ಮುಂಬೈ (ಮಹಾರಾಷ್ಟ್ರ): ಕ್ರಿಕೆಟ್ ಹಬ್ಬ ಎಂದೇ ಕರೆಯುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಶುಕ್ರವಾರದಿಂದ (ಮಾರ್ಚ್ 22) ವಿದ್ಯುಕ್ತ ಚಾಲನೆ ಪಡೆಯಲಿದೆ. ಮುಂಬೈ ಇಂಡಿಯನ್ಸ್ ತಂಡಕ್ಕೆ ಹೊಸ ನಾಯಕನಾಗಿ ಆಯ್ಕೆಯಾದ ಹಾರ್ದಿಕ್ ಪಾಂಡ್ಯ ಮೊದಲ ಬಾರಿಗೆ ನಿರ್ಗಮಿತ ನಾಯಕ ರೋಹಿತ್ ಶರ್ಮಾ ಅವರನ್ನು ಮೈದಾನದಲ್ಲಿ ಎದುರಾದರು.
ಮುಂಬೈ ತಂಡದ ಅತಿ ಯಶಸ್ವಿ ನಾಯಕ ರೋಹಿತ್ ಶರ್ಮಾ ಅವರನ್ನು ಹುದ್ದೆಯಿಂದ ಕೈಬಿಟ್ಟು, ಗುಜರಾತ್ ಟೈಟಾನ್ಸ್ನಿಂದ ವಲಸೆ ಬಂದ ಹಾರ್ದಿಕ್ಗೆ ಮಣೆ ಹಾಕಿದ್ದು ಭಾರೀ ಟೀಕೆಗೆ ಗುರಿಯಾಗಿತ್ತು. ಅದಾದ ಬಳಿಕ ಇಬ್ಬರು ಆಟಗಾರರು ಎಲ್ಲಿಯೂ ಎದುರಾಗಿರಲಿಲ್ಲ. ತಂಡ ಅಭ್ಯಾಸ ನಡೆಸುತ್ತಿರುವ ವೇಳೆ ಹಾರ್ದಿಕ್ ತಾವೇ ಬಂದು ರೋಹಿತ್ ಶರ್ಮಾರನ್ನು ತಬ್ಬಿಕೊಂಡ ವಿಡಿಯೋವನ್ನು ಎಂಐ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
2023 ರ ನವೆಂಬರ್ನಲ್ಲಿ ನಡೆದ ಹರಾಜಿನಲ್ಲಿ ಎರಡೂ ಫ್ರಾಂಚೈಸಿಗಳ ನಡುವಿನ ವ್ಯಾಪಾರದ ಭಾಗವಾಗಿ ಪಾಂಡ್ಯ ಗುಜರಾತ್ ಟೈಟಾನ್ಸ್ನಿಂದ ಮುಂಬೈ ತಂಡವನ್ನು ಮರು ಸೇರಿಕೊಂಡರು. ಆಲ್ರೌಂಡರ್ ಹಾರ್ದಿಕ್ ಗುಜರಾತ್ ತಂಡವನ್ನು 2 ಸೀಸನ್ನಲ್ಲಿ ಮುನ್ನಡೆಸಿ, ತಂಡದ ಮೊದಲ ಆವೃತ್ತಿಯಲ್ಲೇ ಟ್ರೋಫಿ ತಂದುಕೊಟ್ಟಿದ್ದರು.
ರೋಹಿತ್ಗೆ ಅಭಿಮಾನಿಗಳ ಬೆಂಬಲ: ಮುಂಬೈ ಇಂಡಿಯನ್ಸ್ ತಂಡಕ್ಕೆ ಹಿರಿಯ ಆಟಗಾರ ರೋಹಿತ್ ಶರ್ಮಾ ಐದು ಟ್ರೋಫಿ ಗೆಲ್ಲಿಸಿಕೊಟ್ಟಿದ್ದಾರೆ. 17ನೇ ಸೀಸನ್ಗೆ ಹಾರ್ದಿಕ್ ಪಾಂಡ್ಯರನ್ನು ಮರಳಿ ಕರೆತಂದು ನಾಯಕತ್ವ ಪಟ್ಟ ನೀಡಿದ್ದು, ರೋಹಿತ್ ಅಭಿಮಾನಿಗಳ ಕಣ್ಣು ಕೆಂಪಾಗಿಸಿದೆ. ಉಭಯ ಆಟಗಾರರ ಅಭಿಮಾನಿಗಳ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಟಾಕ್ವಾರ್ ನಡೆದಿತ್ತು. ಐದು ಬಾರಿ ಐಪಿಎಲ್ ವಿಜೇತ ನಾಯಕನ ಕೊಡುಗೆಯನ್ನು ಸ್ಮರಿಸದೆ ಅವರನ್ನು ಹುದ್ದೆಯಿಂದ ತೆಗೆದುಹಾಕುವ ಮೂಲಕ ತಂಡವು ದ್ರೋಹ ಮಾಡಿದೆ ಎಂಬ ಆರೋಪ ಕೇಳಿಬಂದಿತ್ತು. ಇದರ ನಡುವೆಯೇ ಇಬ್ಬರು ಆಟಗಾರರು ಮೈದಾನದಲ್ಲಿ ಅಪ್ಪಿಕೊಂಡಿರುವುದು ಮಹತ್ವ ಪಡೆದಿದೆ.
ನಾಯಕತ್ವ ಬಗ್ಗೆ ಗಪ್ಚುಪ್: ಈಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ತಂಡದ ನಾಯಕತ್ವ ಬದಲಾವಣೆ ಬಗ್ಗೆ ಕೋಚ್ ಮಾರ್ಕ್ ಬೌಚರ್ ಮತ್ತು ಹಾರ್ದಿಕ್ ಪಾಂಡ್ಯ ಮೌನ ತಳೆದಿದ್ದರು. ಮಾಧ್ಯಮಗಳು ಕೇಳಿದ ನಾಯಕತ್ವ ಗುದ್ದಾಟ ಬಗ್ಗೆ ಹಾರ್ದಿಕ್ ತುಟಿಪಿಟಕ್ ಅನ್ನಲಿಲ್ಲ. ಮುಖ್ಯ ತರಬೇತುದಾರ ಮಾರ್ಕ್ ಬೌಚರ್ ಕೂಡ ರೋಹಿತ್ ಅವರನ್ನು ನಾಯಕತ್ವದಿಂದ ತೆಗೆದುಹಾಕಿದ ಕಾರಣದ ಬಗ್ಗೆ ಮೌನ ವಹಿಸಿದ್ದರು. ಇದಾದ ಬಳಿಕ, ರೋಹಿತ್ ಶರ್ಮಾ ಅವರು ಬ್ಯಾಟಿಂಗ್ನಲ್ಲಿ ಹೆಚ್ಚು ಮಿಂಚಲಿ ಎಂಬ ಕಾರಣಕ್ಕಾಗಿ ನಾಯಕತ್ವ ಬದಲಿಸಲಾಗಿದೆ ಎಂದು ಸಮಜಾಯಿಷಿ ನೀಡಿದ್ದರು.
ಇದನ್ನೂ ಓದಿ: ಐಪಿಎಲ್ 2024: ಜಿಯೋ ಸಿನಿಮಾದಲ್ಲಿ 12 ಭಾಷೆಗಳಲ್ಲಿ ವೀಕ್ಷಕ ವಿವರಣೆ, ಹೀಗಿದೆ ದಿಗ್ಗಜರ ಪಟ್ಟಿ