ಬೆಂಗಳೂರು: ಭಾರತದ ಮೊದಲ ಮಹಿಳಾ ಕ್ರಿಕೆಟ್ ಪಿಚ್ ಕ್ಯುರೇಟರ್ ಆಗಿ ಜಸಿಂತಾ ಕಲ್ಯಾಣ್ ಇತಿಹಾಸ ನಿರ್ಮಿಸಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಮಂಗಳವಾರ ಹೇಳಿದ್ದಾರೆ. ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಈ ಕುರಿತು ಮಾಹಿತಿ ನೀಡಿರುವ ಅವರು, 'ಜಸಿಂತಾ ಕಲ್ಯಾಣ್ ದೇಶದ ಮೊದಲ ಮಹಿಳಾ ಕ್ರಿಕೆಟ್ ಪಿಚ್ ಕ್ಯುರೇಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ' ಎಂದು ಪ್ರಕಟಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್‌ನ(WPL) ಪಂದ್ಯಗಳಿಗೆ ಪಿಚ್ ತಯಾರಿಯ ನೇತೃತ್ವ ವಹಿಸಿರುವ ಜಸಿಂತಾ ಅವರ ದೃಢ ನಿರ್ಧಾರವು ಯಾವುದೇ ಅಡೆತಡೆಗಳನ್ನು ಮುರಿದು ಮುನ್ನುಗ್ಗುವ ಇಚ್ಛೆಯನ್ನು ಸಾಕಾರಗೊಳಿಸಿದೆ. ಈ ಅದ್ಭುತ ಸಾಧನೆಯು ಕ್ರೀಡೆಯ ಮೇಲಿನ ಅವರ ಬದ್ಧತೆ ಮತ್ತು ಉತ್ಸಾಹಕ್ಕೆ ನಿದರ್ಶನ. ಮಹಿಳಾ ಪ್ರೀಮಿಯರ್ ಲೀಗ್‌ಗಾಗಿ ಪಿಚ್‌ನ ಮೇಲ್ವಿಚಾರಣೆಯಲ್ಲಿ ಅವರ ಪಾತ್ರ ಮಹತ್ವದ್ದು. ಇದು ಭಾರತದಲ್ಲಿ ಕ್ರಿಕೆಟ್ ವಿಕಸನಗೊಳ್ಳುತ್ತಿರುವುದನ್ನು ಎತ್ತಿ ತೋರಿಸುತ್ತದೆ ಎಂದಿದ್ದಾರೆ.
ಮಹಿಳಾ ಪ್ರೀಮಿಯರ್ ಲೀಗ್‌ಗಾಗಿ ಮೈದಾನವನ್ನು ಅಲಂಕರಿಸುವ ಆಟಗಾರರು ಮಾತ್ರವಲ್ಲದೆ, ತೆರೆಮರೆಯಲ್ಲಿ ದಣಿವರಿಯದೆ ಮಾಡುವ ಜನರ ಕೆಲಸಗಳು ಆಟದ ಯಶಸ್ಸಿಗೆ ಅಪಾರ ಕೊಡುಗೆ ನೀಡುತ್ತಿವೆ. ಅದಕ್ಕಾಗಿ ಜೆಸಿಂತಾ ಕಲ್ಯಾಣ್ ಅವರಂಥ ವಿಶೇಷ ವ್ಯಕ್ತಿಗಳನ್ನು ಶ್ಲಾಘಿಸುವುದು ನಮ್ಮ ಕರ್ತವ್ಯ ಎಂದು ಶಾ ತಿಳಿಸಿದ್ದಾರೆ.
ಪ್ರಸ್ತುತ ಮಹಿಳಾ ಪ್ರೀಮಿಯರ್ ಲೀಗ್‌ನ ಎರಡನೇ ಸೀಸನ್ ನಡೆಯುತ್ತಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯಗಳು ನಿಗದಿಯಾಗಿವೆ. ಎರಡನೇ ಹಂತದ ಪಂದ್ಯಗಳು ನವದೆಹಲಿಯಲ್ಲಿ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ (ಕೋಟ್ಲಾ ಮೈದಾನ) ನಡೆಯಲಿವೆ.
ಇದನ್ನೂ ಓದಿ: 10, 11ನೇ ಕ್ರಮಾಂಕದಲ್ಲಿ ಶತಕ ಸಿಡಿಸಿದ ಮುಂಬೈ ಜೋಡಿ; ರಣಜಿಯಲ್ಲಿ ಅಪರೂಪದ ದಾಖಲೆ