ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯ ನೂತನ ಅಧ್ಯಕ್ಷರಾಗಿ ಜಯ್ ಶಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಐಸಿಸಿ ಅಧಿಕೃತವಾಗಿ ಘೋಷಣೆ ಮಾಡಿದೆ. ಈ ಮೂಲಕ ಜಯ್ ಶಾ ಐಸಿಸಿ ಅಧ್ಯಕ್ಷರಾದ ನಾಲ್ಕನೇ ಭಾರತೀಯ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಜಗಮೋಹನ್ ದಾಲ್ಮಿಯಾ, ಶರದ್ ಪವಾರ್ ಮತ್ತು ಶಶಾಂಕ್ ಮನೋಹರ್ ಐಸಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಪ್ರಸ್ತುತ ಐಸಿಸಿ ಅಧ್ಯಕ್ಷರಾಗಿರುವ ಗ್ರೆಗ್ ಬಾರ್ಕ್ಲೇ ಅವರ ಅಧಿಕಾರಾವಧಿಯು ನವೆಂಬರ್ 30 ರಂದು ಕೊನೆಗೊಳ್ಳಲಿದೆ. ಈಗಾಗಲೇ ಎರಡು ಬಾರಿ ನೇಮಕಗೊಂಡಿದ್ದ ಗ್ರೆಗ್ ಬಾರ್ಕ್ಲೇ ಮೂರನೇ ಬಾರಿಗೆ ಹುದ್ದೆಯಲ್ಲಿ ಮುಂದುವರೆಯಲು ನಿರಾಕರಿಸಿದ್ದಾರೆ. ಇದರ ನಂತರ, ಬಿಸಿಸಿಐ ಕಾರ್ಯದರ್ಶಿಯಾಗಿದ್ದ ಜಯ್ ಶಾ ಐಸಿಸಿಯ ನೂತನ ಅಧ್ಯಕ್ಷರಾಗಲು ಮಂಡಳಿಯ 16 ಸದಸ್ಯರ ಪೈಕಿ 15 ಸದಸ್ಯರ ಬೆಂಬಲ ಸೂಚಿಸಿದ್ದರು. ಐಸಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು 9 ಮತಗಳ ಗೆಲುವು ಅನಿವಾರ್ಯವಾಗಿತ್ತು. ಆದರೇ ಶಾ ಅವರಿಗೆ 15 ಸದಸ್ಯರ ಬೆಂಬಲ ಸೂಚಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಐಸಿಸಿ ಅಧ್ಯಕ್ಷರ ಗರಿಷ್ಠ ಅವಧಿ ಎರಡು ವರ್ಷಗಳಾಗಿರಲಿದೆ. ಆದರೆ ಗ್ರೆಗ್ ಬಾರ್ಕ್ಲೇ ಈಗಾಗಲೇ ನಾಲ್ಕು ವರ್ಷಗಳನ್ನು ಪೂರೈಸಿದ್ದಾರೆ. ಅವರು ಮತ್ತೆ ಮೂರನೇ ಬಾರಿಗೆ ಈ ಹುದ್ದೆಯಲ್ಲಿ ಮುಂದುವರಿಯಲು ನಿರಾಕರಿಸಿದ್ದಾರೆ. ಈಗ ಗ್ರೆಗ್ ಬಾರ್ಕ್ಲೇ ಬದಲಿಗೆ ಜಯ್ ಶಾ ಅವರನ್ನು ಐಸಿಸಿಯ ಹೊಸ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಇದಕ್ಕೂ ಮುನ್ನ ಜಯ್ ಶಾ ಬಿಸಿಸಿಐ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.