Blind T20 World Cup: ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಹದಗೆಟ್ಟು ಸುಮಾರು ವರ್ಷಗಳೆ ಕಳೆದಿವೆ. ಇದರ ಪರಿಣಾಮ ಕ್ರಿಕೆಟ್ ಮೇಲೂ ಬೀರಿದೆ. 2008ರ ಏಷ್ಯಾಕಪ್ ಬಳಿಕ ಪಾಕಿಸ್ತಾನದಲ್ಲಿ ನಡೆದ ಯಾವುದೇ ಪಂದ್ಯಾವಳಿಗಳಲ್ಲಿ ಟೀಂ ಇಂಡಿಯಾ ಒಮ್ಮೆಯೂ ಭಾಗಿಯಾಗಿಲ್ಲ. ಅಲ್ಲದೇ ಪಾಕ್ ಆತಿಥ್ಯ ವಹಿಸಿಕೊಳ್ಳಲಿರುವ 2025ರ ಚಾಂಪಿಯನ್ಸ್ ಟ್ರೋಫಿ ಸೇರಿ ಯಾವುದೇ ಟೂರ್ನಿಗಳನ್ನು ಆಡಲು ಟೀಂ ಇಂಡಿಯಾ ಅಲ್ಲಿಗೆ ತೆರಳಲ್ಲ ಎಂದೂ ಈಗಾಗಲೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಸ್ಪಷ್ಟನೆ ನೀಡಿದೆ. ಇದೀಗ ಪಾಕ್ಗೆ ಮತ್ತೊಂದು ಶಾಕ್ ನೀಡಿದೆ.
ಹೌದು, ಇದೇ ತಿಂಗಳು ನವೆಂಬರ್ 23 ರಿಂದ ಡಿಸೆಂಬರ್ 3 ರವರೆಗೆ ಪಾಕಿಸ್ತಾನದಲ್ಲಿ ಅಂಧರ ಟಿ20 ವಿಶ್ವಕಪ್ ನಡೆಯಲಿದೆ. ಕಳೆದ ಟಿ20ಯಲ್ಲಿ ವಿಶ್ವಚಾಂಪಿಯನ್ ಆಗಿದ್ದ ಅಂಧರ ಟೀಂ ಇಂಡಿಯಾ ಈ ಬಾರಿಯೂ ಕಪ್ ಎತ್ತಿ ಹಿಡಿಯುವ ಫೆವರೀಟ್ ತಂಡವಾಗಿತ್ತು. ಆದರೆ ಪಾಕ್ನಲ್ಲಿ ವಿಶ್ವಕಪ್ ಆಯೋಜಿಸಿದ್ದರಿಂದ ವಿದೇಶಾಂಗ ಸಚಿವಾಲಯ ಹಾಲಿ ಚಾಂಪಿಯನ್ ಟೀಂ ಇಂಡಿಯಾಗೆ ಪಾಕ್ಗೆ ಕಳುಹಿಸಲು ನಿರಾಕರಿಸಿದೆ. ಈ ಹಿನ್ನೆಲೆ ಭಾರತ ತಂಡ ಟೂರ್ನಿಯಿಂದಲೇ ಹಿಂದೆ ಸರಿದಿದೆ.
ಈ ಮೊದಲ ಭಾರತ ಕ್ರಿಕೆಟ್ ತಂಡವು ಪಾಕಿಸ್ತಾನಕ್ಕೆ ಪ್ರಯಾಣಿಸಲು ಕ್ರೀಡಾ ಸಚಿವಾಲಯ ಒಪ್ಪಿಗೆ ಸೂಚಿಸಿತ್ತು. ಆದರೆ ಭದ್ರತ ದೃಷ್ಟಿಯಿಂದಾಗಿ ಕೇಂದ್ರ ವಿದೇಶಾಂಗ ಸಚಿವಾಲಯ ಭಾರತ ತಂಡವನ್ನು ಅಲ್ಲಿಗೆ ಕಳುಹಿಸಲು ನಿರಾಕರಿದೆ. ಈ ಬಗ್ಗೆ ಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶೈಲೇಂದ್ರ ಯಾದವ್ ಬಹಿರಂಗಪಡಿಸಿದ್ದಾರೆ. ಇದರೊಂದಿಗೆ ಈ ಬಾರಿ ಭಾರತ ತಂಡವಿಲ್ಲದೆ ಅಂಧರ ವಿಶ್ವಕಪ್ ಟೂರ್ನಿ ನಡೆಯಲಿದೆ.
3 ಬಾರಿ ಚಾಂಪಿಯನ್: ಭಾರತದಲ್ಲಿ ನಡೆದ ಹಿಂದಿನ ಮೂರು ಆವೃತ್ತಿಗಳಲ್ಲಿ (2012, 2017 ಮತ್ತು 2022) ಅಂಧರ T20 ವಿಶ್ವಕಪ್ನಲ್ಲಿ ಭಾರತವು ವಿಜಯಶಾಲಿಯಾಗಿ ಹೊರಹೊಮ್ಮಿತ್ತು. ಭಾರತ ಮೊದಲ ಎರಡು ಆವೃತ್ತಿಯ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿತು ಮತ್ತು 2022ರಲ್ಲಿ ಬಾಂಗ್ಲಾದೇಶವನ್ನು ಮಣಿಸಿ ಚಾಂಪಿಯನ್ ಆಗಿತ್ತು.
ಏತನ್ಮಧ್ಯೆ, ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೂ ಪಾಕಿಸ್ತಾನ ಆತಿಥ್ಯ ವಹಿಸಿಕೊಂಡಿದೆ. ಆದರೆ, ತಮ್ಮ ತಂಡ ನೆರೆಯ ದೇಶಕ್ಕೆ ಪ್ರವಾಸ ಕೈಗೊಳ್ಳುವುದಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಈಗಾಗಲೇ ಐಸಿಸಿಗೆ ತಿಳಿಸಿದೆ. ಅಲ್ಲದೇ ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲು ತಿಳಿಸಿದೆ. ಆದರೆ ಪಾಕ್ ಮಂಡಳಿ ಇದಕ್ಕೆ ಒಪ್ಪುತ್ತಿಲ್ಲ. ಇದರ ನಡುವೆಯೇ ಅಂಧರ ವಿಶ್ವಕಪ್ ನಿಂದ ಭಾರತ ಹಿಂದೆ ಸರಿದಿದ್ದು, ಒಂದು ವೇಳೆ ಪಾಕ್ ಹೈಬ್ರಿಡ್ ಮಾದರಿಗೆ ಒಪ್ಪಿಗೆ ಸೂಚಿಸದಿದ್ದರೇ ಚಾಂಪಿಯನ್ಸ್ ಟ್ರೋಫಿಯಿಂದಲೂ ಹಿಂದೆ ಸರಿಯುವುದಾಗಿ ಬಿಸಿಸಿಐ ಸ್ಪಷ್ಟ ಸಂದೇಶ ರವಾನಿಸಿದೆ.
ಇದನ್ನೂ ಓದಿ: ಬಾರ್ಡರ್ - ಗವಾಸ್ಕರ್ ಟ್ರೋಫಿಯನ್ನು ಆಶಸ್ಗೆ ಹೋಲಿಸಿದ ರಿಕಿ ಪಾಂಟಿಂಗ್