ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕುತೂಹಲದ ಘಟ್ಟಕ್ಕೆ ಬಂದು ನಿಂತಿದೆ. ಈವರೆಗೆ 60 ಪಂದ್ಯಗಳು ಮುಕ್ತಾಯವಾಗಿವೆ. ಇಂದಿನ ಸಂಡೇ ಧಮಾಕಾದಲ್ಲಿ ಮೂರು ತಂಡಗಳು ಪ್ಲೇಆಫ್ಗಾಗಿ ಹೋರಾಟ ನಡೆಸಲಿದ್ದರೆ, ಒಟ್ಟು 5 ತಂಡಗಳು ಅರ್ಹತೆ ಗಿಟ್ಟಿಸಿಕೊಳ್ಳುವ ಹಾದಿಯಲ್ಲಿವೆ. ಇದರಲ್ಲಿ ಒಂದು ತಂಡಕ್ಕೆ ಮಾತ್ರ ಅಧಿಕೃತ ಅವಕಾಶ ಸಿಗುತ್ತದೆ.
ಈಗಾಗಲೇ ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಆಫ್ಗೆ ಅರ್ಹತೆ ಪಡೆದ ಮೊದಲ ತಂಡವಾಗಿದೆ. ಎರಡು ತಂಡಗಳು ಟೂರ್ನಿಯಿಂದ ಈಗಾಗಲೇ ಹೊರಬಿದ್ದಿವೆ. ಮುಂಬೈ ಇಂಡಿಯನ್ಸ್ ಪ್ರಥಮವಾಗಿದ್ದರೆ, ಪಂಜಾಬ್ ಕಿಂಗ್ಸ್ ಎರಡನೇ ತಂಡವಾಗಿದೆ. ನಾಲ್ಕು ತಂಡಗಳಿಗೆ ಪ್ಲೇಆಫ್ಗೇರುವ ಅವಕಾಶವಿದೆ. ಇನ್ನು ಮೂರು ಸ್ಥಾನಗಳು ಖಾಲಿ ಇವೆ. ಅದರಲ್ಲಿ ರಾಜಸ್ಥಾನ ರಾಯಲ್ಸ್ಗೆ ಅವಕಾಶ ಹೆಚ್ಚಿದೆ. ಸನ್ರೈಸರ್ಸ್ ಹೈದರಾಬಾದ್ ಕೂಡ ಇನ್ನೆರಡೇ ಹೆಜ್ಜೆ ದೂರದಲ್ಲಿದೆ.
ಯಾವ ತಂಡ, ಎಷ್ಟು ಗೆದ್ದರೆ ಅರ್ಹತೆ ಸಿಗುತ್ತೆ?: ಪಾಯಿಂಟ್ ಪಟ್ಟಿಯ ಆಧಾರದಲ್ಲಿ ಲೆಕ್ಕ ಹಾಕುತ್ತಾ ಬಂದಲ್ಲಿ ಮೊದಲ ಸ್ಥಾನದಲ್ಲಿರುವ ಕೆಕೆಆರ್ ಕ್ವಾಲಿಫೈ ಆಗಿದೆ. ರಾಜಸ್ಥಾನಕ್ಕೆ ಇನ್ನೂ ಮೂರು ಲೀಗ್ ಪಂದ್ಯ ಬಾಕಿ ಇದ್ದು, ಅದರಲ್ಲಿ ಒಂದು ಗೆದ್ದರೆ ಅರ್ಹತೆ ಗಿಟ್ಟಿಸಿಕೊಳ್ಳಲಿದೆ. ಇನ್ನೂ ಮೂರನೇ ಸ್ಥಾನದಲ್ಲಿರುವ ಸನ್ರೈಸರ್ಸ್ ಹೈದರಾಬಾದ್ 14 ಪಾಯಿಂಟ್ಸ್ ಹೊಂದಿದ್ದು, ಇನ್ನೆರಡು ಪಂದ್ಯಗಳು ಬಾಕಿ ಇವೆ. ಇದರಲ್ಲಿ ಒಂದು ಗೆದ್ದರೂ 16 ಅಂಕಗಳೊಂದಿಗೆ ಪ್ಲೇಆಫ್ ಹಂತ ಖಚಿತ.
ನಾಲ್ಕನೇ ಸ್ಥಾನದಿಂದ 8ನೇ ಸ್ಥಾನದವರೆಗೂ ಯಾವುದೇ ತಂಡಕ್ಕೆ ನಾಲ್ಕರ ಘಟ್ಟಕ್ಕೇರುವ ಖಚಿತತೆ ಇಲ್ಲವಾಗಿದೆ. ಎಲ್ಲ ತಂಡಗಳೂ ಸಮಬಲ ಹೋರಾಟ ನಡೆಸುತ್ತಿವೆ. ಅದರಲ್ಲಿ ನಾಲ್ಕನೇ ಕ್ರಮಾಂಕದಲ್ಲಿರುವ ಸಿಎಸ್ಕೆ 12 ಪಾಯಿಂಟ್ಸ್ ಹೊಂದಿದೆ. ಇನ್ನೆರಡು ಲೀಗ್ ಪಂದ್ಯಗಳಿವೆ. ಇದರಲ್ಲಿ ಎರಡನ್ನೂ ಗೆಲ್ಲಲೇಬೇಕಿದೆ. ಒಂದು ಸೋತಲ್ಲಿ ನೆಟ್ ರನ್ರೇಟ್ ಮೇಲೆ ಆಧರಿಸಬೇಕಾಗುತ್ತದೆ.
5 ರಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಕೂಡ 12 ಅಂಕ ಹೊಂದಿದೆ. ಲೀಗ್ನ ಉಳಿದ ಇನ್ನೆರಡು ಪಂದ್ಯ ಗೆಲ್ಲಬೇಕು. ಆರ್ಸಿಬಿ ಮತ್ತು ಲಖನೌ ತಂಡಗಳ ವಿರುದ್ಧ ಆಡಲಿದ್ದು, ಈ ಎರಡೂ ತಂಡಗಳು ರೇಸ್‌ನಲ್ಲಿವೆ. ಒಂದು ಸೋತಲ್ಲಿ ಹಾದಿ ಕಠಿಣವಾಗಿ, ರನ್ರೇಟ್ ಮೊರೆಹೋಗಬೇಕಿದೆ.
6ನೇ ಸ್ಥಾನದಲ್ಲಿರುವ ಲಖನೌ ಸೂಪರ್ಜೈಂಟ್ಸ್ ಪರಿಸ್ಥಿತಿಯೂ ಭಿನ್ನವಾಗಿಲ್ಲ. 12 ಪಾಯಿಂಟ್ಸ್ ಹೊಂದಿದ್ದು, ಎರಡು ಪಂದ್ಯ ಬಾಕಿ ಇದೆ. ಡೆಲ್ಲಿ ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯಗಳಿವೆ. ಒಂದು ಸೋತರೂ ರನ್ರೇಟೇ ಗತಿ.
ಆರ್ಸಿಬಿ ಗೆದ್ದರೂ ರನ್ರೇಟ್ ಮುಖ್ಯ: 10 ಅಂಕಗಳಿಂದ 7ನೇ ಸ್ಥಾನದಲ್ಲಿರುವ ಆರ್ಸಿಬಿ ಉಳಿದ 2 ಲೀಗ್ ಪಂದ್ಯ ಗೆದ್ದರೂ ರನ್ರೇಟ್ ಬಹುಮುಖ್ಯ. 14 ಪಾಯಿಂಟ್ಸ್ ಗಳಿಸಿದರೂ, ಸಿಎಸ್ಕೆ, ಡೆಲ್ಲಿ ಹಾಗೂ ಲಖನೌನ ರನ್ರೇಟ್ ಮೇಲೆ ಅರ್ಹತೆ ಆಧರಿಸಿದೆ. ಸದ್ಯಕ್ಕೆ ಡೆಲ್ಲಿ, ಲಖನೌ ರನ್ರೇಟ್ ಆರ್ಸಿಬಿಗಿಂತ ಕೆಳಗಿದೆ.
8ನೇ ಕ್ರಮಾಂಕದಲ್ಲಿರುವ ಗುಜರಾತ್ ಟೈಟಾನ್ಸ್ ಹೆಚ್ಚೂ ಕಡಿಮೆ ಟೂರ್ನಿಯಿಂದ ಒಂದು ಕಾಲು ಹೊರಗಿಟ್ಟಿದೆ. ಕಾರಣ, ಉಳಿದ ಇನ್ನೆರಡು ಪಂದ್ಯಗಳು ಕೆಕೆಆರ್ ಮತ್ತು ಎಸ್ಆರ್ಹೆಚ್ ಎದುರು ಆಡಬೇಕು. ಟೂರ್ನಿಯಲ್ಲಿ ಬಲಿಷ್ಠವಾಗಿರುವ ತಂಡದೆದುರು ಗೆಲುವು ಕಷ್ಟಾತಿಕಷ್ಟ. ಇದರಲ್ಲಿ ಒಂದು ಸೋತರೂ ಗುಡ್ಬೈ ಹೇಳಲೇಬೇಕು.
ಇದನ್ನೂ ಓದಿ: ಐಪಿಎಲ್ನಲ್ಲಿಂದು ಡಬಲ್ ಧಮಾಕಾ: ಪ್ಲೇಆಫ್ನಲ್ಲಿ ಉಳಿಯೋಕೆ ಆರ್ಸಿಬಿ, ಡೆಲ್ಲಿ, ಚೆನ್ನೈ ಹೋರಾಟ - IPL Super Sunday