ಹೈದರಾಬಾದ್: ಭಾರತ-ಬಾಂಗ್ಲಾದೇಶದ ನಡುವೆ ನಾಳೆ ಎರಡನೇ ಟಿ20 ಪಂದ್ಯ ನಡೆಯಲಿದೆ. 3 ಪಂದ್ಯಗಳ ಚುಟುಕು ಸರಣಿಯಲ್ಲಿ ಈಗಾಗಲೇ ಮೊದಲ ಪಂದ್ಯ ಗೆದ್ದಿರುವ ಭಾರತ ಮುಂದಿನ ಪಂದ್ಯದ ಮೇಲೆ ಕಣ್ಣಿಟ್ಟಿದೆ. ಮತ್ತೊಂದೆಡೆ, ಟೆಸ್ಟ್ ಸರಣಿಯನ್ನು ಕೈಚೆಲ್ಲಿರುವ ಬಾಂಗ್ಲಾ ಮೊದಲ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದೆ. ಎರಡನೇ ಪಂದ್ಯ ಗೆದ್ದು ಸರಣಿ ಸಮಬಲ ಸಾಧಿಸಲು ನಜ್ಮುಲ್ ಶಾಂಟೋ ಪಡೆ ಯೋಜನೆ ರೂಪಿಸಿದೆ.
ಶುಭಮನ್ ಗಿಲ್, ರಿಷಭ್ ಪಂತ್, ಜಸ್ಪ್ರೀತ್ ಬುಮ್ರಾ ಅವರಂತಹ ಪ್ರಮುಖ ಆಟಗಾರರ ಅನುಪಸ್ಥಿತಿಯ ಹೊರತಾಗಿಯೂ, ಭಾರತ ಮೊದಲ ಟಿ20I ಅನ್ನು ಸುಲಭವಾಗಿ ಗೆದ್ದುಕೊಂಡಿತು. ಇದೀಗ ತಂಡ ಆರಂಭಿಕ ಬ್ಯಾಟರ್ ಆದ ಅಭಿಷೇಕ್ ಶರ್ಮಾ ಅವರಿಂದ ಬೃಹತ್ ಇನ್ನಿಂಗ್ಸ್ ನಿರೀಕ್ಷೆಯಲ್ಲಿದೆ. ಒಮ್ಮೆ ಈ ಬ್ಯಾಟರ್ ಸಿಡಿದೆದ್ದರೆ ಟೀಂ ಇಂಡಿಯಾ ಬೃಹತ್ ಮೊತ್ತ ಕಲೆಹಾಕಲಿದೆ. ಮೊದಲ ಪಂದ್ಯದಲ್ಲಿ ಅಭಿಷೇಕ್ ಶರ್ಮಾ 7 ಎಸೆತಗಳಲ್ಲಿ 16 ರನ್ ಗಳಿಸಿ ರನ್ಔಟ್ ಆಗಿದ್ದರು.
ಎರಡನೇ ಟಿ20 ಪಂದ್ಯದಲ್ಲಿ ಸ್ಯಾಮ್ಸನ್ ಜೊತೆಗೂಡಿ ಅಭಿಷೇಕ್ ಆಕ್ರಮಣಕಾರಿ ಆಟವಾಡಿ ಉತ್ತಮ ಆರಂಭ ನೀಡಿದರೆ, ನಂತರ ಕ್ರೀಸ್ಗೆ ಬರುವ ಆಟಗಾರರಿಗೆ ಮುಕ್ತವಾಗಿ ಆಡುವ ಅವಕಾಶ ಸಿಗಲಿದೆ. ಉಳಿದಂತೆ, ಟೀಂ ಇಂಡಿಯಾ ಮುಂದಿನ ಪಂದ್ಯದಲ್ಲೂ ಯಾವುದೇ ಬದಲಾವಣೆಯಿಲ್ಲದೇ ಮೈದಾನಕ್ಕಿಳಿಯುವ ಸಾಧ್ಯತೆ ಇದೆ.
ಬೌಲಿಂಗ್ನಲ್ಲಿ ಯುವ ವೇಗಿ ಮಯಾಂಕ್ ಯಾದವ್ ಮೊದಲ ಪಂದ್ಯದಲ್ಲೇ ಉತ್ತಮ ಪ್ರದರ್ಶನ ತೋರಿದರು. ಎರಡನೇ ಟಿ20ಯಲ್ಲೂ ಇದೇ ಗತಿಯಲ್ಲಿ ಬೌಲಿಂಗ್ ಮುಂದುವರೆಸಿದರೆ ಬಾಂಗ್ಲಾ ಬ್ಯಾಟ್ಸ್ಮನ್ಗಳು ತತ್ತರಿಸಬಹುದು. ಮೂರು ವರ್ಷಗಳ ನಂತರ ತಂಡಕ್ಕೆ ಮರಳಿರುವ ಸ್ಪಿನ್ನರ್ ವರುಣ್ ಚಕ್ರವರ್ತಿ ಮೊದಲ ಪಂದ್ಯದಲ್ಲಿ 3 ವಿಕೆಟ್ ಪಡೆಯುವ ಮೂಲಕ ಉತ್ತಮ ಪ್ರದರ್ಶನ ನೀಡಿದರು.
ಭಾರತ- ಸಂಭಾವ್ಯ ತಂಡ: ಸಂಜು ಸ್ಯಾಮ್ಸನ್(ವಿ.ಕೀ), ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್(ನಾಯಕ), ನಿತೀಶ್ ರೆಡ್ಡಿ, ಹಾರ್ದಿಕ್ ಪಾಂಡ್ಯ, ರಿಯಾನ್ ಪರಾಗ್, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ಮಯಾಂಕ್ ಯಾದವ್, ಜಿತೇಶ್ ಶರ್ಮಾ, ತಿಲಕ್ ವರ್ಮಾ, ರವಿ ಬಿಷ್ಣೋಯ್, ಹರ್ಷಿತ್ ರಾಣಾ
ಇದನ್ನೂ ಓದಿ: ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಬುಮ್ರಾ ಧರಿಸುವ ಶೂ ಯಾವ ಕಂಪನಿಯದ್ದು? ಬೆಲೆ ಎಷ್ಟು?