ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಶನಿವಾರ ನಡೆದ ರೋಚಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್(ಎಸ್‌ಆರ್‌ಎಚ್) ಗೆಲುವು ಸಾಧಿಸಿತು. ಈ ಋತುವಿನಲ್ಲಿ ನಾಲ್ಕನೇ ವಿಜಯ ಸಾಧಿಸುವ ಮೂಲಕ ಎಸ್‌ಆರ್‌ಎಚ್ ತನ್ನ ಅಭಿಯಾನ ಮುಂದುವರಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 266 ರನ್‌ಗಳ ಬೃಹತ್ ಸ್ಕೋರ್ ದಾಖಲಿಸಿತು. ಇದರೊಂದಿಗೆ ಸತತ ಮೂರು ಪಂದ್ಯಗಳಲ್ಲಿ 250ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು. ಟಿ20ಯಲ್ಲಿ 250 ಪ್ಲಸ್ ಸ್ಕೋರ್ ದಾಖಲಿಸಿದ ತಂಡಗಳ ಪಟ್ಟಿಯಲ್ಲಿ ಎಸ್‌ಆರ್‌ಎಚ್ ಅಗ್ರಸ್ಥಾನದಲ್ಲಿದೆ. ಈ ಋತುವಿನಲ್ಲಿ ಎಸ್‌ಆರ್‌ಎಚ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 277 ರನ್ ಮತ್ತು ಆರ್‌ಸಿಬಿ ವಿರುದ್ಧ 287 ರನ್ ಗಳಿಸಿದೆ.
ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ ಅಬ್ಬರದ ಆಟ: ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಅಬ್ಬರದ ಆಟವಾಡಿದರು. ಪವರ್‌ಪ್ಲೇಯಲ್ಲಿ ಇವರಿಬ್ಬರನ್ನು ತಡೆಯಲು ಡೆಲ್ಲಿ ಬೌಲರ್‌ಗಳಿಗೆ ಸಾಧ್ಯವಾಗಲಿಲ್ಲ. ಈ ಜೋಡಿ 131 ರನ್‌ಗಳ ಬೃಹತ್ ಜೊತೆಯಾಟ ನೀಡಿತು.
ಪವರ್ ಪ್ಲೇಯಲ್ಲಿ ಹೊಸ ದಾಖಲೆ: ಹೆಡ್ ಕೇವಲ 32 ಎಸೆತಗಳಲ್ಲಿ 11 ಬೌಂಡರಿ ಮತ್ತು 6 ಸಿಕ್ಸರ್‌ಗಳೊಂದಿಗೆ 89 ರನ್ ಗಳಿಸಿದರೆ, ಅಭಿಷೇಕ್ ಕೇವಲ 12 ಎಸೆತಗಳಲ್ಲಿ 2 ಬೌಂಡರಿ ಮತ್ತು 6 ಸಿಕ್ಸರ್‌ಗಳೊಂದಿಗೆ 46 ರನ್ ಪೇರಿಸಿದರು. ಇವರಿಬ್ಬರ ಅಬ್ಬರದಾಟದ ಬಲದಿಂದ ಸನ್‌ರೈಸರ್ಸ್ ಪವರ್‌ಪ್ಲೇನಲ್ಲಿ (6 ಓವರ್‌ಗಳಲ್ಲಿ) 125 ರನ್ ಗಳಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿತು!. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಪವರ್ ಪ್ಲೇನಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ತಂಡವೆಂಬ ಹೆಗ್ಗಳಿಕೆ ಸನ್‌ರೈಸರ್ಸ್ ತಂಡದ್ದಾಯಿತು. ಈ ಹಿಂದೆ ಕೆಕೆಆರ್ (2017- 106 ರನ್) ಐಪಿಎಲ್‌ನಲ್ಲಿ ಪವರ್‌ಪ್ಲೇನಲ್ಲಿ ಅತಿ ಹೆಚ್ಚು ಸ್ಕೋರ್ ಗಳಿಸಿದ ತಂಡವಾಗಿತ್ತು. ಇದೀಗ ಈ ದಾಖಲೆಯನ್ನು ಸನ್‌ರೈಸರ್ಸ್ ತಂಡ ಮುರಿದಿದೆ.