಮೊದಲ ಓವರ್ ಬೌಲ್ ಮಾಡಲು ನನಗೆ ಅವಕಾಶ ಕಲ್ಪಿಸಿದ್ದರು ಇದರಿಂದ ನನ್ನ ಕನಸು ಈಡೇರಿತ್ತು. ಅವರ ಮಾರ್ಗದರ್ಶನದಲ್ಲಿ ಹಲವಾರು ತಂತ್ರಗಳನ್ನು ಕಲಿತಿದ್ದೇನೆ. ಹಾಗಾಗಿ ಅವರು ನನ್ನ ಗುರುಗಳು ಎಂದು ತಿಳಿಸಿದರು.
ಧೋನಿ ಹೂ ನೀಡುತ್ತಿರುವ ವೈರಲ್ ಚಿತ್ರದ ಬಗ್ಗೆ ಕೇಳಿದ ಪ್ರಶ್ನಿಗೆ ಪ್ರತಿಕ್ರಿಯಿಸಿದ ಖಲೀಲ್, ನ್ಯೂಜಿಲೆಂಡ್ ಪ್ರವಾಸದ ವೇಳೆ ಧೋನಿ ಈ ಹೂವನ್ನು ನೀಡಿದ್ದರು. ಧೋನಿ ತಮ್ಮ ಅಭಿಮಾನಿಗಳಿಂದ ಹೂವುಗಳನ್ನು ತೆಗೆದುಕೊಂಡು ತಮಗೆ ನೀಡಿದ್ದರು. ಅಭಿಮಾನಿಯೊಬ್ಬರು ಈ ಚಿತ್ರವನ್ನು ಕ್ಲಿಕ್ಕಿಸಿದ್ದರು. ಈ ಅನೀರಿಕ್ಷಿತ ಕ್ಷಣ ತನ್ನ ಜೀವನದ ಸ್ಮರಣೀಯ ಕ್ಷಣವಾಗಿದೆ ಎಂದು ಖಲೀಲ್ ಹೇಳಿಕೊಂಡಿದ್ದಾರೆ.