ರಾಜ್ಕೋಟ್ (ಗುಜರಾತ್) : ಭಾರತ ತಂಡದಲ್ಲಿ ಅವಕಾಶ ಸಿಗದೇ ಹೊರಗುಳಿದಿದ್ದ ಸರ್ಫರಾಜ್ ಖಾನ್ ಅವರು 'ಟೆಸ್ಟ್' ಪಾಸ್ ಆಗಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದು ಕೊಂಡಿದ್ದಾರೆ. ಇದು ಟೀಮ್ ಇಂಡಿಯಾ ಪರ ಚೊಚ್ಚಲ ಪಂದ್ಯವಾಗಿದ್ದು, ತಮ್ಮ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ಆಡುತ್ತಿದ್ದಾರೆ. ಸರ್ಫರಾಜ್ ಖಾನ್ ಜೊತೆಗೆ ವಿಕೆಟ್ ಕೀಪರ್ ಧ್ರುವ್ ಜುರೆಲ್ ಕೂಡ ಟೆಸ್ಟ್ಗೆ ಪದಾರ್ಪಣೆ ಮಾಡಿದರು. ಅವರು ತಮ್ಮ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನೂ ಆಡುತ್ತಿದ್ದಾರೆ.
ಭಾರತದ ಮಾಜಿ ಆಟಗಾರ ಅನಿಲ್ ಕುಂಬ್ಳೆ ಅವರು ಸರ್ಫರಾಜ್ ಖಾನ್ ಅವರಿಗೆ ಕ್ಯಾಪ್ ನೀಡಿದರು. ಕ್ಯಾಪ್ ಸ್ವೀಕರಿಸಿದ ನಂತರ, ಸರ್ಫರಾಜ್ ಖಾನ್ ಅವರ ತಂದೆ ಮೈದಾನದಲ್ಲಿ ತುಂಬಾ ಭಾವುಕರಾದರು. ಚೊಚ್ಚಲ ಕ್ಯಾಪ್ ಅನ್ನು ಮುತ್ತಿಟ್ಟು ಹಣೆಯ ಮೇಲೆ ಇಟ್ಟು ಕಣ್ಣೀರಿಟ್ಟ ಅವರ ತಂದೆ ಮಗನನ್ನು ತಬ್ಬಿ ಅಭಿನಂದಿಸಿದರು. ಪಕ್ಕದಲ್ಲಿ ನಿಂತಿದ್ದ ಪತ್ನಿಯೂ ಸರ್ಫರಾಜ್ ಖಾನ್ ಅವರನ್ನು ಅಪ್ಪಿಕೊಂಡು ಅಭಿನಂದಿಸಿದರು. ಈ ಸಂದರ್ಭದಲ್ಲಿ ಸರ್ಫರಾಜ್ ಖಾನ್ ತಮ್ಮ ಪತ್ನಿ ಮತ್ತು ತಂದೆಯ ಕಣ್ಣೀರು ಒರೆಸಿದರು.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸ್ಥಾನ ಪಡೆಯಲು ಸರ್ಫರಾಜ್ ಖಾನ್ ಎಷ್ಟು ದಿನ ಕಾಯಬೇಕಾಯಿತು ಎಂದು ತಂದೆ ಮತ್ತು ಹೆಂಡತಿಯ ಈ ಕಣ್ಣೀರು ಹೇಳುತ್ತಿದೆ. ತನ್ನ ಮಗನನ್ನು ಯಶಸ್ವಿಗೊಳಿಸಲು ತನ್ನ ಇಡೀ ಜೀವನವನ್ನು ಮುಡಿಪಾಗಿಟ್ಟು, ಭಾರತಕ್ಕಾಗಿ ಆಡುವ ತನ್ನ ಕನಸನ್ನು ನನಸಾಗಿಸಲು ಸಾಧ್ಯವಾಗದ ತನ್ನ ಮಗನನ್ನು ರಾಷ್ಟ್ರೀಯ ತಂಡದಲ್ಲಿ ನೋಡಬೇಕೆಂದು ಹಲವು ವರ್ಷಗಳಿಂದ ಕಾಯುತ್ತಿದ್ದ ತಂದೆಗೆ ಇಂದು ಭಾವನಾತ್ಮಕ ಕ್ಷಣವಾಗಿತ್ತು.
ಸರ್ಫರಾಜ್ ಖಾನ್ 66 ಪ್ರಥಮ ದರ್ಜೆ ಇನ್ನಿಂಗ್ಸ್‌ಗಳಲ್ಲಿ 3,912 ರನ್ ಗಳಿಸಿದ್ದಾರೆ. ಅವರು ಪ್ರಥಮ ದರ್ಜೆಯಲ್ಲಿ 69 ಸರಾಸರಿ ಹೊಂದಿದ್ದಾರೆ. ಇದರಲ್ಲಿ 14 ಶತಕಗಳು ಮತ್ತು 11 ಅರ್ಧ ಶತಕಗಳು ಸೇರಿವೆ. ಅವರ ಸ್ಟ್ರೈಕ್ ರೇಟ್ 70.48 ಆಗಿದೆ. ಟೀಮ್ ಇಂಡಿಯಾದಲ್ಲಿ ಅವಕಾಶ ಸಿಗದೇ ಇದ್ದಾಗ ಧೃತಿಗೆಡದ ಸರ್ಫರಾಜ್ ಖಾನ್ ದೇಶಿ ಕ್ರಿಕೆಟ್ ಟೂರ್ನಿಗಳಲ್ಲಿ ಅಬ್ಬರಿಸಿದ್ದರು. ಆದರೂ ರಾಷ್ಟ್ರೀಯ ತಂಡದಲ್ಲಿ ಅದೃಷ್ಟದ ಬಾಗಿಲು ತೆರೆದಿರಲಿಲ್ಲ. ಇದೀಗ ಸಿಕ್ಕಿರುವ ಅವಕಾಶವನ್ನು ಸದುಪಯೋಗ ಮಾಡಿಕೊಂಡು ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.
ಇದನ್ನೂ ಓದಿ : ನೂರನೇ ಟೆಸ್ಟ್ ಪಂದ್ಯವಾಡುತ್ತಿರುವ ಬೆನ್ ಸ್ಟೋಕ್ಸ್: ಇಂಗ್ಲೆಂಡ್ ಪರ ಶತಕದ ಟೆಸ್ಟ್ ಆಡಿದ 16 ನೇ ಆಟಗಾರ