ಹೈದರಾಬಾದ್: ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 9 ತಿಂಗಳ ಬಳಿಕ ಟೆಸ್ಟ್ ಕ್ರಿಕೆಟ್ ಪಂದ್ಯವನ್ನು ಆಡಲು ಸಜ್ಜಾಗಿದ್ದಾರೆ. ಈ ವರ್ಷದ ಜನವರಿ ತಿಂಗಳಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಟೆಸ್ಟ್ ಪಂದ್ಯವನ್ನಾಡಿದ್ದ ಕೊಹ್ಲಿ, ಇದೀಗ ಬಾಂಗ್ಲಾದೇಶ ವಿರುದ್ಧ ಸೆ.19 ರಿಂದ ಆರಂಭವಾಗಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೇ ಐತಿಹಾಸಿಕ ಸಾಧನೆಯ ಸಮೀಪದಲ್ಲಿರುವ ಕೊಹ್ಲಿ ಪಾಲಿಗೆ ಈ ಸರಣಿ ಮಹತ್ವದಾಗಿದೆ.
ಹೌದು, ಬಾಂಗ್ಲಾ ವಿರುದ್ಧದ ಸರಣಿಯಲ್ಲಿ ಕೊಹ್ಲಿ ದೊಡ್ಡ ದಾಖಲೆಯೊಂದನ್ನು ನಿರ್ಮಿಸುವ ಸುವರ್ಣವಕಾಶವನ್ನು ಹೊಂದಿದ್ದಾರೆ. ಇದಕ್ಕಾಗಿ ಕೇವಲ 58 ರನ್‌ಗಳ ಅವಶ್ಯಕತೆ ಇದೆ. ಒಂದು ವೇಳೆ ಕೊಹ್ಲಿ ಈ ಮೊತ್ತವನ್ನು ಕಲೆಹಾಕಿದ್ದೇ ಆದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 600 ಕ್ಕಿಂತ ಕಡಿಮೆ ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ ವಿಶ್ವದ ಮೊದಲ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ.
ಸದ್ಯ ಈ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಲಿದ್ದೆ. ಅವರು ಒಟ್ಟು 623 ಇನ್ನಿಂಗ್ಸ್‌ಗಳಲ್ಲಿ 27,000 ರನ್ ಪೂರೈಸಿರುವ ಮೊದಲ ಕ್ರಿಕೆಟರ್ ಎನಿಸಿಕೊಂಡಿದ್ದಾರೆ. ಇದೀಗ ಕೊಹ್ಲಿ ಈ ದಾಖಲೆಯನ್ನು ಮುರಿಯುವ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯಬಹುದಾಗಿದೆ. ಕೊಹ್ಲಿ ಇದುವರೆಗೂ 591 ಅಂತಾರಾಷ್ಟ್ರೀಯ ಇನ್ನಿಂಗ್ಸ್‌ಗಳನ್ನಾಡಿದ್ದು, ಇದರಲ್ಲಿ 26,942 ರನ್ ಗಳಿಸಿದ್ದಾರೆ.
147 ವರ್ಷಗಳ ಸುದೀರ್ಘವಾದ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ, ಸಚಿನ್ ತೆಂಡೂಲ್ಕರ್, ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಮತ್ತು ಶ್ರೀಲಂಕಾದ ಕುಮಾರ ಸಂಗಕ್ಕಾರ ಈ ಮೂವರು ದಿಗ್ಗಜ ಬ್ಯಾಟರ್ ಮಾತ್ರ 27,000 ರನ್‌ಗಳ ಮೈಲಿಗಲ್ಲು ತಲುಪಿದ್ದಾರೆ. ಇದೀಗ ಕೊಹ್ಲಿ ಈ ಪಟ್ಟಿಗೆ ಸೇರ್ಪಡೆಗೊಳ್ಳಲಿದ್ದಾರೆ.
ಹೀಗಿದೆ ವಿರಾಟ್ ದಾಖಲೆ: ಕೊಹ್ಲಿ ಇದುವರೆಗೆ ಒಟ್ಟು 113 ಟೆಸ್ಟ್ ಪಂದ್ಯಗಳನ್ನು ಆಡಿ 8848 ರನ್ ಕಲೆಹಾಕಿದ್ದಾರೆ. ಇದರಲ್ಲಿ 30 ಅರ್ಧಶತಕ ಮತ್ತು 29 ಶತಕಗಳು ಸೇರಿವೆ. 254 ಕೊಹ್ಲಿ ಅತ್ಯುತ್ತಮ ಟೆಸ್ಟ್ ಇನ್ನಿಂಗ್ಸ್ ಆಗಿದೆ. ಉಳಿದಂತೆ 295 ಏಕದಿನ ಪಂದ್ಯಗಳನ್ನು ಆಡಿರುವ ಕೊಹ್ಲಿ13906 ರನ್ ಗಳಿಸಿದ್ದಾರೆ. ಇದರಲ್ಲಿ 50 ಶತಕ ಮತ್ತು 72 ಅರ್ಧಶತಕ ಸೇರಿವೆ. ಏಕದಿನದಲ್ಲಿ ಕೊಹ್ಲಿ ಗಳಿಸಿದ ಅತ್ಯುತ್ತಮ ಸ್ಕೋರ್ 183 ಆಗಿದೆ. ಇತ್ತೀಚೆಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ ಕೊಹ್ಲಿ ಒಟ್ಟು 125 ಟಿ20 ಪಂದ್ಯಗಳನ್ನು ಆಡಿ 4188 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಸೇರಿದಂತೆ 38 ಅರ್ಧ ಶತಕಗಳು ಸೇರಿವೆ. 122 ರನ್ ಕೊಹ್ಲಿ ಅವರ ಟಿ20 ಹೈಸ್ಕೋರ್ ಆಗಿದೆ.
ಇದನ್ನೂ ಓದಿ: 4 ದಶಕಗಳ ಬಳಿಕ ಜಮ್ಮು- ಕಾಶ್ಮೀರದಲ್ಲಿ ಕ್ರಿಕೆಟ್ ಟೂರ್ನಿ ಆಯೋಜನೆ: ಫೈನಲ್ ಪಂದ್ಯವೂ ಇಲ್ಲೇ! - cricket tourney in JK