ನವದೆಹಲಿ: ಐಪಿಎಲ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮೆಂಟರ್ ಆಗಿರುವ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಗಡುಸು ವ್ಯಕ್ತಿತ್ವ ಮತ್ತು ಮಾತುಗಳಿಗೆ ಜನಜನಿತ. ಅವರು ಕ್ರಿಕೆಟ್ ಆಡುತ್ತಿದ್ದಾಗ ಆಕ್ರಮಣಕಾರಿ ಮನೋಭಾವದಿಂದಾಗಿಯೇ ಮೈದಾನದಲ್ಲೇ ಕಿತ್ತಾಡಿಕೊಂಡ ಹಲವು ಉದಾಹರಣೆಗಳಿವೆ.
ಐಪಿಎಲ್ನ ಕಳೆದ ಸೀಸನ್ನಲ್ಲಿ ಲಖನೌ ಸೂಪರ್ಜೈಂಟ್ಸ್ ತಂಡದ ಮೆಂಟರ್ ಆಗಿದ್ದಾಗ ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಜೊತೆ ತಮ್ಮ ಆಟಗಾರನ ಪರವಾಗಿ ನಿಂತು ಮೈದಾನದಲ್ಲೇ ರೇಗಾಡಿದ್ದರು. ಇದು ದೊಡ್ಡ ಸದ್ದು ಮಾಡಿತ್ತು.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲೂ ಅವರು ಪಾಕಿಸ್ತಾನದ ಆಟಗಾರ ಶಾಹೀದ್ ಆಫ್ರಿದಿ ಜೊತೆಗೆ ಮೈದಾನದಲ್ಲೇ ಮುಖಾಮುಖಿಯಾಗಿದ್ದರು. ಅವರ ಕೋಪ ಮತ್ತು ಗಡುಸು ಮನೋಭಾವ ಕ್ರಿಕೆಟ್ನಿಂದ ದೂರವಾದರೂ ಅವರನ್ನು ಅದು ಬಿಟ್ಟಿಲ್ಲ. ಡಗೌಟ್ನಲ್ಲಿ ಕುಳಿತಾಗಲೂ ಅವರು ಹೆಸರಿನಂತೆಯೇ 'ಗಂಭೀರ'ವಾಗಿಯೇ ಕುಳಿತಿರುತ್ತಾರೆ.
'ಗಂಭೀರ'ತೆ ಬಿಟ್ಟರೆ ಲವ್ ಪ್ರಪೋಸ್ ಮಾಡ್ತೀನಿ: ಕೆಕೆಆರ್ ತಂಡದ ಅಭಿಮಾನಿಯೊಬ್ಬಳು ಕ್ರೀಡಾಂಗಣದಲ್ಲಿ ವಿಚಿತ್ರ ಬರಹವುಳ್ಳ ಪೋಸ್ಟರ್ ಅನ್ನು ಪ್ರದರ್ಶಿಸಿದ್ದಾಳೆ. ಅದರಲ್ಲಿ ಆ ಹುಡುಗಿ ಗಂಭೀರ್‌ಗೆ ನಗುವಂತೆ ಕಂಡಿಷನ್ ಹಾಕಿದ್ದಾಳೆ. "ಗೌತಮ್ ಗಂಭೀರ್ ನಗುವವರೆಗೂ ನಾನು ನನ್ನ ಕ್ರಶ್ಗೆ ಲವ್ ಪ್ರಪೋಸ್ ಮಾಡಲ್ಲ" ಎಂದು ಬರೆದಿದ್ದಾಳೆ. ಅದರ ಜೊತೆಗೆ ಗೌತಮ್ ಗಂಭೀರವಾಗಿರುವ ಚಿತ್ರವೂ ಇದೆ. ಹುಡುಗಿಯ ಈ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ನೆಟ್ಟಿಗರು ಗೌತಮ್ಗೆ ಒಮ್ಮೆ ನಕ್ಕು ಅವಳ ಆಸೆಯನ್ನು ಪೂರೈಸಿ ಎಂದು ಕೋರಿದ್ದಾರೆ.
ಅಭಿಮಾನಿಯ ಆಸೆಗೆ ಮಣಿದು ನಕ್ಕ ಗಂಭೀರ್: ಈ ಪೋಸ್ಟ್‌ಗೆ ಇನ್ಸ್ಟಾಗ್ರಾಮ್ನಲ್ಲಿ ಉತ್ತರಿಸಿರುವ ಗೌತಮ್ ಗಂಭೀರ್, ಆಕೆಯ ಬೇಡಿಕೆಯ ಚಿತ್ರವನ್ನು ಚಿತ್ರದ ಜೊತೆಗೆ ತಾವು ನಗುತ್ತಿರುವ ಚಿತ್ರವುಳ್ಳ ಫೋಟೋವನ್ನು ಹಂಚಿಕೊಂಡಿದ್ದಾರೆ. ಜೊತೆಗೆ "ಈಗ ನೀವು ಹೋಗಿ" ಎಂದು ಬರೆದುಕೊಂಡಿದ್ದಾರೆ. ಅಂದರೆ, ತಾವು ನಗುತ್ತಿದ್ದು ನಿಮ್ಮ ಪ್ರಿಯಕರನಿಗೆ ಪ್ರಪೋಸ್ ಮಾಡಿ ಎಂದು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಗೌತಮ್ ಗಂಭೀರ್ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಗಂಭೀರ್ ಅವರ ಈ ಪೋಸ್ಟ್‌ಗೆ ಜನರು ಸಾಕಷ್ಟು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಒಬ್ಬ ಬಳಕೆದಾರ ಕಾಮೆಂಟ್ ಬಾಕ್ಸ್‌ನಲ್ಲಿ ಹೀಗೆ ಬರೆದಿದ್ದು, "ಆರ್ಸಿಬಿ ಟ್ರೋಫಿ ಗೆಲ್ಲುವವರೆಗೆ ನಾನು ನಿನ್ನ ಪ್ರಪೋಸಲ್ ಸ್ವೀಕರಿಸಲ್ಲ ಎಂದು ಆ ಹುಡುಗಿಯ ಪ್ರಿಯಕರ ಹೇಳಿಬಿಟ್ಟರೆ ಹೇಗೆ ಎಂದು ಕಾಲೆಳೆದಿದ್ದಾರೆ.
ಇದನ್ನೂ ಓದಿ: ಟಿ20 ಕ್ರಿಕೆಟ್ನಲ್ಲಿ ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ ದಾಖಲೆ ಮುರಿದ ಪಾಕಿಸ್ತಾನದ ಬಾಬರ್ ಅಜಂ: ಏನದು? - Babar Azam