ಜೈಪುರ (ರಾಜಸ್ಥಾನ): ಜೈಪುರದ ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ಅನ್ನು 12 ರನ್ಗಳಿಂದ ಮಣಿಸಿತು. ರಾಜಸ್ಥಾನ ಮೊದಲು ಬ್ಯಾಟಿಂಗ್ ಮಾಡಿ 185 ರನ್ ಗಳಿಸಿತು. ರಿಯಾನ್ ಪರಾಗ್ 45 ಎಸೆತಗಳಲ್ಲಿ 84 ರನ್ ಪೇರಿಸಿದರು.
ಈ ಗುರಿ ಬೆನ್ನಟ್ಟಿದ ಡೆಲ್ಲಿ ತಂಡದ ರಿಷಬ್ ಪಂತ್ ಹಾಗೂ ಡೇವಿಡ್ ವಾರ್ನರ್ 67 ರನ್‌ಗಳ ಜೊತೆಯಾಟ ನೀಡಿ ಗೆಲುವಿನ ಭರವಸೆ ಮೂಡಿಸಿದರು. ಆದರೆ, ಕೊನೆಯ 5 ಓವರ್‌ಗಳಲ್ಲಿ ಗೆಲುವಿಗೆ 66 ರನ್‌ಗಳ ಅಗತ್ಯವಿತ್ತು. ಈ ಸಂದರ್ಭದಲ್ಲಿ ಯಾವುದೇ ಬ್ಯಾಟರ್‌ಗಳು ನೆರವಿಗೆ ಬರಲಿಲ್ಲ. ಆದ್ದರಿಂದ ಡೆಲ್ಲಿ 12 ರನ್‌ಗಳ ಅಂತರದಿಂದ ಸೋಲು ಅನುಭವಿಸಿತು.
ರಾಜಸ್ಥಾನ ಇನಿಂಗ್ಸ್: ರಾಜಸ್ಥಾನ ರಾಯಲ್ಸ್ ಬ್ಯಾಟರ್‌ಗಳು ಆರಂಭದಲ್ಲಿ ಎಡವಿದರು. ತಂಡ 36 ರನ್ ಗಳಿಸುವಷ್ಟರಲ್ಲೇ ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್ ಮತ್ತು ಸಂಜು ಸ್ಯಾಮ್ಸನ್ ಅವರ ವಿಕೆಟ್ ಪತನವಾಗಿತ್ತು. ಈ ವೇಳೆ ಕಣಕ್ಕಿಳಿದ ರಿಯಾನ್ ಪರಾಗ್ ನಿಧಾಗತಿ ಬ್ಯಾಟ್ ಬೀಸಲಾರಂಭಿಸಿದರು. ನಂತರದಲ್ಲಿ ಹೊಡಿ ಬಡಿ ಆಟಕ್ಕಿಳಿದ ಅವರು ರನ್ ರೇಟ್ ಹೆಚ್ಚಿಸುತ್ತಲೇ ಸಾಗಿದರು. ಪರಾಗ್ 45 ಎಸೆತಗಳಲ್ಲಿ 7 ಬೌಂಡರಿ ಹಾಗೂ 6 ಸಿಕ್ಸರ್ ಒಳಗೊಂಡು 84 ರನ್ ಗಳಿಸಿದರು.
ರವಿಚಂದ್ರನ್ ಅಶ್ವಿನ್ 19 ಎಸೆತಗಳಲ್ಲಿ 3 ಸಿಕ್ಸರ್ ಬಾರಿಸಿ 29 ರನ್ ಸೇರಿಸಿದರು. ಕೊನೆಯಲ್ಲಿ ಧ್ರುವ್ ಜುರೆಲ್ 12 ಎಸೆತಗಳಲ್ಲಿ 20 ರನ್ ಮತ್ತು ಶಿಮ್ರಾನ್ ಹೆಟ್ಮೆಯರ್ 7 ಎಸೆತಗಳಲ್ಲಿ 14 ರನ್ ಕೊಡುಗೆ ನೀಡಿದರು. ಅಂತಿಮ 5 ಓವರ್‌ಗಳಲ್ಲಿ ಡೆಲ್ಲಿ ಬೌಲರ್‌ಗಳು ಭಾರೀ ನಿರಾಸೆ ಅನುಭವಿಸಿದರು. ಮುಖೇಶ್ ಕುಮಾರ್ ಕೊನೆಯ 2 ಓವರ್‌ಗಳಲ್ಲಿ 30 ರನ್ ಮತ್ತು ಆನ್ರಿಚ್ ನಾರ್ಟ್ಜೆ ಕೊನೆಯ ಓವರ್‌ನಲ್ಲಿ 25 ರನ್ ಗಳಿಸಿದರು. ಇದರಿಂದಾಗಿ ಆರ್ಆರ್ ತಂಡ 185 ರನ್ ಕಲೆ ಹಾಕಿತು.
ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಮೊದಲ 2 ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿತು. 30 ರನ್ ಆಗುವಷ್ಟರಲ್ಲಿ ಮಿಚೆಲ್ ಮಾರ್ಷ್ ಮತ್ತು ರಿಕಿ ಭುಯಿ ಪೆವಿಲಿಯನ್ಗೆ ಮರಳಿದರು. ಡೇವಿಡ್ ವಾರ್ನರ್ 34 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ 49 ರನ್ ಗಳಿಸಿದರು. ನಾಯಕ ರಿಷಬ್ ಪಂತ್ 26 ಎಸೆತಗಳಲ್ಲಿ 28 ರನ್ ಗಳಿಸಿದರು. ಆದರೆ, ಇದು ತಂಡವನ್ನು ಗೆಲುವಿನ ದಡ ಸೇರಿಸಲು ನೆರವಾಗಲಿಲ್ಲ.
ಇದನ್ನೂ ಓದಿ: ಮುಂಬೈ ಇಂಡಿಯನ್ಸ್ ಪರ 100 ಸಿಕ್ಸರ್ ಬಾರಿಸಿದ ಹಾರ್ದಿಕ್ ಪಾಂಡ್ಯ; ಹೊಸ ದಾಖಲೆ - IPL 2024