21 Maiden Over in test: ಕ್ರಿಕೆಟ್ನಲ್ಲಿ ದಾಖಲೆಗಳನ್ನು ನಿರ್ಮಿಸಿವುದು ಮತ್ತು ಅವುಗಳನ್ನು ಮುರಿಯುವುದು ಸಹಜ. ಆದರೆ, ಕ್ರಿಕೆಟ್ ಇತಿಹಾಸದಲ್ಲಿ ನಿರ್ಮಾಣವಾಗಿರುವ ಕೆಲ ಅಪರೂಪದ ದಾಖಲೆಗಳು ಇಂದಿಗೂ ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ. ಅವುಗಳಲ್ಲಿ ಒಂದು, ಪಂದ್ಯವೊಂದರಲ್ಲಿ ಸತತ 21 ಮೇಡನ್ ಓವರ್ಗಳು ಮಾಡಿರುವುದಾಗಿದೆ.
ಹೌದು, ಈ ದಾಖಲೆ ನಿರ್ಮಿಸಿರುವುದು ಬೇರಾರು ಅಲ್ಲ ನಮ್ಮದೇ ಭಾರತ ಕ್ರಿಕೆಟ್ ತಂಡದ ಮಾಜಿ ಲೆಜೆಂಡರಿ ಬೌಲರ್ ರಮೇಶ್ ಚಂದ್ರ ಗಂಗಾರಾಮ್ ನಾಡಕರ್ಣಿ ಅಲಿಯಾಸ್ 'ಬಾಬು ನಾಡಕರ್ಣಿ'. ಎಡಗೈ ಸ್ಪಿನ್ನರ್ ಆಗಿದ್ದ ಬಾಪು ತಮ್ಮ ಪರಿಪೂರ್ಣ ಲೈನ್ ಮತ್ತು ಲೆಂತ್ ಬೌಲಿಂಗ್‌ಗೆ ಹೆಸರುವಾಸಿಯಾಗಿದ್ದರು. ಇವರು ಬೌಲಿಂಗ್ ಬಂದರೇ ಎದುರಾಳಿ ಬ್ಯಾಟರ್ಗಳು ರನ್ಗಳಿಸಲು ಹೆಣಗಾಡುತ್ತಿದ್ದರು. ಇಂತಹ ಶ್ರೇಷ್ಠ ಬೌಲರ್ ಸರಿಯಾಗಿ 59 ವರ್ಷಗಳ ಹಿಂದೆ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವಿಶ್ವ ದಾಖಲೆ ಬರೆದಿದ್ದರು. ಈ ದಾಖಲೆ ಮುರಿಯಲು ಇಂದಿಗೂ ಯಾವೊಬ್ಬ ಬೌಲರ್ನಿಂದ ಸಾಧ್ಯವಾಗಿಲ್ಲ.
ಮೇಡನ್ ಓವರ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಜನವರಿ 10, 1964ರಂದು ಚೆನ್ನೈನಲ್ಲಿ ಟೆಸ್ಟ್ ಪಂದ್ಯ ನಡೆದಿತ್ತು. ಮೂರನೇ ದಿನದಂದು ಅಂದರೆ ಜನವರಿ 12 ರಂದು ಇಂಗ್ಲೆಂಡ್ ತಂಡವು ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ಗೆ ಇಳಿದಿತ್ತು. ಈ ವೇಳೆ ಭಾರತದ ಪರ ಬೌಲಿಂಗ್ ಮಾಡಿದ ಬಾಪು ನಾಡಕರ್ಣಿ ಇಂಗ್ಲಿಷ್ ಬ್ಯಾಟರ್ಗಳಿಗೆ ಕಾಡಿದ್ದರು. ಬೌಲಿಂಗ್ ದಾಳಿಗೆ ನಡುಗಿದ ಆಂಗ್ಲರು ನಾಡಕರ್ಣಿ ಅವರು ಎಸೆದ ಸತತ 21 ಓವರ್‌ಗಳಲ್ಲಿ ಒಂದೇ ಒಂದು ರನ್ ಕೆಲೆ ಹಾಕಲು ಸಾಧ್ಯವಾಗದೇ ಎಲ್ಲಾ ಬೌಲ್ಗಳನ್ನು ಡಾಟ್ ಮಾಡಿದ್ದರು.
ಇದನ್ನೂ ಓದಿ: ಒಂದೇ ಓವರ್ನಲ್ಲಿ 36 ಅಲ್ಲ 77ರನ್ ಬಿಟ್ಟುಕೊಟ್ಟ ಬೌಲರ್: ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಓವರ್ ದಾಖಲು!
ಅಲ್ಲದೇ ಮೂರನೇ ದಿನದಾಟದಲ್ಲಿ ಒಟ್ಟು 32 ಓವರ್‌ಗಳ ಬೌಲಿಂಗ್ ಮಾಡಿ ಒಟ್ಟಾರೆ 27 ಮೇಡನ್ ಓವರ್ ಮಾಡಿದ್ದರು. ಐದು ಓವರ್‌ಗಳಲ್ಲಿ ತಲಾ ಒಂದರಂತೆ ಒಟ್ಟು 5 ರನ್‌ಗಳನ್ನು ಮಾತ್ರ ಬಿಟ್ಟುಕೊಟ್ಟಿದ್ದರು. ಆದರೆ ವಿಕೆಟ್ ಪಡೆಯಲು ಸಾಧ್ಯವಾಗಿರಲಿಲ್ಲ. ಉಳಿದ ಬೌಲರ್‌ಗಳು ಆಂಗ್ಲರ ಮೇಲೆ ನಾಡಕರ್ಣಿ ಸೃಷ್ಟಿಸಿದ ಒತ್ತಡದ ಲಾಭ ಪಡೆದು ವಿಕೆಟ್ ಉರುಳಿಸಿದರು. ಈ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಅವರಿಗೆ ಹೆಚ್ಚಿನ ಬೌಲಿಂಗ್ ಅವಕಾಶ ಸಿಗದ ಕಾರಣ ಒಟ್ಟು 6 ಓವರ್‌ಗಳನ್ನು ಮಾತ್ರ ಬೌಲ್ ಮಾಡಿದರು. ಈ 6 ಓವರ್‌ಗಳಲ್ಲಿಯೂ ಕೇವಲ 6 ರನ್ ಮಾತ್ರ ಬಿಟ್ಟುಕೊಟ್ಟಿದ್ದರು.
ನಾಡಕರ್ಣಿ ಕ್ರಿಕೆಟ್ ವೃತ್ತಿಜೀವನ: ನಾಡಕರ್ಣಿ ಅವರು ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಅತೀ ಕಡಿಮೆ ರನ್‌ಗಳನ್ನು ಬಿಟ್ಟುಕೊಟು ಉತ್ತಮ ಎಕಾನಮಿ ಹೊಂದಿರುವ ಬೌಲರ್ ಎನಿಸಿಕೊಂಡಿದ್ದಾರೆ. ಅವರು 41 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 65 ಇನ್ನಿಂಗ್ಸ್ ಬೌಲಿಂಗ್ ಮಾಡಿದ್ದಾರೆ. ಅಂದರೆ 9165 ಎಸೆತಗಳನ್ನು ಎಸೆದಿದ್ದಾರೆ. ಬೌಲಿಂಗ್ ಎಕಾನಮಿ 1.67 ರೊಂದಿಗೆ 88 ವಿಕೆಟ್ ಪಡೆದಿದ್ದಾರೆ. ಮತ್ತೊಂದೆಡೆ, ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ನಾಡಕರ್ಣಿ 38,913 ಎಸೆತಗಳನ್ನು ಬೌಲ್ ಮಾಡಿದ್ದು 1.64 ಬೌಲಿಂಗ್ ಎಕಾನಮಿ ಹೊಂದಿದ್ದಾರೆ.
ಇದನ್ನೂ ಓದಿ: 6 ವರ್ಷಗಳ ಹಿಂದೆಯೇ ಮಾಂಸಾಹಾರ ನಿಲ್ಲಿಸಿದ್ದ ಕೊಹ್ಲಿ: ಆ ಒಂದು ಕಾರಣಕ್ಕೆ ಸಸ್ಯಾಹಾರಿಯಾದ ವಿರಾಟ್!