ರಾಜ್ಕೋಟ್(ಗುಜರಾತ್): ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟ ಮುಕ್ತಾಯವಾಗಿದೆ. ಇಂದು ಬೆಳಗ್ಗೆ ಟೀಂ ಇಂಡಿಯಾ 445 ರನ್ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿತು. ಮತ್ತೊಂದೆಡೆ, ಬಾಜ್ಬಾಲ್ ಆಟದ ಮೊರೆ ಹೋಗಿರುವ ಬೆನ್ ಡಕೆಟ್ ಬಿರುಸಿನ ಶತಕದ ನೆರವಿನಿಂದ ಆಂಗ್ಲರ ಪಡೆ ದಿನದಂತ್ಯಕ್ಕೆ ಕೇವಲ ಎರಡು ವಿಕೆಟ್ ನಷ್ಟಕ್ಕೆ 207 ರನ್ ಪೇರಿಸಿತು.
ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಮೈದಾನದಲ್ಲಿ ಮೂರನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಗುರುವಾರ, ಮೊದಲ ದಿನದಾಟದ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 326 ರನ್ ಗಳಿಸಿದ್ದ ಟೀಂ ಇಂಡಿಯಾ, ಇಂದು ಈ ಮೊತ್ತಕ್ಕೆ 119 ರನ್ ಸೇರಿಸಿತು. ತಮ್ಮ ಚೊಚ್ಚಲ ಟೆಸ್ಟ್ ಆಡುತ್ತಿರುವ ವಿಕೆಟ್ ಕೀಪರ್ ಧ್ರುವ್ ಜುರೆಲ್ 46 ಮತ್ತು ರವಿಚಂದ್ರನ್ ಅಶ್ಚಿನ್ 37 ರನ್ ಉಪಯುಕ್ತ ಕಾಣಿಕೆಯಿಂದ ಭಾರತ ಒಟ್ಟು 445 ರನ್ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿತು.
ಅಶ್ವಿನ್ 500 ವಿಕೆಟ್ ಸಾಧನೆ: ನಂತರ ಇಂಗ್ಲೆಂಡ್ ತಂಡ ತನ್ನ ಮೊದಲ ಇನ್ನಿಂಗ್ಸ್ ಶುರು ಮಾಡಿತು. ತಂಡಕ್ಕೆ ಝಾಕ್ ಕ್ರಾಲಿ ಮತ್ತು ಬೆನ್ ಡಕೆಟ್ 89 ರನ್ಗಳ ಅದ್ಭುತ ಆರಂಭ ಒದಗಿಸಿದರು. ಅದರಲ್ಲೂ, ಬೆನ್ ಡಕೆಟ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 39 ಬಾಲ್ಗಳಲ್ಲಿ ಅರ್ಧಶತಕ ಸಿಡಿಸಿದರು. ಮತ್ತೊಂದೆಡೆ, ಝಾಕ್ ಕ್ರಾಲಿ ತಾಳ್ಮೆಯ ಆಟದೊಂದಿಗೆ ಉತ್ತಮ ಸಾಥ್ ನೀಡಿದರು. ಈ ನಡುವೆ ಅಶ್ಚಿನ್ ಅವರು ಝಾಕ್ ಕ್ರಾಲಿ (39 ರನ್) ವಿಕೆಟ್ ಕಿತ್ತುವ ಮೂಲಕ ಈ ಜೋಡಿಯನ್ನು ಬೇರ್ಪಡಿಸಿದರು. ಅಲ್ಲದೇ, ಈ ವಿಕೆಟ್ ಪಡೆಯುವ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ 500 ವಿಕೆಟ್ ಪಡೆದ ಮೈಲಿಗಲ್ಲನ್ನು ಅಶ್ವಿನ್ ಸ್ಥಾಪಿಸಿದರು.
ಡಕೆಟ್ ದಾಖಲೆಯ ಶತಕದಾಟ: ಝಾಕ್ ಕ್ರಾಲಿ ನಂತರ ಬಂದ ಆಲಿ ಪೋಪ್ 39 ರನ್ ಗಳಿಸಿ ನಿರ್ಗಮಿಸಿದರು. ಆದರೆ, ಬೆನ್ ಡಕೆಟ್ ಬ್ಯಾಟಿಂಗ್ ಗತಿಯಲ್ಲಿ ಯಾವುದೇ ಬದಲಾಗಲಿಲ್ಲ. ಸಂಪೂರ್ಣವಾಗಿ ಹೊಡಿಬಡಿ ಆಟದ ಮೊರೆ ಹೋದ ಅವರು 88 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಮೂಲಕ ಆತಿಥೇಯರ ವಿರುದ್ಧ ವೇಗದ ಶತಕ ಬಾರಿಸಿದ ಮೂರನೇ ಆಟಗಾರ ಮತ್ತು ಇಂಗ್ಲೆಂಡ್ ಪರವಾಗಿ ವಿದೇಶದಲ್ಲಿ ಈ ಶತಕದ ಸಾಧನೆ ಮಾಡಿದ ನಾಲ್ಕನೇ ಬ್ಯಾಟರ್ ಎಂಬ ಖ್ಯಾತಿಗೆ ಪಾತ್ರರಾದರು.
ದಿನದಾಟದ ಅಂತ್ಯಕ್ಕೆ ಬೆನ್ ಡಕೆಟ್ 188 ಎಸೆತಗಳಲ್ಲಿ 21 ಬೌಂಡರಿ, ಎರಡು ಸಿಕ್ಸರ್ಗಳಸಮೇತ 133 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಬಂದಿರುವ ಜೋ ರೂಟ್ 9 ರನ್ ಗಳಿಸಿ ನಾಳೆಗೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಭಾರತದ ಪರ ಅಶ್ವಿನ್ ಮತ್ತು ಮೊಹಮ್ಮದ್ ಸಿರಾಜ್ ತಲಾ ವಿಕೆಟ್ ಪಡೆದರು.
ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್ನಲ್ಲಿ '500 ವಿಕೆಟ್' ಶಿಖರವೇರಿದ ಸ್ಪಿನ್ ಮಾಂತ್ರಿಕ ಆರ್.ಅಶ್ವಿನ್