ನವದೆಹಲಿ: ಭಾರತ ಕ್ರಿಕೆಟ್ ತಂಡದ ಕೋಚ್ ಹುದ್ದೆ ನೇಮಕ ಭಾರೀ ನಿರೀಕ್ಷೆ ಮೂಡಿಸಿದೆ. ರಾಹುಲ್ ದ್ರಾವಿಡ್ ಅವರ ಉತ್ತಾರಾಧಿಕಾರಿ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಂತಿದೆ. ತಂಡದ ಹೊಸ ಕೋಚ್ ಆಗಿ ಭಾರತದ ಮಾಜಿ ಕ್ರಿಕೆಟರ್ ಆಯ್ಕೆಯಾಗಿದ್ದಾಗಿ ತಿಳಿದುಬಂದಿದೆ. ಬಿಸಿಸಿಐ ಶೀಘ್ರವೇ ಈ ಬಗ್ಗೆ ಘೋಷಣೆ ಹೊರಡಿಸಲಿದೆ ಎಂದು ಹೇಳಲಾಗುತ್ತಿದೆ.
ಭಾರತ ಕ್ರಿಕೆಟ್ ತಂಡದ ಕೋಚ್ ಹುದ್ದೆಯು ಭಾರೀ ನಿರೀಕ್ಷೆಯ ಮತ್ತು ಜವಾಬ್ದಾರಿಯ ಹುದ್ದೆಯಾಗಿದೆ. ಕೋಟ್ಯಂತರ ಜನರ ಭಾವನೆಯ ಪ್ರತಿನಿಧಿ ಹುದ್ದೆ ಇದಾಗಿದೆ. ಇಂತಹ ಅತಿದೊಡ್ಡ ಸ್ಥಾನಕ್ಕೆ ಕೆಕೆಆರ್ ತಂಡದ ಮೆಂಟರ್ ಆಗಿರುವ ಗೌತಮ್ ಗಂಭೀರ್ ಆಯ್ಕೆಯಾಗಿದ್ದಾರೆ ಎಂದು ವರದಿಯಾಗಿದೆ.
ನಿಜ. ಐಪಿಎಲ್ನಲ್ಲಿ ಕೆಕೆಆರ್ ತಂಡಕ್ಕೆ ದಶಕದ ಬಳಿಕ ಪ್ರಶಸ್ತಿ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಗೌತಮ್ ಗಂಭೀರ್ ಅವರು ಟೀಂ ಇಂಡಿಯಾ ಕೋಚ್ ಹುದ್ದೆಗೆ ಅಖೈರುಗೊಂಡಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಸದ್ಯದಲ್ಲೇ ಕ್ರಿಕೆಟ್ ಮಂಡಳಿ ಈ ಬಗ್ಗೆ ಅಧಿಕೃತ ಘೋಷಣೆ ಹೊರಡಿಸಲಿದೆ ಎಂದು ಗೊತ್ತಾಗಿದೆ.
ಗೌತಮ್ ಗಂಭೀರ್ ಭಾರತದ ಮುಖ್ಯ ಕೋಚ್ ಆಗುವುದು ಬಹುತೇಕ ಖಚಿತವಾಗಿದೆ. ಈ ಬಗ್ಗೆ ಮಾತುಕತೆಯೂ ಪೂರ್ಣಗೊಂಡಿದೆ. ಮಾಜಿ ಕ್ರಿಕೆಟಿಗ ಕೋಚ್ ಆದಲ್ಲಿ ಉತ್ತಮ ಎಂಬ ಅಭಿಪ್ರಾಯವೂ ಅಭಿಮಾನಿಗಳಲ್ಲಿದೆ. ನೇಮಕಾತಿ ಬಗ್ಗೆ ಶೀಘ್ರವೇ ಪ್ರಕಟಣೆ ಹೊರಬೀಳಲಿದೆ ಎಂದು ಐಪಿಎಲ್ ಫ್ರಾಂಚೈಸಿಯ ಮಾಲೀಕರೊಬ್ಬರು ತಿಳಿಸಿದ್ದಾಗಿ ಕ್ರೀಡಾ ಮಾಧ್ಯಮವೊಂದು ವರದಿ ಮಾಡಿದೆ.
ಜಯ್ ಶಾ- ಗಂಭೀರ್ ಮಾತುಕತೆ: ಐಪಿಎಲ್ ಫೈನಲ್ ಪಂದ್ಯದ ಬಳಿಕ ಮೈದಾನದಲ್ಲಿ ಗಂಭೀರ್ ಮತ್ತ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಾತುಕತೆ ನಡೆಸಿದ್ದು ಗಮನ ಸೆಳೆದಿತ್ತು. ಈ ವೇಳೆ ಇಬ್ಬರ ನಡುವಿನ ಚರ್ಚೆಯಲ್ಲಿ 'ನಾವು ದೇಶಕ್ಕಾಗಿ ಇದನ್ನು ಮಾಡಬೇಕು' ಎಂಬ ಮಾತು ಕೇಳಿಬಂದಿತ್ತು. ಇದರಿಂದ ಗಂಭೀರ್ ಅವರೇ ಮುಂದಿನ ಕೋಚ್ ಆಗಲಿದ್ದಾರೆ ಎಂಬ ಮಾತು ಬಲವಾಗಿ ಕೇಳಿಬಂದಿತ್ತು.
ಭಾರತ ತಂಡದ ಮುಖ್ಯ ಕೋಚ್ ಹುದ್ದೆ ಅಷ್ಟು ಸುಲಭವಲ್ಲ. ಕೋಚ್ ಆದ ಮೇಲೆ ವರ್ಷದ 10 ತಿಂಗಳು ತಂಡದ ಜೊತೆಗೆ ಪ್ರಯಾಣ ಬೆಳೆಸಬೇಕಾಗುತ್ತದೆ. ಕುಟುಂಬದಿಂದ ದೂರ ಉಳಿಯಬೇಕಾಗುತ್ತದೆ. ಇನ್ನೂ ಯುವಕನಾಗಿರುವ ಗಂಭೀರ್ಗೆ ಇದು ಸಾಧ್ಯವೇ ಎಂಬುದು ಪ್ರಶ್ನೆಯಾಗಿದೆ. ಕೆಕೆಆರ್ ತಂಡದ ಮೆಂಟರ್ ಆಗಿದ್ದಾಗ ಐಪಿಎಲ್ನ 2 ತಿಂಗಳ ಅವಧಿಯಲ್ಲಿ 5 ಬಾರಿ ರಜೆ ಹಾಕಿದ್ದರು ಎಂದು ಹೇಳಲಾಗಿದೆ.
ಇದನ್ನೂ ಓದಿ: ಭಾರತ ಕ್ರಿಕೆಟ್ ತಂಡದ ಕೋಚ್ ಹುದ್ದೆಗೆ ನರೇಂದ್ರ ಮೋದಿ, ಅಮಿತ್ ಶಾ, ಸಚಿನ್ರಿಂದ ಅರ್ಜಿ ಸಲ್ಲಿಕೆ! - team India Coach Job