ಹೈದರಾಬಾದ್: ಟಿ-20 ವಿಶ್ವಕಪ್ ಬಳಿಕ ನಡೆಯುವ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಸೋಮವಾರ ಪ್ರಕಟವಾಗಿದೆ. ಪೂರ್ಣ ಯುವ ತಂಡವನ್ನು ಕಟ್ಟಲಾಗಿದ್ದು, ಶುಭ್ಮನ್ ಗಿಲ್ ತಂಡದ ಸಾರಥ್ಯ ವಹಿಸಲಿದ್ದಾರೆ. ಐಪಿಎಲ್ನಲ್ಲಿ ಮಿಂಚಿದ್ದ ವೇಗಿ ತುಷಾರ್ ದೇಶಪಾಂಡೆ, ಬ್ಯಾಟರ್ಗಳಾದ ರಿಯಾನ್ ಪರಾಗ್, ನಿತೀಶ್ ರೆಡ್ಡಿ, ಅಭಿಷೇಕ್ ಶರ್ಮಾಗೆ ಅವಕಾಶ ನೀಡಲಾಗಿದೆ.
ಟಿ-20 ವಿಶ್ವಕಪ್ನಲ್ಲಿ ಅವಕಾಶ ವಂಚಿತರಾಗಿದ್ದ ಶುಭ್ಮನ್ ಗಿಲ್, ರಿಂಕುಸಿಂಗ್, ಋತುರಾಜ್ ಗಾಯಕ್ವಾಡ್ ಜಿಂಬಾಬ್ವೆ ಸರಣಿಯಲ್ಲಿ ಆದ್ಯತೆ ಪಡೆದಿದ್ದಾರೆ. ವಿಶ್ವಕಪ್ನಲ್ಲಿ ಇರುವ ತಂಡದ ಪೈಕಿ ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ ಮಾತ್ರ ಇಲ್ಲಿದ್ದಾರೆ. ಉಳಿದಂತೆ ಸನ್ರೈಸರ್ಸ್ ಹೈದರಾಬಾದ್ ಪರ ಮಿಂಚು ಹರಿಸಿದ್ದ ಅಭಿಷೇಕ್ ಶರ್ಮಾ, ನಿತೀಶ್ ರೆಡ್ಡಿ, ರಾಜಸ್ಥಾನ ರಾಯಲ್ಸ್ನ ಸ್ಟಾರ್ ರಿಯಾನ್ ಪರಾಗ್, ತಂಡದಲ್ಲಿದ್ದರೂ ಅವಕಾಶ ಸಿಗದೆ ಬೆಂಚು ಕಾಯುತ್ತಿರುವ ಸಂಜು ಸ್ಯಾಮ್ಸನ್ ಸರಣಿಗೆ ಆಯ್ಕೆಯಾಗಿದ್ದಾರೆ.
🚨 NEWS
— BCCI (@BCCI) June 24, 2024
India’s squad for tour of Zimbabwe announced.#TeamIndia | #ZIMvIND
ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯಿ ಸ್ಪಿನ್ ವಿಭಾಗದಲ್ಲಿದ್ದರೆ, ಖಲೀಲ್ ಅಹ್ಮದ್, ಮುಖೇಶ್ಕುಮಾರ್, ತುಷಾರ್ ದೇಶಪಾಂಡೆ ವೇಗದ ಪಡೆಯಲ್ಲಿದ್ದಾರೆ. ಸಂಜು ಸ್ಯಾಮ್ಸನ್ ಜೊತೆಗೆ ಧ್ರುವ್ ಜುರೆಲ್ಗೆ ವಿಕೆಟ್ ಕೀಪರ್ ಆಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅವಕಾಶ ನೀಡಿದೆ.
ಸೋಮವಾರ ನಡೆದ ಸಭೆಯಲ್ಲಿ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಜುಲೈ 6 ರಿಂದ ಪ್ರಾರಂಭವಾಗುವ ಐದು ಪಂದ್ಯಗಳ ಸರಣಿಗೆ ಯುವ ಪ್ರತಿಭೆಗಳಿಗೆ ಮಣೆ ಹಾಕಿದೆ. ಎಲ್ಲಾ ಐದು ಪಂದ್ಯಗಳು ಹರಾರೆಯಲ್ಲಿ ನಡೆಯಲಿವೆ.
ಕಾಯಂ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರಿಷಬ್ ಪಂತ್, ಜಸ್ಪ್ರೀತ್ ಬುಮ್ರಾ ಸೇರಿದಂತೆ ಇಡೀ ತಂಡಕ್ಕೆ ವಿರಾಮ ನೀಡಲಾಗಿದೆ. ಯಶಸ್ವಿ ಜೈಸ್ವಾಲ್ ಮತ್ತು ಋತುರಾಜ್ ಗಾಯಕ್ವಾಡ್ ಆರಂಭಿರಾಗಿ ಕಣಕ್ಕಿಳಿದರೆ, ಶುಭ್ಮನ್ ಗಿಲ್ ಮೂರನೇ ಕ್ರಮಾಂಕದಲ್ಲಿ ಆಡಬಹುದು.
ಭಾರತ ತಂಡ ಇಂತಿದೆ: ಶುಭ್ಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್-ಕೀಪರ್), ಧ್ರುವ ಜುರೆಲ್ (ವಿಕೆಟ್-ಕೀಪರ್), ನಿತೀಶ್ ರೆಡ್ಡಿ, ವಾಶಿಂಗ್ಟನ್ ಸುಂದರ್, ರಿಯಾನ್ ಪರಾಗ್, ರವಿ ಬಿಷ್ಣೋಯ್, ಅವೇಶ್ ಖಾನ್, ಖಲೀಲ್ ಅಹ್ಮದ್, ಮುಖೇಶ್ ಕುಮಾರ್, ತುಷಾರ್ ದೇಶಪಾಂಡೆ.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಬರಲಿ: ವಾಸಿಮ್ ಅಕ್ರಮ್ - Wasim Akram On Champions Trophy