ಬೆಂಗಳೂರು: ಭಾರತ-ನ್ಯೂಜಿಲ್ಯಾಂಡ್ ನಡುವಿನ ಮೊದಲ ಪಂದ್ಯದ ಮೊದಲ ದಿನ ಮಳೆರಾಯನಿಗೆ ಅರ್ಪಿತವಾಗಿದೆ. ಸತತವಾಗಿ ಮಳೆ ಬೀಳುತ್ತಿರುವ ಕಾರಣ ಮೊದಲ ದಿನದಾಟವನ್ನು ಟಾಸ್ ಇಲ್ಲದೇ ಮುಗಿಸಲಾಯಿತು. ಮೈದಾನದಲ್ಲಿ ನೀರು ನಿಂತಿದ್ದರಿಂದ ಮಧ್ಯಾಹ್ನ 2.30ಕ್ಕೆ ಅಂಪೈರ್ಗಳು ದಿನದಾಟವನ್ನು ರದ್ದು ಮಾಡಿದರು.
ಕಳೆದ ಎರಡು ದಿನಗಳಿಂದ ಬಿಟ್ಟೂಬಿಡದೆ ಸುರಿಯುತ್ತಿರುವ ಜಡಿಮಳೆ ಬೆಂಗಳೂರನ್ನು ಹೈರಾಣಾಗಿಸಿದೆ. ಎರಡೂವರೆ ವರ್ಷಗಳ ನಂತರ ಟೆಸ್ಟ್ ಪಂದ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಿತ್ತು. ಉಭಯ ತಂಡಗಳ ನಡುವಿನ ಹಣಾಹಣಿಗೆ ಅಭಿಮಾನಿಗಳು ಕಾತರದಿಂದ ಕಾದಿದ್ದರು. ಆದರೆ, ವರುಣರಾಯ ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ.
ಎರಡೂ ತಂಡಗಳು ಆಟಗಾರರು ಹೆಚ್ಚು ಸಮಯವನ್ನು ತಮ್ಮ ಡ್ರೆಸ್ಸಿಂಗ್ ರೂಮಿನಲ್ಲೇ ಕಳೆದರು. ನಾಯಕರಾದ ರೋಹಿತ್ ಶರ್ಮಾ, ಟಾಮ್ ಲ್ಯಾಥಮ್ ಆಗಾಗ್ಗೆ ಹೊರಬಂದು ಮೈದಾನವನ್ನು ವೀಕ್ಷಿಸುತ್ತಿದ್ದರು. ಅಂಪೈರ್ಗಳು ಕೂಡ ಪದೇ ಪದೆ ಮೈದಾನಕ್ಕಿಳಿದು ವೀಕ್ಷಿಸುತ್ತಿದ್ದರು. ಆದರೆ, ಯಾವುದೇ ಹಂತದಲ್ಲಿಯೂ ಮಳೆ ನಿಲ್ಲದ ಕಾರಣ, ಪಿಚ್ ಮೇಲೆ ಹಾಕಿರುವ ಹೊದಿಕೆಯನ್ನು ತೆಗೆಯಲಾಗಲಿಲ್ಲ.
🚨 Update from Bengaluru 🚨
— BCCI (@BCCI) October 16, 2024
Day 1 of the 1st #INDvNZ Test has been called off due to rain.
Toss to take place at 8:45 AM IST on Day 2
Start of Play: 9:15 AM IST #TeamIndia | @IDFCFIRSTBank pic.twitter.com/RzmBvduPqr
ಬುಧವಾರ ಇಡೀ ದಿನ ತುಂತುರು ಮಳೆ ಸುರಿದಿದ್ದು, ಮಂದ ಬೆಳಕು ಆವರಿಸಿಕೊಂಡಿತ್ತು. ಕ್ರೀಡಾಂಗಣವು ವಿಶ್ವದರ್ಜೆಯ ಸಬ್ಏರ್ ಸಿಸ್ಟಮ್ ಹೊಂದಿದ್ದರೂ, ಜಿಟಿಜಿಟಿ ಮಳೆ ನೀರನ್ನು ಹೀರಿಕೊಳ್ಳಲು ಸಾಧ್ಯವಿಲ್ಲ ಎಂದು ಪಿಚ್ ಕ್ಯುರೇಟರ್ ಖಚಿತಪಡಿಸಿದರು. ಇದರಿಂದ ಪಂದ್ಯದ ಮೊದಲ ದಿನದಾಟವನ್ನು ರದ್ದು ಮಾಡಲು ಅಂಪೈರ್ಗಳು ನಿರ್ಧರಿಸಿದರು. ಎರಡನೇ ದಿನವಾದ ಗುರುವಾರ ಬೆಳಗ್ಗೆ 8:45ಕ್ಕೆ ಟಾಸ್ ನಿಗದಿಪಡಿಸಲಾಗಿದೆ. ಹವಾಮಾನ ತಿಳಿಯಾದಲ್ಲಿ ಆಟ ಬೆಳಗ್ಗೆ 9:15ಕ್ಕೆ ಪ್ರಾರಂಭವಾಗುವ ನಿರೀಕ್ಷೆಯಿದೆ.
ನಾಳೆಯ ಹವಾಮಾನ ವರದಿ: ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಮುಂದಿನ ಐದು ದಿನ ನಗರದಲ್ಲಿ ಮಳೆ ಬೀಳುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಈಗಾಗಲೇ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಶಾಲೆಗಳಿಗೆ ರಜೆ ನೀಡಲಾಗಿದೆ. ಕೆಲ ಕಚೇರಿಗಳು ಸಿಬ್ಬಂದಿಗೆ ಮನೆಯಿಂದಲೇ ಕೆಲಸಕ್ಕೆ ಸೂಚಿಸಿವೆ. ಹೀಗಾಗಿ, ಮುಂದಿನ ದಿನದಾಟಗಳ ಮೇಲೂ ವರುಣನ ಅವಕೃಪೆ ಮುಂದುವರಿಯುವ ಸಾಧ್ಯತೆ ಇದೆ.
ಇದನ್ನೂ ಓದಿ: ಮಳೆ ನಿಂತ ಕೆಲ ನಿಮಿಷಗಳಲ್ಲೇ ಪಂದ್ಯಕ್ಕೆ ರೆಡಿ; ಚಿನ್ನಸ್ವಾಮಿಯಲ್ಲಿದೆ ಅತ್ಯಾಧುನಿಕ 'ಸಬ್ಏರ್' ತಂತ್ರಜ್ಞಾನ