ಪ್ಯಾರಿಸ್ (ಫ್ರಾನ್ಸ್): ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತೀಯರ ಪದಕ ಬೇಟೆ ಭರ್ಜರಿಯಾಗಿ ಮುಂದುವರಿದಿದೆ. ಕೂಟದ ಐದನೇ ದಿನವಾದ ಮಂಗಳವಾರ ಒಂದೇ ದಿನ 5 ಪದಕ ಬಾಚಿಕೊಳ್ಳುವ ಮೂಲಕ ಅತ್ಯುನ್ನತ ಸಾಧನೆ ಮಾಡಿತು.
With 2⃣ brilliant double podium finishes today and Deepthi Jeevanji's #Bronze🥉, India🇮🇳 now stands tall at 19th position with a total of 20 medals🎖️, the best-ever finish at any #Paralympics till date.
— SAI Media (@Media_SAI) September 3, 2024
Another exciting day🤩 awaits us and we are gearing up for more.
Stay tuned… pic.twitter.com/KLB78xLKiH
ಸದ್ಯ ಭಾರತದ ಖಾತೆಯಲ್ಲಿ 20 ಪದಕಗಳಿವೆ. ಈ ಮೂಲಕ ಪ್ಯಾರಾಲಿಂಪಿಕ್ ಇತಿಹಾಸದಲ್ಲೇ ಅತಿಹೆಚ್ಚು ಪದಕ ಗೆದ್ದ ಸಾಧನೆ ಮಾಡಿತು. ಈ ಹಿಂದಿನ ಟೋಕಿಯೋದಲ್ಲಿ 19 ಪದಕ ಗೆದ್ದಿತ್ತು. ಐದನೇ ದಿನದಂದು ಭಾರತ ಅಸಾಧಾರಣ ಪ್ರದರ್ಶನ ನೀಡಿತು. ಅಥ್ಲೆಟಿಕ್ಸ್ನ ಜಾವೆಲಿನ್ ಎಸೆತದಲ್ಲಿ 2, ಹೈ ಜಂಪ್ನಲ್ಲಿ 2 ಹಾಗೂ ಮಹಿಳೆಯರ ಓಟದ ಸ್ಪರ್ಧೆಯಲ್ಲಿ 1 ಪದಕ ಲಭಿಸಿತು.
ಮಂಗಳವಾರ ಯಾರಿಗೆ ಪದಕ?: ಮಂಗಳವಾರದ ಸ್ಪರ್ಧೆಯಲ್ಲಿ ಅಥ್ಲೀಟ್‌ಗಳು ಭಾರತಕ್ಕೆ ಪದಕಗಳನ್ನು ತಂದುಕೊಟ್ಟರು. ಮಹಿಳೆಯರ 400 ಮೀಟರ್ ಓಟದ ಟಿ20 ವಿಭಾಗದಲ್ಲಿ ದೀಪ್ತಿ ಜೀವಂಜಿ ಕಂಚು ಗೆದ್ದರು. ದೀಪ್ತಿ 55.82 ಸೆಕೆಂಡರ್ನಲ್ಲಿ ಗುರಿ ತಲುಪುವ ಮೂಲಕ ಕಂಚಿಗೆ ಮುತ್ತಿಕ್ಕಿದರು. ಟಿ20 ಎಂದರೆ, ಬೌದ್ಧಿಕ ದೌರ್ಬಲ್ಯ ಉಳ್ಳ ಕ್ರೀಡಾಪಟುಗಳ ವಿಭಾಗವಾಗಿದೆ.
ಇನ್ನೂ, ಪುರುಷರ ಎತ್ತರ ಜಿಗಿತದಲ್ಲಿ (ಹೈ ಜಂಪ್) ಎರಡು ಪದಕಗಳು ಬಂದವು. ಟಿ63 ವಿಭಾಗದಲ್ಲಿ ಶರದ್ಕುಮಾರ್ ಬೆಳ್ಳಿ ಪದಕ ಪಡೆದರೆ, ಮರಿಯಪ್ಪನ್ ತಂಗವೇಲು ಕಂಚು ಗಳಿಸಿದರು. ಶರದ್ ಕುಮಾರ್ 1.88 ಮೀಟರ್ ಎತ್ತರ ನೆಗೆದು 2ನೇ ಸ್ಥಾನ ಪಡೆದರು. ಮರಿಯಪ್ಪನ್ 1.85 ಮೀಟರ್ ಜಿಗಿದು ಮೂರನೇ ಸ್ಥಾನಿಯಾದರು. ಇದೇ ವಿಭಾಗದಲ್ಲಿ ಇನ್ನೊಬ್ಬ ಭಾರತೀಯ ಸ್ಪರ್ಧಿ ಶೈಲೇಶ್ಕುಮಾರ್ 1.85 ಮೀಟರ್ ಹಾರುವ ಮೂಲಕ 4 ನೇ ಸ್ಥಾನ ಪಡೆದು ಪದಕ ತಪ್ಪಿಸಿಕೊಂಡರು. ಇನ್ನಷ್ಟು ಶ್ರಮ ಹಾಕಿದ್ದರೆ, ಕ್ಲೀನ್ಸ್ವೀಪ್ ಮಾಡುವ ಅವಕಾಶವಿತ್ತು.
ಜಾವೆಲಿನ್ನಲ್ಲಿ ಡಬಲ್ ಮೆಡಲ್: ಹೈಜಂಪ್ನಂತೆ ಜಾವೆಲಿನ್ನಲ್ಲೂ ಭಾರತಕ್ಕೆ ಡಬಲ್ ಮೆಡಲ್ ದಕ್ಕಿದವು. ಪುರುಷರ ಜಾವೆಲಿನ್ ಎಸೆತದ ಎಫ್46 ವಿಭಾಗದಲ್ಲಿ ಅಜೀತ್ ಸಿಂಗ್ ಬೆಳ್ಳಿ ಜಯಿಸಿದರೆ, ಗುರ್ಜರ್ ಸುಂದರ್ ಸಿಂಗ್ ಕಂಚು ಬಂದಿತು. ಅಜೀತ್ ತಮ್ಮ ಪ್ರಯತ್ನದಲ್ಲಿ 65.62 ಮೀಟರ್ ದೂರಕ್ಕೆ ಭರ್ಜಿ ಎಸೆಯುವ ಮೂಲಕ 2ನೇ ಸ್ಥಾನದೊಂದಿಗೆ ಬೆಳ್ಳಿ ಪಡೆದರೆ, ಗುರ್ಜರ್ ಸಿಂಗ್ 64.96 ಮೀಟರ್ ಎಸೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟು ಕಂಚು ಗಳಿಸಿದರು. 2020 ರ ಟೋಕಿಯೊ ಗೇಮ್ಸ್‌ನಲ್ಲಿ ಕಂಚು ಗೆದ್ದಿದ್ದ ಗುರ್ಜರ್ ಇಲ್ಲಿಯೂ ಕಂಚು ಗೆದ್ದು ಸತತ ಎರಡನೇ ಪದಕ ಪಡೆದರು.
ಒಂದೇ ದಿನದಲ್ಲಿ ಐದು ಪದಕಗಳನ್ನು ಗೆಲ್ಲುವ ಮೂಲಕ ಭಾರತವು ಸದ್ಯ 3 ಚಿನ್ನ, 7 ಬೆಳ್ಳಿ ಮತ್ತು 10 ಕಂಚಿನ ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ 19 ನೇ ಸ್ಥಾನದಲ್ಲಿದೆ. 2020ರ ಟೋಕಿಯೊ ಕ್ರೀಡಾಕೂಟದಲ್ಲಿ 5 ಚಿನ್ನ, 8 ಬೆಳ್ಳಿ, 6 ಕಂಚು ಸೇರಿ 19 ಪದಕ ಗಳಿಸಿತ್ತು. ಕ್ರೀಡಾಕೂಟ ಇನ್ನೂ 4 ದಿನಗಳು ಬಾಕಿ ಉಳಿದಿದ್ದು, ಇನ್ನಷ್ಟು ಪದಕಗಳನ್ನು ಗೆಲ್ಲುವ ಮೂಲಕ ದಾಖಲೆಯನ್ನು ಮತ್ತಷ್ಟು ಉತ್ತಮಪಡಿಸಿಕೊಳ್ಳುವ ಅವಕಾಶವಿದೆ.
ಇದನ್ನೂ ಓದಿ: ಪ್ಯಾರಾಲಿಂಪಿಕ್ಸ್: ಜಾವೆಲಿನ್ ಥ್ರೋನಲ್ಲಿ ದಾಖಲೆಯ ಚಿನ್ನ ಗೆದ್ದ ಸುಮಿತ್ - Sumit Antil Won Gold