ಬೆಳಗಾವಿ: ಶ್ರೀಲಂಕಾದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ 1ನೇ ಏಷಿಯನ್ ಪ್ಯಾರಾ ಸಿಟ್ಟಿಂಗ್ ಥ್ರೋಬಾಲ್ ಚಾಂಪಿಯನ್ ಶಿಪ್ನಲ್ಲಿ ಭಾರತದ ಪುರುಷ ಮತ್ತು ಮಹಿಳಾ ತಂಡಗಳು ಚಾಂಪಿಯನ್ ಆಗಿ ಹೊರ ಹೊಮ್ಮಿವೆ. ವಿಜೇತ ತಂಡಗಳಲ್ಲಿ ಬೆಳಗಾವಿ ಜಿಲ್ಲೆಯ ಏಳು ಆಟಗಾರರು ಅದ್ಭುತ ಪ್ರದರ್ಶನ ನೀಡುವ ಮೂಲಕ ಬೆಳಗಾವಿಗೆ ಹೆಮ್ಮೆ ತಂದಿದ್ದಾರೆ.
ಪ್ಯಾರಾ ಥ್ರೋಬಾಲ್ ಫೆಡರೇಶನ್ ಆಫ್ ಇಂಡಿಯಾ ಮತ್ತು ಪ್ಯಾರಾ ಥ್ರೋಬಾಲ್ ಫೆಡರೇಶನ್ ಶ್ರೀಲಂಕಾ ಸಹಯೋಗದಲ್ಲಿ ಶ್ರೀಲಂಕಾದ ಕೊಲಂಬೋದಲ್ಲಿ ಇದೇ ಜುಲೈ 23 ರಿಂದ 26 ರವರೆಗೆ ನಡೆದ ಅಂತಾರಾಷ್ಟ್ರೀಯ ಮಟ್ಟದ ಏಷಿಯನ್ ಪ್ಯಾರಾ ಸಿಟ್ಟಿಂಗ್ ಥ್ರೋಬಾಲ್ ಚಾಂಪಿಯನ್ ಶಿಪ್ನಲ್ಲಿ ಭಾರತ, ಶ್ರೀಲಂಕಾ, ಭೂತಾನ್, ನೇಪಾಳ ದೇಶದ ತಂಡಗಳು ಭಾಗವಹಿಸಿದ್ದವು. ಅಂತಿಮವಾಗಿ ಫೈನಲ್ ಪಂದ್ಯದಲ್ಲಿ ಪುರುಷರ ತಂಡವು ಶ್ರೀಲಂಕಾ ವಿರುದ್ಧ ಗೆಲುವಿನ ನಗೆ ಬೀರಿತು. ವಿಜೇತ ತಂಡದ ನಾಯಕ ಮಹಾಂತೇಶ ಹೊಂಗಲ ಸೇರಿ ಸೂರಜ್ ಧಾಮನೇಕರ್, ಸುರೇಶ ಕುಂಬಾರ, ಈರಣ್ಣ ಹೊಂಡಪ್ಪನವರ, ಮನಸೂರ್ ಮುಲ್ಲಾ ಕೂಡ ಬೆಳಗಾವಿ ಜಿಲ್ಲೆಯವರು.
ಇನ್ನು ಮಹಿಳಾ ತಂಡವು ಕೂಡ ಶ್ರೀಲಂಕಾ ತಂಡದ ವಿರುದ್ಧ ಚಾಂಪಿಯನ್ ಆಗಿದ್ದು, ಈ ತಂಡದಲ್ಲಿ ಬೆಳಗಾವಿಯ ಮನಿಷಾ ಪಾಟೀಲ, ಭಾಗ್ಯಶ್ರೀ ಮಳಲಿ ಅಮೋಘ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಚಾಂಪಿಯನ್ ಆದ ಬಳಿಕ ಮೊದಲ ಬಾರಿಗೆ ಇಂದು ಶನಿವಾರ ಬೆಳಗಾವಿಗೆ ಆಗಮಿಸಿದ ವಿಶೇಷಚೇತನ ಆಟಗಾರರನ್ನು ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ ವಿವಿಧ ಸಂಘ, ಸಂಸ್ಥೆಗಳು ಹಾಗೂ ಕ್ರೀಡಾ ಅಭಿಮಾನಿಗಳು ಪಟಾಕಿ ಸಿಡಿಸಿ ಅದ್ಧೂರಿಯಾಗಿ ಬರಮಾಡಿಕೊಂಡರು. ಬಳಿಕ ಅವರನ್ನು ಸತ್ಕರಿಸಿ ಗೌರವಿಸಲಾಯಿತು. ಆರ್ಥಿಕ ಸಂಕಷ್ಟ, ಅನೇಕ ಸಮಸ್ಯೆಗಳ ನಡುವೆಯೂ ದಾನಿಗಳ ನೆರವಿನ ಮೂಲಕ ಶ್ರೀಲಂಕಾಗೆ ಪ್ರಯಾಣ ಬೆಳೆಸಿದ್ದ ಇವರು, ಭಾರತ ದೇಶಕ್ಕೆ ಕಪ್ ಗೆದ್ದು ಸಾಧನೆ ಮೆರೆದಿದ್ದಾರೆ. ಈ ಆಟಗಾರರಿಗೆ ನೆರವು ನೀಡುವಂತೆ ಈಟಿವಿ ಭಾರತ ಕೂಡ ವಿಶೇಷ ವರದಿ ಮಾಡಿತ್ತು. ಆ ವೇಳೆ ಸಾಕಷ್ಟು ಆಟಗಾರರು ಇವರಿಗೆ ಸಹಾಯ ಮಾಡಿದ್ದರು.
ತಂಡದ ನಾಯಕ ಮಹಾಂತೇಶ ಹೊಂಗಲ ಮಾತು: ಚಾಂಪಿಯನ್ ತಂಡದ ನಾಯಕ ಮಹಾಂತೇಶ ಹೊಂಗಲ ಮಾಧ್ಯಮಗಳ ಜೊತೆಗೆ ಮಾತನಾಡಿ, ಶ್ರೀಲಂಕಾಗೆ ಹೋಗಲು ಬಹಳಷ್ಟು ಕಷ್ಟ ಆಗಿತ್ತು. ಆದರೆ, ಗೆಲ್ಲಲೇಬೇಕು ಎನ್ನುವ ನಮ್ಮಲ್ಲಿದ್ದ ಛಲ ಇಂದು ನಮ್ಮನ್ನು ಗೆಲ್ಲಿಸಿದೆ. ಬಹಳಷ್ಟು ಖುಷಿ ಆಗುತ್ತಿದೆ. ಪ್ಯಾರಾ ಒಲಿಪಿಂಕ್ಸ್ನಲ್ಲಿ ಆಡಬೇಕು ಎನ್ನುವ ಹಂಬಲ ನಮ್ಮಲ್ಲಿದೆ. ಸರ್ಕಾರ ನಮಗೆ ಅಗತ್ಯ ನೆರವು, ಪ್ರೋತ್ಸಾಹ ನೀಡಿದರೆ ಖಂಡಿತವಾಗಲೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇನ್ನು ಹೆಚ್ಚಿನ ಸಾಧನೆ ಮಾಡುತ್ತೇವೆ. ವಿಕಲಚೇತನ ಅಭಿವೃದ್ಧಿ ಇಲಾಖೆ ಅನುದಾನ ಸರಿಯಾಗಿ ಸದ್ಬಳಕೆ ಆಗಬೇಕು ಎಂದು ಕೇಳಿಕೊಂಡರು.
ಬೆಳಗಾವಿಯ ಇಂಡಾಲ್ಕೊ, ವೇಗಾ ಕಂಪನಿಗಳು, ಸುರೇಶ ಯಾದವ ಫೌಂಡೇಶನ್, ಫೇಸಬುಕ್ ಫ್ರೆಂಡ್ಸ್ ಸರ್ಕಲ್, ಗುಜರಾತಿ ನವರಾತ್ರಿ ಉತ್ಸವ ಮಂಡಳಿ ಸೇರಿ ಅನೇಕ ದಾನಿಗಳು ನಮಗೆ ನೆರವಿನ ಹಸ್ತ ಚಾಚಿದ್ದಾರೆ. ಅವರಿಗೆಲ್ಲಾ ನಾವು ವಿಶೇಷ ಕೃತಜ್ಞತೆ ಸಲ್ಲಿಸುತ್ತೇವೆ. ಈ ದಾನಿಗಳು ನೆರವು ನೀಡದಿದ್ದರೆ ನಾವು ಶ್ರೀಲಂಕಾಗೆ ಹೋಗಲು ಆಗುತ್ತಿರಲಿಲ್ಲ ಎಂದು ಮಹಾಂತೇಶ ಹೊಂಗಲ ಹೇಳಿದರು.
ಸಮಾಜಸೇವಕ ಸುರೇಶ ಯಾದವ ಮಾತನಾಡಿ, ''ಈ ಆಟಗಾರರಿಗೆ ಹೋಗಿ, ಬರುವ ಖರ್ಚಾದರೂ ಸರ್ಕಾರ ಕೊಡಬೇಕು. ಸರ್ಕಾರಿ ನೌಕರಿಯಲ್ಲಿ ಇವರಿಗೆ ಮೀಸಲಾತಿ ನೀಡಬೇಕು. ಅಂದಾಗ ಮಾತ್ರ ಇವ್ರು ಆರ್ಥಿಕವಾಗಿ ಸಬಲರಾಗುತ್ತಾರೆ. ಚಾಂಪಿಯನ್ ತಂಡದಲ್ಲಿ ನಮ್ಮ ಬೆಳಗಾವಿ ಏಳು ಆಟಗಾರರು ಆಡಿದ್ದು, ನಮಗೆ ಹೆಮ್ಮೆಯ ವಿಷಯ'' ಎಂದು ಹರ್ಷ ವ್ಯಕ್ತಪಡಿಸಿದರು.
ಪ್ಯಾರಾ ಸ್ಪೋರ್ಟ್ಸ್ ಕೋಚ್ ವಿ.ಎಸ್. ಪಾಟೀಲ ಮಾತನಾಡಿ, ''2015ರಲ್ಲಿ ಬಾಸ್ಕೇಟ್ ಬಾಲ್ ತರಬೇತಿ ನೀಡಿದ್ದೆ. ಅದಾದ ಬಳಿಕ ಟೇಬಲ್ ಟೆನ್ನಿಸ್, ಥ್ರೋಬಾಲ್ ಕೂಡ ಇವರು ಆಡಿದರು. ಮೊದಲ ಚಾಂಪಿಯನ್ ಶಿಪ್ನಲ್ಲೆ ಭಾರತ ತಂಡವನ್ನು ಇವರು ಚಾಂಪಿಯನ್ ಮಾಡಿದ್ದಾರೆ. ನಿಜಕ್ಕೂ ಬಹಳ ಸಂತಸವಾಗುತ್ತಿದೆ. ಮುಂದೆಯೂ ಅವರಿಗೆ 24/7 ತರಬೇತಿ ನೀಡಲು ನಾನು ಸಿದ್ಧನಿದ್ದೇನೆ'' ಎಂದು ಹೇಳಿದರು.
2023ರಲ್ಲಿ ಛತ್ತಿಸಗಡದಲ್ಲಿ ನಡೆದ 7ನೇ ರಾಷ್ಟ್ರೀಯ ಮಟ್ಟದ ವ್ಹೀಲ್ ಚೇರ್ ಬಾಸ್ಕೇಟ್ ಬಾಲ್ ಚಾಂಪಿಯನ್ ಶಿಪ್ನಲ್ಲಿ ಬೆಳ್ಳಿ ಪದಕ ವಿಜೇತ ತಂಡದಲ್ಲೂ ಬೆಳಗಾವಿಯ ಈ ಆಟಗಾರರು ಆಡಿದ್ದರು. ಅದೇ ರೀತಿ ಪುಣೆಯಲ್ಲಿ 2023ರ ಸೆಪ್ಟೆಂಬರ್ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ರಗ್ಬಿ ಚಾಂಪಿಯನ್ ಶಿಪ್ನಲ್ಲಿ ಬೆಳ್ಳಿ ಪದಕ, 2024 ಜನವರಿಯಲ್ಲಿ ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಪರ್ಪಪ್ ಫೆಸ್ಟ್ನಲ್ಲಿ ವ್ಹೀಲ್ ಚೇರ್ ಬಾಸ್ಕೆಟ್ ಬಾಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದರು. ಈಗ ಶ್ರೀಲಂಕಾದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಥ್ರೋಬಾಲ್ ಚಾಂಪಿಯನ್ ಶಿಪ್ನಲ್ಲೂ ಚಾಂಪಿಯನ್ ಆಗಿ ಇಡೀ ಏಷಿಯಾ ಖಂಡವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಸಾಮಾನ್ಯ ಆಟಗಾರರಂತೆ ವಿಕಲಚೇತನ ಆಟಗಾರರಿಗೂ ಸರ್ಕಾರ ಅಗತ್ಯ ಪ್ರೋತ್ಸಾಹ ನೀಡಿದರೆ, ಇಡೀ ವಿಶ್ವದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಇವರು ಹಾರಿಸುವುದರಲ್ಲಿ ಸಂಶಯವೇ ಇಲ್ಲ.
ಇದನ್ನೂ ಓದಿ: ಪ್ಯಾರಿಸ್ ಒಲಿಂಪಿಕ್ಸ್ 2024: ಶೂಟಿಂಗ್ನಲ್ಲಿ ಮೊದಲ ಚಿನ್ನ ಗೆದ್ದ ಚೀನಾ; ಭಾರತಕ್ಕೆ ನಿರಾಸೆ - Paris Olympics 2024