ಹೈದರಾಬಾದ್: ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಪತ್ನಿ ನತಾಸಾ ಸ್ಟಾಂಕೋವಿಕ್‌ನಿಂದ ಬೇರ್ಪಡುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. 4 ವರ್ಷಗಳ ಕಾಲ ಒಟ್ಟಿಗೆ ಇದ್ದ ನತಾಸಾ ಮತ್ತು ನಾನು ಪರಸ್ಪರ ಬೇರೆಯಾಗಲು ನಿರ್ಧರಿಸಿದ್ದೇವೆ. ನಾವು ನಮ್ಮ ಕೈಲಾದಷ್ಟು ಒಟ್ಟಿಗೆ ಇರಲು ಪ್ರಯತ್ನಿಸಿದ್ದೇವೆ. ಆದರೆ ಅಂತಿಮವಾಗಿ ಒಟ್ಟಿಗೆ ಇರಲು ಸಾಧ್ಯವಾಗಿಲ್ಲ. ಇದು ನಮ್ಮಿಬ್ಬರ ಹಿತಾಸಕ್ತಿಯೂ ಆಗಿದೆ ಎಂದು ನಾವು ನಂಬುತ್ತೇವೆ. ಇಂತಹದ್ದೊಂದು ನಿರ್ಣಯ ಕೈಗೊಳ್ಳುವುದು ನಮಗೆ ಕಠಿಣವಾದ ನಿರ್ಧಾರವಾಗಿತ್ತು. ನಾವು ಒಟ್ಟಿಗೆ ಆನಂದಿಸಿದ ಸಂತೋಷ, ಪರಸ್ಪರ ಗೌರವ ಮತ್ತು ಒಡನಾಟವನ್ನು ಮರೆಯಲು ಸಾಧ್ಯವಿಲ್ಲ ಎಂದು ಹಾರ್ದಿಕ್ ತಮ್ಮ Instagram ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ನಾವು ಅಗಸ್ತ್ಯನೊಂದಿಗೆ ಆಶೀರ್ವದಿಸಲ್ಪಟ್ಟಿದ್ದೇವೆ, ಆತ ನಮ್ಮಿಬ್ಬರ ಜೀವನದಲ್ಲಿ ಮುಂದುವರಿಯುತ್ತಾನೆ ಮತ್ತು ಅವನ ಸಂತೋಷಕ್ಕಾಗಿ ನಾವು ಅವನಿಗೆ ಸಾಧ್ಯವಿರುವ ಎಲ್ಲವನ್ನೂ ನೀಡುವುದನ್ನು ಖಚಿತಪಡಿಸಿಕೊಳ್ಳುತ್ತೇವೆ ಎಂದು ಪಾಂಡ್ಯ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
ಈ ಕಷ್ಟಕರ ಮತ್ತು ಸೂಕ್ಷ್ಮ ಸಮಯದಲ್ಲಿ ನಮ್ಮ ವೈಯಕ್ತಿಕ ಗೌಪ್ಯತೆ ಕಾಪಾಡಲು ಸಹಕರಿಸಬೇಕು, ಈ ಸಂಬಂಧ ನಿಮ್ಮ ಬೆಂಬಲಬೇಕು ಎಂದು ಪ್ರಾಮಾಣಿಕವಾಗಿ ವಿನಂತಿಸುತ್ತೇನೆ ಎಂದು ಹಾರ್ದಿಕ್ ತಮ್ಮ ಪೋಸ್ಟ್ನಲ್ಲಿ ಮನವಿ ಕೂಡಾ ಮಾಡಿದ್ದಾರೆ.