ಧರ್ಮಶಾಲಾ: ನಿಧಾನಗತಿಯ ಪಿಚ್ನಲ್ಲೂ ಭಾರತೀಯ ಸ್ಪಿನ್ ತಂತ್ರ ಕೆಲಸ ಮಾಡುತ್ತೆ ಎಂಬುದನ್ನು ಕುಲದೀಪ್ ಯಾದವ್ ಮತ್ತು ಆರ್ ಅಶ್ವಿನ್ ತೋರಿಸಿಕೊಟ್ಟರು. ಹಿಮಾಚಲಪ್ರದೇಶದ ಧರ್ಮಶಾಲಾದಲ್ಲಿ ನಡೆಯುತ್ತಿರುವ ಐದನೇ ಮತ್ತು ಅಂತಿಮ ಟೆಸ್ಟ್ನಲ್ಲಿ ಯಾದವ್ 5 ವಿಕೆಟ್ಗಳ ಗೊಂಚಲು ಪಡೆದರು. ಜೊತೆಗೆ ಟೆಸ್ಟ್ ಕ್ರಿಕೆಟ್ನಲ್ಲಿ 50 ವಿಕೆಟ್ಗಳನ್ನೂ ಪೂರೈಸಿದರು.
ಉತ್ತಮ ಆರಂಭದ ಹೊರತಾಗಿಯೂ ನೂರನೇ ಟೆಸ್ಟ್ ಆಡುತ್ತಿರುವ ಅಶ್ವಿನ್ ಮತ್ತು ಕುಲದೀಪ್ ಯಾದವ್ ಸ್ಪಿನ್ ದಾಳಿಗೆ ಸಿಲುಕಿದ ಆಂಗ್ಲರು 57.4 ಓವರ್ಗಳಲ್ಲಿ 218 ರನ್ಗಳಿಗೆ ಆಲೌಟ್ ಆದರು. ಆರಂಭಿಕರಾದ ಬೆನ್ ಡಕೆಟ್, ಜಾಕ್ ಕ್ರಾಲಿ ಮೊದಲ ವಿಕೆಟ್ಗೆ 64 ರನ್ ಸೇರಿಸಿದರು. ಡಕೆಟ್ 27 ರನ್ಗೆ ವಿಕೆಟ್ ನೀಡಿದರೆ, ಜಾಕ್ ಸರಣಿಯಲ್ಲಿ 4ನೇ ಅರ್ಧಶತಕ ಬಾರಿಸಿದರು. ಇದಾದ ಬಳಿಕ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು.
100ನೇ ಟೆಸ್ಟ್ ಆಡುತ್ತಿರುವ ಜಾನಿ ಬೈರ್ಸ್ಟೋವ್ 29, ಜೋ ರೂಟ್ 26, ಬೆನ್ಫೋಕ್ಸ್ 24 ಬಿಟ್ಟರೆ ಉಳಿದೆಲ್ಲಾ ಆಟಗಾರರು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು. 175 ರನ್ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡ ಉಳಿದ ವಿಕೆಟ್ಗಳನ್ನು 43 ರನ್ಗೆ ಕಳೆದುಕೊಂಡು ಸರ್ವಪತನ ಕಂಡಿತು.
ಅವಳಿಗಳ ಸ್ಪಿನ್ ಬ್ರಹ್ಮಾಸ್ತ್ರ: ಕುಲದೀಪ್ ಯಾದವ್ ಮತ್ತು ರವಿಚಂದ್ರನ್ ಅಶ್ವಿನ್ ಸ್ಪಿನ್ ಅಸ್ತ್ರದ ಮುಂದೆ ಆಂಗ್ಲರು ತರಗೆಲೆಯಂತೆ ಉದುರಿದರು. ಯಾದವ್ 15 ಓವರ್ಗಳಲ್ಲಿ 4.48 ರ ಎಕಾನಮಿಯಲ್ಲಿ 72 ರನ್ ನೀಡಿ ಪ್ರಮುಖ 5 ವಿಕೆಟ್ ಕಿತ್ತರು. ಇದರೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ 50 ವಿಕೆಟ್ ಸಾಧನೆ ಮಾಡಿದರು. ಇದು ಯಾದವ್ಗೆ 4ನೇ ಐದು ವಿಕೆಟ್ ಗೊಂಚಲಾಗಿದೆ. ತಾನೇನು ಕಮ್ಮಿ ಇಲ್ಲ ಎಂಬಂತೆ ಬೌಲ್ ಮಾಡಿದ 100 ಪಂದ್ಯಗಳ ಸರದಾರ ಅಶ್ವಿನ್ 4 ವಿಕೆಟ್ ಪಡೆದು ಇಂಗ್ಲೆಂಡ್ನ ಬೆನ್ನೆಲುಬು ಮುರಿದರು. ರವೀಂದ್ರ ಜಡೇಜಾ 1 ವಿಕೆಟ್ ಕಿತ್ತರು.
ಬೆಸ್ಟ್ ಸ್ಟ್ರೈಕ್ ರೇಟ್: ಟೆಸ್ಟ್ ಕ್ರಿಕೆಟ್ನಲ್ಲಿ ಕುಲದೀಪ್ ಯಾದವ್ ಉತ್ತಮ ಸ್ಟ್ರೈಕ್ ರೇಟ್ ಕಾಯ್ದುಕೊಂಡಿದ್ದಾರೆ. ಆಡಿದ 12 ಟೆಸ್ಟ್ಗಳಲ್ಲಿ 50 ವಿಕೆಟ್ ಪೂರೈಸಿದ್ದು, ಅವರ ಸ್ಟ್ರೈಕ್ರೇಟ್ 36.64. ಎಕಾನಮಿ 3.44 ರಷ್ಟು ಇದೆ. ಮೊದಲ 50 ವಿಕೆಟ್ಗಳಲ್ಲಿ ಇಷ್ಟು ಪ್ರಭಾವಿಯಾಗಿದ್ದು, ಇಂಗ್ಲೆಂಡ್ನ ಮಾಜಿ ಬೌಲರ್ ಜಾರ್ಜ್ ಲೋಮನ್ (34.1) ಬಳಿಕ ಕುಲದೀಪ್ ಇದ್ದಾರೆ. ಬಳಿಕ ಆಸ್ಟ್ರೇಲಿಯಾದ ಜಾನ್ ಫೆರ್ರಿಸ್ 37.7, ನ್ಯೂಜಿಲ್ಯಾಂಡ್ನ ಶೇನ್ ಬಾಂಡ್ 38.7 ಸ್ಟ್ರೈಕ್ರೇಟ್ನೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: ಐಪಿಎಲ್-2024 ಬಳಿಕ ಕ್ರಿಕೆಟ್ನಿಂದ ದಿನೇಶ್ ಕಾರ್ತಿಕ್ ನಿವೃತ್ತಿ