ಚೆನ್ನೈ(ತಮಿಳುನಾಡು): ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡು ಪಂದ್ಯಗಳ ಕ್ರಿಕೆಟ್ ಟೆಸ್ಟ್ ಸರಣಿಯ ಮೊದಲ ಪಂದ್ಯ ಇಂದಿನಿಂದ ತಮಿಳುನಾಡಿನ ಚೆನ್ನೈನಲ್ಲಿ ಶುರುವಾಗುತ್ತಿದೆ. ಭಾರತ ಕಳೆದ 6 ತಿಂಗಳ ಬಳಿಕ ಟೆಸ್ಟ್ ಪಂದ್ಯ ಆಡುತ್ತಿದೆ. ಐತಿಹಾಸಿಕ ಟಿ20 ವಿಶ್ವಕಪ್ ಗೆಲುವಿನ ನಂತರ ಹಿರಿಯ ಆಟಗಾರರು ವಿರಾಮದಲ್ಲಿದ್ದರು. ಆದರೆ ಇನ್ನು ಮುಂದೆ ಭಾರತ ಚಾಂಪಿಯನ್ ಟ್ರೋಫಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಗೆಲ್ಲುವುದರೆಡೆಗೆ ತನ್ನ ಚಿತ್ತ ಹರಿಸಿದೆ. ಹಾಗಾಗಿ ಸಹಜವಾಗಿಯೇ ಸದ್ಯಕ್ಕೆ ಟಿ20 ಮಾದರಿಯ ಕ್ರಿಕೆಟ್ ಹಿಂದೆ ಸರಿದಿದೆ.
Gearing up for the #INDvBAN Test series opener and an action-packed home season starting tomorrow 😎#TeamIndia fans, are you ready ❓@IDFCFIRSTBank pic.twitter.com/siCh0SwYgm
— BCCI (@BCCI) September 18, 2024
ಬಾಂಗ್ಲಾದೇಶ ಇತ್ತೀಚಿಗೆ ಪಾಕಿಸ್ತಾನವನ್ನು 2-0 ಅಂತರದಿಂದ ಮಣಿಸಿ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದಿದೆ. ಇದೇ ಹುಮ್ಮಸ್ಸು ಮತ್ತು ಆತ್ಮವಿಶ್ವಾಸದೊಂದಿಗೆ ಭಾರತಕ್ಕೆ ಆಗಮಿಸಿದೆ. ಪ್ರವಾಸಿ ತಂಡ ಇದೇ ಪ್ರದರ್ಶನವನ್ನು ಮುಂದುವರೆಸುವ ತುಡಿತದಲ್ಲಿದೆ. ಆದರೆ ಬಲಿಷ್ಠ ಭಾರತವನ್ನು ಎದುರಿಸುವುದು ಅಷ್ಟು ಸುಲಭದ ಮಾತಲ್ಲ ಎಂಬುದು ಆ ತಂಡಕ್ಕೂ ಅರಿವಿದೆ.
ಬಾಂಗ್ಲಾದೇಶ ಉತ್ತಮ ಟೆಸ್ಟ್ ಲೈನಪ್ ಹೊಂದಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಬ್ಯಾಟಿಂಗ್, ಬೌಲಿಂಗ್ ಹಾಗು ಆಲ್‌ರೌಂಡರ್ ವಿಭಾಗಗಳಲ್ಲಿ ಸಾಕಷ್ಟು ಸುಧಾರಿಸಿದೆ. ಆದರೆ, 2 ಬಾರಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೇರಿದ ಭಾರತವನ್ನು ಎದುರಿಸಿ ಗೆಲ್ಲಲು ಬಾಂಗ್ಲಾ ಅತ್ಯುತ್ತಮ ಪ್ರದರ್ಶನ ತೋರಬೇಕು.
Bangladesh team's practice session at the M. A. Chidambaram Stadium in Chennai 🇧🇩🏏#BCB #Cricket #INDvBAN #WTC25 pic.twitter.com/aMxooiIYcJ
— Bangladesh Cricket (@BCBtigers) September 18, 2024
ಕೊಹ್ಲಿ, ಪಂತ್ ಮೇಲೆ ನಿರೀಕ್ಷೆ: ಭಾರತ ಟೆಸ್ಟ್ ತಂಡಕ್ಕೆ ಎರಡು ವರ್ಷಗಳ ನಂತರ ರಿಷಬ್ ಪಂತ್ ಕಮ್‌ಬ್ಯಾಕ್ ಮಾಡಿದ್ದಾರೆ. ಟೆಸ್ಟ್‌ನಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಅವರಿಗಿದು ಉತ್ತಮ ಅವಕಾಶ. ಅದೇ ರೀತಿ, ರನ್ ಮಷಿನ್ ವಿರಾಟ್ ಕೊಹ್ಲಿ 8 ತಿಂಗಳ ಬಳಿಕ ಟೆಸ್ಟ್ ಕ್ರಿಕೆಟ್ ಆಡಲು ಮೈದಾನಕ್ಕಿಳಿಯುತ್ತಿರುವುದು ಗಮನಾರ್ಹ. ಇದರ ಜೊತೆಗೆ, ಟೀಂ ಇಂಡಿಯಾ ನೂತನ ಕೋಚ್ ಹುದ್ದೆ ಅಲಂಕರಿಸಿದ ಬಳಿಕ ಗೌತಮ್ ಗಂಭೀರ್ ಅವರಿಗೂ ಮೊದಲ ಟೆಸ್ಟ್ ಪಂದ್ಯ. ಈ ಎಲ್ಲಾ ಕಾರಣಗಳಿಂದ ಈ ಸರಣಿಯ ಮೇಲೆ ಅಭಿಮಾನಿಗಳಿಗೂ ಸಾಕಷ್ಟು ನಿರೀಕ್ಷೆಗಳಿವೆ. ಈ ಟೆಸ್ಟ್ ಸರಣಿ ಭಾರತಕ್ಕೆ ಮುಂದೆ ನ್ಯೂಜಿಲೆಂಡ್ ಸರಣಿ ಹಾಗು ಸುದೀರ್ಘ ಅವಧಿಯ ಅತ್ಯಂತ ಮಹತ್ವದ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ ಒಂದು ರೀತಿಯಲ್ಲಿ ರಿಹಾರ್ಸಲ್ ಎನ್ನಬಹುದು.
ಭಾರತ-ಬಾಂಗ್ಲಾ ಪಂದ್ಯ ನೇರಪ್ರಸಾರ ಎಲ್ಲಿ?: ಚೆನ್ನೈನಲ್ಲಿಂದು ಮೊದಲ ಟೆಸ್ಟ್ ಪಂದ್ಯ ಬೆಳಗ್ಗೆ 9.30 ಗಂಟೆಗೆ ಆರಂಭವಾಗಲಿದೆ. ನೇರಪ್ರಸಾರವನ್ನು Sports 18 1, Sports 18 1 HD ಮತ್ತು Sports 18 2 ವಾಹಿನಿಗಳಲ್ಲಿ ನೋಡಬಹುದು. ಇದರ ಜೊತೆಗೆ, ಜಿಯೋಸಿನಿಮಾ ಆ್ಯಪ್‌ನಲ್ಲೂ ಉಚಿತವಾಗಿ ಲೈವ್ ಸ್ಟ್ರೀಮಿಂಗ್ ಆಗಲಿದೆ.
ಉಭಯ ತಂಡಗಳು ಹೀಗಿವೆ - ಭಾರತ: ರೋಹಿತ್ ಶರ್ಮಾ (ಕ್ಯಾಪ್ಟನ್), ಯಶಸ್ವಿ ಜೈಸ್ವಾಲ್, ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್, ರಿಷಬ್ ಪಂತ್(ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಸರ್ಫರಾಜ್ ಖಾನ್, ಅಕ್ಸರ್ ಪಟೇಲ್, ಕುಲ್ದೀಪ್ ಯಾದವ್, ಧ್ರುವ್ ಜುರೆಲ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಯಶ್ ದಯಾಳ್ ಮತ್ತು ಆಕಾಶ್ ದೀಪ್.
ಬಾಂಗ್ಲಾದೇಶ: ಮಹಮ್ಮದ್ ಹಸನ್ ಜಾಯ್, ಶಾಡ್ಮನ್ ಇಸ್ಲಾಂ, ಜಾಕಿರ್ ಹಸನ್, ಮೊಮಿನುಲ್ ಹಕ್, ನಜ್ಮುಲ್ ಹೊಸೈನ್ ಶಾಂಟೋ(ಕ್ಯಾಪ್ಟನ್), ಶಕಿಬ್ ಅಲ್ ಹಸನ್, ಮುಶ್ಪಿಕರ್ ರಹೀಂ, ಲಿಟ್ಟನ್ ದಾಸ್( ವಿಕೆಟ್ ಕೀಪರ್), ಜಕರ್ ಅಲಿ, ಮೆಹದಿ ಹಸನ್ ಮಿರಾಜ್, ಖಾಲೆದ್ ಅಹಮ್ಮದ್, ಹಸನ್ ಮಹಮದ್, ಟಸ್ಕಿನ್ ಅಹಮದ್, ತೈಜುಲ್ ಇಸ್ಲಾಂ, ನಯೀಮ್ ಹಸನ್ ಮತ್ತು ನಹಿದ್ ರಾಣಾ.
ಇದನ್ನೂ ಓದಿ: ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ: ಚೀನಾ ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡ ಭಾರತ - Asian Champions Trophy 2024