ಬ್ರಿಡ್ಜ್‌ಟೌನ್ (ಬಾರ್ಬಡೋಸ್): 140 ಕೋಟಿ ಭಾರತೀಯರನ್ನು ತುದಿಗಾಲ ಮೇಲೆ ನಿಲ್ಲಿಸಿದ್ದ ಟಿ-20 ವಿಶ್ವಕಪ್ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ದೊಡ್ಡ ಗೆಲುವು ಪಡೆದು 2ನೇ ಬಾರಿ ಟಿ-20 ವಿಶ್ವಕಪ್ ಎತ್ತಿ ಹಿಡಿದಿದೆ. 11 ವರ್ಷಗಳ ಬಳಿಕ ಈ ಮಹತ್ವದ ಟ್ರೋಫಿ ಗೆದ್ದುಕೊಂಡಿದೆ. ಅಂತಿಮ ಬಾಲ್ ವರೆಗೂ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ 7 ರನ್ ಗಳ ಅಮೋಘ ಗೆಲುವು ಸಾಧಿಸಿದೆ.
2007 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಗೆದ್ದ ನಂತರ ಹಾಗೂ 2013 ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಬಳಿಕ ಇದು ಟೀಂ ಇಂಡಿಯಾಕ್ಕೆ ಎರಡನೇ T20 ವಿಶ್ವಕಪ್ ವಿಜಯವಾಗಿದೆ.
17 ವರ್ಷಗಳ ಹಿಂದೆ ಆಗಿನ ಯುವ ಕ್ರಿಕೆಟಿಗರಾಗಿದ್ದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಇಂದು ಫೈನಲ್‌ನಲ್ಲಿ 59 ಎಸೆತಗಳಲ್ಲಿ 6 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ 76 ರನ್ ಗಳಿಸಿ ಭಾರತವನ್ನು 7 ವಿಕೆಟ್‌ಗೆ 176 ರನ್‌ಗಳ ಸ್ಪರ್ಧಾತ್ಮಕತೆ ಸ್ಕೋರ್ ನತ್ತ ಕೊಂಡೊಯ್ದರು.
ನಂತರ ಅರ್ಷದೀಪ್ ಸಿಂಗ್ (2/20) ಮತ್ತು ಜಸ್ಪ್ರೀತ್ ಬುಮ್ರಾ (2/18) ಅತ್ಯುತ್ತಮ ಬೌಲಿಂಗ್ ಪ್ರದರ್ಶನ ಮಾಡಿದರು. ಈ ಪಂದ್ಯಾವಳಿಯ ಉದ್ದಕ್ಕೂ ತಮ್ಮ ಮ್ಯಾಜಿಕ್ ಕೆಲಸ ಮಾಡಿದರು. ಅಂತಿಮ ಓವರ್ ನಲ್ಲಿ ಹಾರ್ದಿಕ್ ಪಾಂಡ್ಯ ಅದ್ಬುತ ಬೌಲಿಂಗ್ ಪ್ರದರ್ಶನ ನೀಡಿ ದಕ್ಷಿಣ ಆಫ್ರಿಕಾವನ್ನು ಎಂಟು ವಿಕೆಟ್‌ಗೆ 169 ಕ್ಕೆ ಸೀಮಿತಗೊಳಿಸಿದರು. ಈ ಮೂಲಕ ಭಾರತ ಎರಡನೇ ಬಾರಿಗೆ T20 ವಿಶ್ವಕಪ್ ಎತ್ತಿ ಹಿಡಿಯುವಂತೆ ಮಾಡಿದರು.