IND vs AUS 1st Test: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಮತ್ತಷ್ಟು ದಾಖಲೆಗಳನ್ನು ಬರೆದಿದ್ದಾರೆ. ಪರ್ತ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಕೊಹ್ಲಿ ಭರ್ಜರಿ ಕಮ್ಬ್ಯಾಕ್ ಮಾಡಿ ಶತಕ ಸಿಡಿಸಿದ್ದಾರೆ. ಟೆಸ್ಟ್ ಸ್ವರೂಪದಲ್ಲಿ ಇದು ಕೊಹ್ಲಿ ಅವರ 30ನೇ ಶತಕವಾಗಿದೆ. ಈ ಪಂದ್ಯದಲ್ಲಿ ಶತಕ ಪೂರೈಸುತ್ತಿದ್ದಂತೆ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿಯುವ ಜೊತೆಗೆ ಹಲವು ಮೈಲುಗಲ್ಲುಗಳನ್ನು ನೆಟ್ಟಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಅತಿ ಹೆಚ್ಚು ಟೆಸ್ಟ್ ಶತಕ ಸಿಡಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಆಸ್ಟ್ರೇಲಿಯಾದಲ್ಲಿ ಎಲ್ಲಾ ಮಾದರಿಗಳಲ್ಲಿ ಅವರ 10ನೇ ಶತಕ ಇದಾಗಿದೆ. ಇದರೊಂದಿಗೆ ಆಸ್ಟ್ರೇಲಿಯಾದಲ್ಲಿ 7 ಶತಕ ಬಾರಿಸಿದ್ದ ಸಚಿನ್ ಅವರನ್ನು ಹಿಂದಿಕ್ಕಿದ್ದಾರೆ. ಈ ಪಂದ್ಯದಲ್ಲಿ ವಿರಾಟ್ ಅತ್ಯುತ್ತಮ ಇನ್ನಿಂಗ್ಸ್ ಆಡಿದ್ದು 143 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 100 ರನ್ ಪೂರೈಸಿದರು. ಇದು ವಿರಾಟ್ ಕೊಹ್ಲಿ ಅವರ ಟೆಸ್ಟ್ ವೃತ್ತಿ ಬದುಕಿನ 30ನೇ ಶತಕವಾಗಿದೆ. ಒಟ್ಟಾರೆ 80ನೇ ಅಂತರಾಷ್ಟ್ರೀಯ ಶತಕವಾಗಿದೆ.
Hello Australia 🇦🇺
— BCCI (@BCCI) November 24, 2024
KING KOHLI has brought up his 7th Test century on Aussie soil and second at the Perth Stadium. A classic knock from the champion batter 🫡🫡
Live - https://t.co/gTqS3UPruo… #AUSvIND | @imVkohli pic.twitter.com/QHMm7vrhcw
16 ತಿಂಗಳ ಬಳಿಕ ಸೆಂಚುರಿ: ವಿರಾಟ್ ಕೊಹ್ಲಿ ಅವರು 16 ತಿಂಗಳುಗಳ ಬಳಿಕ ಟೆಸ್ಟ್‌ನಲ್ಲಿ ಶತಕ ಸಿಡಿಸಿದ್ದಾರೆ. ಅವರು ಕೊನೆಯದಾಗಿ 2023 ಜುಲೈ 13ರಂದು ವೆಸ್ಟ್ ಇಂಡೀಸ್ ವಿರುದ್ಧ ಶತಕ ಸಿಡಿಸಿದ್ದರು. ಕೊಹ್ಲಿ ಅವರ ಬ್ಯಾಟಿಂಗ್ ನೆರವಿನಿಂದ ಭಾರತ 534 ರನ್ಗಳ ಗುರಿಯನ್ನು ನೀಡಿದೆ.
India declare after Virat Kohli's 30th Test ton, setting Australia a huge target 💥 #WTC25 |📝 #AUSvIND: https://t.co/7hVyWkz6en pic.twitter.com/sM79WXxCTA
— ICC (@ICC) November 24, 2024
- ಕೊಹ್ಲಿ ದಾಖಲೆಗಳು
- ವಿರಾಟ್ ಕೊಹ್ಲಿ ತಮ್ಮ ಟೆಸ್ಟ್ ವೃತ್ತಿ ಬದುಕಿನಲ್ಲಿ 30ನೇ ಶತಕ ದಾಖಲಿಸಿದ್ದಾರೆ. ಈ ಮೂಲಕ ಟೆಸ್ಟ್‌ನಲ್ಲಿ 30 ಅಥವಾ ಅದಕ್ಕಿಂತ ಹೆಚ್ಚು ಶತಕಗಳನ್ನು ಬಾರಿಸಿದ ನಾಲ್ಕನೇ ಭಾರತೀಯ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ (51), ರಾಹುಲ್ ದ್ರಾವಿಡ್ (36) ಮತ್ತು ಸುನಿಲ್ ಗವಾಸ್ಕರ್ (34) ಕ್ರಮವಾಗಿ ಮೊದಲ ಮೂರು ಸ್ಥಾನಗಳಲ್ಲಿದ್ದಾರೆ.
- ಈ ಶತಕದೊಂದಿಗೆ ವಿರಾಟ್ ಕೊಹ್ಲಿ ದಿಗ್ಗಜ ಬ್ಯಾಟರ್ ಸರ್ ಡಾನ್ ಬ್ರಾಡ್ಮನ್ರನ್ನು ಹಿಂದಿಕ್ಕಿದರು. ಬ್ರಾಡ್ಮನ್ ಟೆಸ್ಟ್‌ನಲ್ಲಿ ಒಟ್ಟು 29 ಶತಕಗಳನ್ನು ಗಳಿಸಿದ್ದರು. ಕೊಹ್ಲಿ ಈ ಶತಕದೊಂದಿಗೆ 30ನೇ ಶತಕ ಪೂರೈಸಿದರು.
- ಆಸ್ಟ್ರೇಲಿಯಾ ನೆಲದಲ್ಲಿ ಇದು ವಿರಾಟ್ ಕೊಹ್ಲಿ ಅವರ 7ನೇ ಟೆಸ್ಟ್ ಶತಕವಾಗಿದ್ದು, ಇದರೊಂದಿಗೆ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದಿದ್ದಾರೆ. ಸಚಿನ್ ಆಸ್ಟ್ರೇಲಿಯಾದಲ್ಲಿ 6 ಶತಕ ದಾಖಲಿಸಿದ್ದಾರೆ.
- ಆಸ್ಟ್ರೇಲಿಯಾ ನೆಲದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ವಿದೇಶಿ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಅವರು ಇಂಗ್ಲೆಂಡ್‌ನ ಮಾಜಿ ದಿಗ್ಗಜ ಬ್ಯಾಟರ್ ವಾಲಿ ಹ್ಯಾಮಂಡ್ (7) ಅವರನ್ನು ಸರಿಗಟ್ಟಿದ್ದಾರೆ. ಈ ಪಟ್ಟಿಯಲ್ಲಿ ಇಂಗ್ಲೆಂಡ್‌ನ ಶ್ರೇಷ್ಠ ಬ್ಯಾಟರ್ ಜಾಕ್ ಹಾಬ್ಸ್ ಇದ್ದು ಅವರು ಒಟ್ಟು 11 ಶತಕ ಸಿಡಿಸಿದ್ದಾರೆ.
- ಆಸ್ಟ್ರೇಲಿಯಾ ವಿರುದ್ಧ ಕೊಹ್ಲಿ ಅವರ 9ನೇ ಶತಕವಾಗಿದೆ. ಸಚಿನ್ ತೆಂಡೂಲ್ಕರ್ (11) ನಂತರ ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಎರಡನೇ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ.
- ಬಾರ್ಡರ್-ಗವಾಸ್ಕರ್ ಟ್ರೋಫಿಯ ಇತಿಹಾಸದಲ್ಲಿ ಹೆಚ್ಚು ಶತಕಗಳನ್ನು ಗಳಿಸಿದ ವಿಷಯದಲ್ಲಿ ಸಚಿನ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಈ ಇಬ್ಬರು 9-9 ಬಾರಿ ಶತಕ ಸಿಡಿಸಿದ್ದಾರೆ.
- ಇದು ವಿರಾಟ್ ಅವರ ಅಂತಾರಾಷ್ಟ್ರೀಯ ವೃತ್ತಿ ಬದುಕಿನ 81ನೇ ಶತಕವಾಗಿದ್ದು, ಕೇವಲ 603 ಇನ್ನಿಂಗ್ಸ್ಗಳಲ್ಲಿ ವಿರಾಟ್ ಈ ಸಾಧನೆ ಮಾಡಿದ್ದಾರೆ.
- ವಿರಾಟ್ ಕೊಹ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ 2000ರನ್ ಪೂರೈಸಿದ ಐದನೇ ಭಾರತೀಯ ಬ್ಯಾಟ್ಸ್‌ಮನ್ ಆಗಿದ್ದಾರೆ. ಇದಕ್ಕೂ ಮುನ್ನ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್ ಮತ್ತು ಚೇತೇಶ್ವರ ಪೂಜಾರ ಈ ಸಾಧನೆ ಮಾಡಿದ್ದರು.
ಇದನ್ನೂ ಓದಿ: Ind vs Aus 1st Test: 16 ವರ್ಷ ಗಂಭೀರ್ ಹೆಸರಲ್ಲಿದ್ದ ದಾಖಲೆ ಮುರಿದು ಹಾಕಿ ಇತಿಹಾಸ ಸೃಷ್ಟಿಸಿದ ಜೈಸ್ವಾಲ್!