ರಾಜ್ಕೋಟ್(ಗುಜರಾತ್) : ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಒಂದೇ ದಿನ ಭಾವುಕ ಮತ್ತು ನಿರಾಸೆ ಘಟನೆಗಳು ಕಂಡುಬಂದವು. ಯುವ ಕ್ರಿಕೆಟರ್ ಸರ್ಫರಾಜ್ ಖಾನ್ ಹಲವು ವರ್ಷಗಳ ಕಾಯುವಿಕೆಯ ನಂತರ ಟೀಂ ಇಂಡಿಯಾದ ಕ್ಯಾಪ್ ಧರಿಸಿದರು. ಪುತ್ರನ ಸಾಧನೆಗೆ ತಂದೆ ಮತ್ತು ಪತ್ನಿ ಭಾವುಕರಾಗಿ ಕಣ್ಣೀರು ಹಾಕಿದರು.
ಸಿಕ್ಕ ಅವಕಾಶವನ್ನು ಭರ್ಜರಿಯಾಗಿ ಬಳಸಿಕೊಂಡ ಸರ್ಫರಾಜ್ ಖಾನ್ ಇಂಗ್ಲೆಂಡ್ ಬೌಲರ್ಗಳನ್ನು ಬೆಂಡೆತ್ತಿ ಕೇವಲ 48 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ತಮ್ಮ ತಾಕತ್ತು ಪ್ರದರ್ಶಿಸಿದರು. ಆದರೆ, ರವೀಂದ್ರ ಜಡೇಜಾ ಮಾಡಿದ ಎಡವಟ್ಟಿನಿಂದಾಗಿ ಯುವ ಬ್ಯಾಟರ್ ರನೌಟ್ ಆಗಬೇಕಾಯಿತು. ಇದು ನಾಯಕ ರೋಹಿತ್ ಶರ್ಮಾ ಸೇರಿ ಕ್ರೀಡಾಂಗಣದಲ್ಲಿ ಅಭಿಮಾನಿಗಳಿಗೆ ಭಾರಿ ನಿರಾಸೆ ತಂದಿತು. ದಿನದಾಟ ಮುಗಿದ ನಂತರ ಈ ಬಗ್ಗೆ ಸ್ವತಃ ಜಡೇಜಾ ಬೇಸರ ವ್ಯಕ್ತಪಡಿಸಿ, ತನ್ನ ತಪ್ಪಿಗೆ ಸರ್ಫರಾಜ್ ಬಳಿ ಕ್ಷಮೆ ಕೋರಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಶತಕವೀರ ಜಡೇಜಾ, "ಸರ್ಫರಾಜ್ ಖಾನ್ ರನೌಟ್ ಆಗಿದ್ದು ಬೇಸರ ತಂದಿದೆ. ಅದು ನನ್ನದೇ ತಪ್ಪು. ಉತ್ತಮವಾಗಿ ಆಡಿದಿರಿ" ಎಂದು ಬರೆದುಕೊಂಡಿದ್ದಾರೆ. ಶತಕ ಬಾರಿಸಿದಾಗಲೂ ಸ್ಪಿನ್ ಮಾಂತ್ರಿಕ ದೊಡ್ಡದಾಗಿ ಸಂಭ್ರಮಾಚರಣೆ ಮಾಡದೆ, ತಮ್ಮ ವಿಶೇಷ ಶೈಲಿಯಾದ 'ಕತ್ತಿವರಸೆ'ಯನ್ನು ಪ್ರದರ್ಶಿಸಿದರು. ಆದರೆ, ಅವರ ಮುಖದಲ್ಲಿ ಬೇಸರದ ಭಾವ ಇರುವುದು ಕಂಡುಬಂದಿತ್ತು.
ಚೊಚ್ಚಲ ಪಂದ್ಯದಲ್ಲೇ ಗುಡುಗಿದ ಸರ್ಫರಾಜ್: ಯುವ ಬ್ಯಾಟರ್ ಸರ್ಫರಾಜ್ ದೇಶಿ ಕ್ರಿಕೆಟ್ನಲ್ಲಿ ರಾಶಿ ರಾಶಿ ರನ್ ಕಲೆ ಹಾಕಿ ಕೊನೆಗೂ ಭಾರತ ತಂಡದ ಕದ ತಟ್ಟಿದರು. ವಿಶಾಖಪಟ್ಟಣಂನಲ್ಲಿ ನಡೆದ 2ನೇ ಪಂದ್ಯಕ್ಕೆ ಆಯ್ಕೆಯಾಗಿದ್ದರೂ, ಆಡುವ ಹನ್ನೊಂದರಲ್ಲಿ ಸ್ಥಾನ ಸಿಕ್ಕಿರಲಿಲ್ಲ. 3ನೇ ಟೆಸ್ಟ್ನಲ್ಲಿ ಕೆ.ಎಲ್ ರಾಹುಲ್ ಅನುಪಸ್ಥಿತಿಯಲ್ಲಿ ಅವಕಾಶ ಗಿಟ್ಟಿಸಿಕೊಂಡ ಖಾನ್, ರಾಜ್ಕೋಟ್ ಮೈದಾನದಲ್ಲಿ ಮೆರೆದಾಡಿದರು. ಪ್ರಮುಖ ನಾಲ್ಕು ವಿಕೆಟ್ ಬಿದ್ದಿದ್ದರೂ ಲೆಕ್ಕಿಸದೇ, ಜಡೇಜಾ ಜೊತೆಗೂಡಿ ಭರ್ಜರಿ ಇನಿಂಗ್ಸ್ ಕಟ್ಟಿದರು.
ಕೇವಲ 48 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಜಡೇಜಾ 99 ರನ್ ಗಳಿಸಿದ್ದ ವೇಳೆ ಒಂಟಿ ರನ್ ಕದಿಯುವಾಗ ಸಮನ್ವಯದ ಕೊರತೆಯಿಂದ ಸರ್ಫರಾಜ್ ರನೌಟ್ ಆದರು. ಇಂಗ್ಲೆಂಡ್ ಬೌಲರ್ಗಳನ್ನು ಲೀಲಾಜಾಲವಾಗಿ ಬೆಂಡೆತ್ತುತ್ತಿದ್ದ ಖಾನ್ (66 ರನ್) ಔಟಾಗಿದ್ದು, ನಾಯಕ ರೋಹಿತ್ ಸೇರಿ ತಂಡದ ಆಟಗಾರರಲ್ಲಿ ಬೇಸರ ತರಿಸಿತು. ದಿನದಾಟ ಮುಗಿದ ಬಳಿಕ ಮಾತನಾಡಿದ ಸರ್ಫರಾಜ್ ಖಾನ್, ಜಡೇಜಾ ಅವರು ನನ್ನ ಬಳಿ ಬೇಸರ ವ್ಯಕ್ತಪಡಿಸಿದರು. ಆಟದಲ್ಲಿ ಇದೆಲ್ಲಾ ಸಹಜ. ಸಂವಹನ ತಪ್ಪಿನಿಂದ ಔಟಾದೆ, ಪರವಾಗಿಲ್ಲ ಎಂದರು.
ಇದನ್ನೂ ಓದಿ: ಬೆಳಗ್ಗೆ ಭಾರತ ತಂಡಕ್ಕೆ ಪಾದಾರ್ಪಣೆಯ ಆನಂದ ಭಾಷ್ಪ; ಸಂಜೆ ದಾಖಲೆಯ ಅರ್ಧಶತಕ ಸಿಡಿಸಿ ಸಂಭ್ರಮ