ಅಹಮದಾಬಾದ್(ಗುಜರಾತ್): ಐಪಿಎಲ್ 2024ರ ಟೂರ್ನಿಯ ನಿನ್ನೆ(ಭಾನುವಾರ) ನಡೆದ 2ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಗುಜರಾತ್ ಟೈಟಾನ್ಸ್ 6 ರನ್‌ಗಳಿಂದ ಬಗ್ಗು ಬಡಿಯಿತು. ರೋಹಿತ್ ಮತ್ತು ಬ್ರೆವಿಸ್ ಕ್ರೀಸ್‌ನಲ್ಲಿ ನಿಂತು ಆಕ್ರಮಣಕಾರಿ ಆಟವಾಡಿದರೂ ಗೆಲುವು ದಕ್ಕಲಿಲ್ಲ. ಗುಜರಾತ್ ಟೈಟಾನ್ಸ್ ತನ್ನ ಬಲಿಷ್ಠ ಬೌಲಿಂಗ್ ಬಲದ ಮೂಲಕ ಮುಂಬೈಯನ್ನು ಸೋಲಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿತು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಗುಜರಾತ್ 6 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಲಷ್ಟೇ ಶಕ್ತವಾಯಿತು. ಸಾಯಿ ಸುದರ್ಶನ್ (39 ಎಸೆತಗಳಲ್ಲಿ 45 ರನ್, 3x4, 1x6) ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಶುಭಮನ್ ಗಿಲ್ (22 ಎಸೆತಗಳಲ್ಲಿ 31 ರನ್, 3x4, 1x6) ಗಳಿಸಿದರು. ರಾಹುಲ್ ತೆವಾಟಿಯಾ (22), ವೃದ್ಧಿಮಾನ್ ಸಹಾ (19), ಒಮರ್ಜಾಯ್ (17) ಮತ್ತು ಮಿಲ್ಲರ್ (12) ರನ್ ಗಳಿಸಿದರು. ಇನಿಂಗ್ಸ್ ಅಂತ್ಯಕ್ಕೆ ಆರು ವಿಕೆಟ್ ನಷ್ಟಕ್ಕೆ 168 ರನ್ ಪೇರಿಸಿತು.
ಮುಂಬೈ ಬೌಲರ್‌ಗಳಲ್ಲಿ ಜಸ್ಪ್ರೀತ್ ಬುಮ್ರಾ 3, ಜೆರಾಲ್ಡ್ ಕೋಟ್ಜಿ 2 ಮತ್ತು ಪಿಯೂಷ್ ಚಾವ್ಲಾ 1 ವಿಕೆಟ್ ಪಡೆದರು.
ಇದಕ್ಕುತ್ತರವಾಗಿ ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 9 ವಿಕೆಟ್‌ಗೆ 162 ರನ್ ಗಳಿಸಲಷ್ಟೇ ಸಾಧ್ಯವಾಯಿತು. ರೋಹಿತ್ ಶರ್ಮಾ (29 ಎಸೆತಗಳಲ್ಲಿ 43 ರನ್, 7x4, 1x6) ಮತ್ತು ಬ್ರೆವಿಸ್ (38 ಎಸೆತಗಳಲ್ಲಿ 46 ರನ್, 2x4, 3x6) ಉತ್ತಮ ಪ್ರದರ್ಶನ ನೀಡಿದರು. ಒಂದು ಹಂತದಲ್ಲಿ ಮುಂಬೈ ಜಯಭೇರಿ ಬಾರಿಸಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ನಂತರ ಅದು ಸಾಧ್ಯವಾಗಲಿಲ್ಲ. ಇದಕ್ಕೂ ಮುನ್ನ ಇಶಾನ್ ಕಿಶನ್ ಒಂದೂ ರನ್ ಮಾಡದೆ ಔಟಾದರು.
ಗುಜರಾತ್ ಪರ ಅಜ್ಮತುಲ್ಲಾ (2/27), ಮೋಹಿತ್ ಶರ್ಮಾ (2/32), ಸ್ಪೆನ್ಸರ್ ಜಾನ್ಸನ್ (2/25) ಮತ್ತು ಉಮೇಶ್ (2/31) ವಿಕೆಟ್ ಪಡೆದರು.
ಇದನ್ನೂ ಓದಿ: ಪೂರನ್, ಕೆಎಲ್ ರಾಹುಲ್ ಹೋರಾಟ ವ್ಯರ್ಥ; ಆರ್ಆರ್ ಬಿಗಿ ದಾಳಿಗೆ ತತ್ತರಿಸಿದ ಲಕ್ನೋ - Royals win over Super Giants