ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಮುಂದಿನ ಕಾರ್ಯದರ್ಶಿ ಯಾರಾಗಲಿದ್ದಾರೆ ಎಂಬುದರ ಬಗ್ಗೆ ಭಾರಿ ಚರ್ಚೆಗಳು ನಡೆಯುತ್ತಿವೆ. ಇದರ ನಡುವೆಯೇ ಮುಂದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅಧ್ಯಕ್ಷ ಸ್ಥಾನಕ್ಕೆ ಜಯ್ ಶಾ ನಾಮನಿರ್ದೇಶನ ಸಲ್ಲಿಸಿ ಆಯ್ಕೆಯಾದದ್ದೇ ಆದಲ್ಲಿ ಶಾ ಭಾರತೀಯ ಕ್ರಿಕೆಟ್ ಮಂಡಳಿಯ ಹುದ್ದೆ ತೊರೆಯಬೇಕಾಗುತ್ತದೆ. ಪ್ರಸ್ತುತ ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಅವರ ಅಧಿಕಾರಾವಧಿ ನವೆಂಬರ್ 30 ರಂದು ಕೊನೆಗೊಳ್ಳಲಿದೆ. ಇಂತಹ ಪರಿಸ್ಥಿತಿಯಲ್ಲಿ ಬಿಸಿಸಿಐನ ಮುಂದಿನ ಕಾರ್ಯದರ್ಶಿಯಾಗಿ ಅರುಣ್ ಜೇಟ್ಲಿ ಅವರ ಪುತ್ರ ನೇಮಕಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಮಾಧ್ಯಮವೊಂದರ ವರದಿಯ ಪ್ರಕಾರ, ಮಾಜಿ ಕೇಂದ್ರ ಸಚಿವ ದಿವಂಗತ ಅರುಣ್ ಜೇಟ್ಲಿ ಅವರ ಪುತ್ರ ಹಾಗೂ ದೆಹಲಿ ಜಿಲ್ಲಾ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಆಗಿರುವ ರೋಹನ್ ಜೇಟ್ಲಿ ಅವರ ಹೆಸರು ಮುಂಚೂಣಿಯಲ್ಲಿದೆ. ಆದಾಗ್ಯೂ, ರೋಹನ್ಗೆ ಎಲ್ಲ ಸದಸ್ಯರು ಒಪ್ಪಿಗೆಯನ್ನು ಸೂಚಿಸಿದ್ದಾರೆ ಎನ್ನಲಾಗಿದೆ. ಆದರೇ ಹಾಲಿ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಸೇರಿದಂತೆ ಬಿಸಿಸಿಐನ ಉನ್ನತ ಅಧಿಕಾರಿಗಳು ತಮ್ಮ ಅಧಿಕಾರಾವಧಿವರೆಗೆ ಮುಂದುವರೆಯಲಿದ್ದಾರೆ.
ಜೈ ಶಾ ನಾಮಪತ್ರ ಸಲ್ಲಿಸುತ್ತಾರಾ?: ಮುಂದಿನ ಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲು ಶಾ ಆಸಕ್ತಿ ಹೊಂದಿದ್ದಾರೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಕಾರಣ ಅವರು ಇನ್ನೂ ಐಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಆ ಹುದ್ದೆಗೆ ಇನ್ನೂ ನಾಮಪತ್ರ ಸಲ್ಲಿಸಿಲ್ಲ. ನಾಮಪತ್ರ ಸಲ್ಲಿಕೆಗೆ ಆಗಸ್ಟ್ 27(ನಾಳೆ) ಕೊನೆಯ ದಿನವಾಗಿದೆ. ಸದ್ಯ ಐಸಿಸಿ ಅಧ್ಯಕ್ಷರಾಗಿರುವ ಗ್ರೆಗ್ ಬಾರ್ಕ್ಲೇ ಅವರು ಮೂರನೇ ಅವಧಿಗೆ ಮುಂದುವರೆಯಲ್ಲ ಎಂದು ಇತ್ತೀಚೆಗೆ ದೃಢಪಡಿಸಿದ್ದಾರೆ.
ಈ ಹಿಂದೆ ಶರದ್ ಪವಾರ್, ಜಗಮೋಹನ್ ದಾಲ್ಮಿಯಾ, ಶಶಾಂಕ್ ಮನೋಹರ್ ಮತ್ತು ಎನ್ ಶ್ರೀನಿವಾಸನ್ ಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದ ಭಾರತೀಯರಾಗಿದ್ದಾರೆ. ಇದೀಗ 35 ವರ್ಷದ ಜಯ್ ಶಾ ಅವರು ಐಸಿಸಿಯ ಅತ್ಯಂತ ಕಿರಿಯ ಅಧ್ಯಕ್ಷರಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಐಸಿಸಿ ನಿಯಮಗಳ ಪ್ರಕಾರ ಅಧ್ಯಕ್ಷರ ಚುನಾವಣೆಯಲ್ಲಿ 16 ಮತಗಳು ಚಲಾವಣೆಯಾಗುತ್ತವೆ. ವಿಜೇತರಿಗೆ 9 ಮತಗಳ ಅಗತ್ಯವಿದೆ. ಆದರೆ ಐಸಿಸಿ ಮಂಡಳಿಯ 16 ಸದಸ್ಯರ ಪೈಕಿ 15 ಸದಸ್ಯರ ಬೆಂಬಲವನ್ನು ಶಾ ಹೊಂದಿದ್ದಾರೆ ಎಂದು ವರದಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಐಸಿಸಿ ಅಧ್ಯಕ್ಷರ ಚುನಾವಣೆ ಜಯ್ ಶಾಗೆ ಕೇವಲ ಔಪಚಾರಿಕವಾಗಿರಲಿದೆ.