ನವದೆಹಲಿ: ದೆಹಲಿಯ 7 ಲೋಕಸಭಾ ಕ್ಷೇತ್ರಗಳಿಗೆ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದ್ದು, ರಾಷ್ಟ್ರ ರಾಜಧಾನಿಯಲ್ಲಿನ ಗಣ್ಯರು ಮತದಾನ ಮಾಡುತ್ತಿದ್ದಾರೆ. ಮಾಜಿ ಕ್ರಿಕೆಟಿಗ, ಭಾರತಕ್ಕೆ ವಿಶ್ವಕಪ್ ತಂದುಕೊಟ್ಟ ಮೊದಲ ನಾಯಕ ಕಪಿಲ್ ದೇವ್ ಅವರು ಪತ್ನಿ ಜೊತೆಗೆ ಆಗಮಿಸಿ ಮತದಾನ ಮಾಡಿದರು.
ಬಳಿಕ ಪ್ರತಿಕ್ರಿಯಿಸಿ, ತಮ್ಮ ಕ್ಷೇತ್ರದಲ್ಲಿ ಸರಿಯಾದ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಮುಖ್ಯ. ದೇಶದ ಜನರು ಪ್ರಜಾಪ್ರಭುತ್ವದ ಅಡಿಯಲ್ಲಿದ್ದಾರೆ ಎಂಬುದೇ ನನಗೆ ಸಂತೋಷದ ವಿಚಾರ. ಸರ್ಕಾರ ಏನು ಮಾಡಬೇಕು ಎಂಬುದಕ್ಕಿಂತ ನಾವು ಏನು ಮಾಡಬಹುದು ಎಂಬುದು ಕೂಡ ಪ್ರಮುಖ ಎಂದು ಅಭಿಪ್ರಾಯಪಟ್ಟರು. ಇದಕ್ಕೂ ಮೊದಲು, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಮತ್ತು ಮಾಜಿ ಕುಸ್ತಿಪಟು ಬಬಿತಾ ಫೋಗಟ್ ಅವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮತದಾನ ಮಾಡಿದರು.
ಮತದಾನವು ಬೆಳಗ್ಗೆ 7 ಗಂಟೆಗೆ ಪ್ರಾರಂಭವಾಗಿದ್ದು, ಬೆಳಗ್ಗೆ 11 ಗಂಟೆಯವರೆಗೆ ದೆಹಲಿಯಲ್ಲಿ 21.69 ಪ್ರತಿಶತದಷ್ಟು ಮತದಾನವಾಗಿದೆ. ಸಂಜೆ 6 ಗಂಟೆಯವರೆಗೆ ವೋಟಿಂಗ್ ಮುಂದುವರಿಯುತ್ತದೆ. ದೆಹಲಿಯ ಏಳು ಸಂಸತ್ ಕ್ಷೇತ್ರಗಳಾದ ಚಾಂದಿನಿ ಚೌಕ್, ಪೂರ್ವ ದೆಹಲಿ, ನವದೆಹಲಿ, ಈಶಾನ್ಯ ದೆಹಲಿ, ವಾಯುವ್ಯ ದೆಹಲಿ, ದಕ್ಷಿಣ ದೆಹಲಿ ಮತ್ತು ಪಶ್ಚಿಮ ದೆಹಲಿ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ.
ಇದನ್ನೂ ಓದಿ: ಗೌತಮ್ ಗಂಭೀರ್ ಮತದಾನ; ಹೆಚ್ಚಿನ ಸಂಖ್ಯೆಯಲ್ಲಿ ವೋಟಿಂಗ್ ಮಾಡಲು ಕರೆ - Goutam Gambhir