ಹರಾರೆ (ಜಿಂಬಾಬ್ವೆ): ಜಿಂಬಾಬ್ವೆ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿಂದು ಭಾರತ ತಂಡವು 100 ರನ್ಗಳ ಅಂತರದ ಜಯ ದಾಖಲಿಸಿದೆ. ಈ ಮೂಲಕ ಭಾರತವು ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 20 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 234 ರನ್ಗಳ ಬೃಹತ್ ಮೊತ್ತ ಗಳಿಸಿತ್ತು. ಯುವ ಬ್ಯಾಟರ್ ಅಭಿಷೇಕ್ ಶರ್ಮಾ ಚೊಚ್ಚಲ ಶತಕ (100), ರುತುರಾಜ್ ಗಾಯಕ್ವಾಡ್ ಅಜೇಯ ಅರ್ಧಶತಕ (77 ರನ್) ಹಾಗೂ ರಿಂಕು ಸಿಂಗ್ ಅವರು ಅಬ್ಬರದ 48* ರನ್ ಸಿಡಿಸಿದರು. ಇವರಿಬ್ಬರ ಜೋಡಿಯು ಅಂತಿಮ ಓವರ್ಗಳಲ್ಲಿ ಜಿಂಬಾಬ್ವೆ ಬೌಲರ್ಗಳ ಬೆವರಿಳಿಸಿತು.
235 ರನ್ ಗುರಿ ಬೆನ್ನಟ್ಟಿದ ಜಿಂಬಾಬ್ವೆ ಭಾರತದ ಬಿಗುವಿನ ಬೌಲಿಂಗ್ ದಾಳಿಗೆ ಸಿಲುಕಿ ಮೊದಲ ಓವರ್ನಿಂದಲೇ ವಿಕೆಟ್ ಕಳೆದುಕೊಳ್ಳುತ್ತ ಸಾಗಿತು. ಆರಂಭಿಕ ವೆಸ್ಲಿ ಮಾಧೆವೆರೆ 43, ಬ್ರಿಯಾನ್ ಬೆನ್ನೆಟ್ 26, ಲುಕ್ ಜೊಂಗ್ವೆ 33 ಹಾಗೂ ಜೊನಾಥನ್ ಕ್ಯಾಂಪ್ಬೆಲ್ 10 ರನ್ ಹೊರತುಪಡಿಸಿ ಉಳಿದ ಬ್ಯಾಟರ್ಗಳು ಎರಡಂಕಿ ಮೊತ್ತವನ್ನೂ ತಲುಪಲಿಲ್ಲ.
ನಾಯಕ ಸಿಕಂದರ್ ರಾಜಾ ಕೇವಲ 4 ರನ್ಗೆ ವಿಕೆಟ್ ಒಪ್ಪಿಸಿದರು. ಇನ್ನುಳಿದಂತೆ ಇನ್ನೋಸೆಂಟ್ ಕೈಯಾ 4, ಡಿಯೋನ್ ಬೆನ್ನೆಟ್ 0, ಕ್ಲಿವ್ ಮಡಂಡೆ 0 ಹಾಗೂ ವೆಲ್ಲಿಂಗ್ಟನ್ ಮಸಕಡ್ಜ 1 ರನ್ಗೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ತಂಡವು 18.4 ಓವರ್ಗಳಲ್ಲೇ 134 ರನ್ಗಳಿಗೆ ಸರ್ವಪತನ ಕಂಡಿತು.
ಟೀಂ ಇಂಡಿಯಾ ಪರ ಮುಖೇಶ್ ಕುಮಾರ್ ಹಾಗೂ ಆವೇಶ್ ಖಾನ್ ತಲಾ ಮೂರು, ರವಿ ಬಿಷ್ಣೋಯ್ 2 ಮತ್ತು ವಾಷಿಂಗ್ಟನ್ ಸುಂದರ್ ಒಂದು ವಿಕೆಟ್ ಪಡೆದರು. ಮೊದಲ ಪಂದ್ಯದಲ್ಲಿ ಸೋತಿದ್ದ ಶುಭ್ಮನ್ ಗಿಲ್ ಪಡೆ, ಎರಡನೇ ಮ್ಯಾಚ್ ಗೆದ್ದು ಸರಣಿಯಲ್ಲಿ 1-1ರ ಸಮಬಲ ಸಾಧನೆ ಮಾಡಿದೆ.