ಹೈದರಾಬಾದ್/ಮುಂಬೈ: ಟಿ-20 ವಿಶ್ವಕಪ್ನಲ್ಲಿ ಅಚ್ಚರಿಯ ಫಲಿತಾಂಶವೆಂದರೆ ಅದು ಭಾನುವಾರ ಆಸ್ಟ್ರೇಲಿಯಾ ವಿರುದ್ಧ ಅಫ್ಘಾನಿಸ್ತಾನ ಗೆಲುವು ಸಾಧಿಸಿದ್ದು. ಸೂಪರ್-8 ನಂತಹ ಮಹತ್ವದ ಹಂತದಲ್ಲಿ ಅಫ್ಘನ್ ತಂಡ ತೋರಿದ ಪ್ರದರ್ಶನ ಕಾಂಗರೂಗಳಿಗೆ ನಿಜಕ್ಕೂ ಶಾಕ್ ನೀಡಿದೆ. ಮಾಜಿ ಚಾಂಪಿಯನ್ ತಂಡ ಸೆಮಿಫೈನಲ್ಗೆ ತಲುಪಲು ಬಾಕಿ ಉಳಿದ ಭಾರತ ವಿರುದ್ಧದ ಪಂದ್ಯದಲ್ಲಿ ದೊಡ್ಡ ಅಂತರದಲ್ಲಿ ಗೆಲ್ಲಲೇಬೇಕು. ಇಲ್ಲವಾದರಲ್ಲಿ ಮನೆಯ ಹಾದಿ ಹಿಡಿಯಲಿದೆ.
ಆಸೀಸ್ ವಿರುದ್ಧ ಅಫ್ಘನ್ ಗೆಲುವು ಕ್ರಿಕೆಟ್ ಲೋಕದಲ್ಲಿ ಭಾರೀ ಶ್ಲಾಘನೆಗೆ ಒಳಗಾಗಿದೆ. ನಾಯಕ ರಶೀದ್ ಖಾನ್ರ ಚಾಣಾಕ್ಷತನ, ಆಟಗಾರರ ಬೆಂಬಲ, ಅದೃಷ್ಟ ಎಲ್ಲವೂ ಸೇರಿ ಗೆಲುವಾಗಿ ಫಲಿತಾಂಶ ಬಂದಿದೆ. ಇನ್ನೊಂದು ಹೆಜ್ಜೆಯಲ್ಲಿ ರಶೀದ್ ಬಳಗ ಯಶಸ್ಸು ಕಂಡಲ್ಲಿ ಚರಿತ್ರೆ ಸೃಷ್ಟಿಯಾಗೋದು ಮಾತ್ರ ಪಕ್ಕಾ. ಅಂದರೆ, ಭಾರತ ವಿರುದ್ಧ ಆಸ್ಟ್ರೇಲಿಯಾ ಸೋತು, ಬಾಂಗ್ಲಾದೇಶ ವಿರುದ್ಧ ಅಫ್ಘನ್ ಗೆದ್ದರೆ ತಂಡ ನಾಲ್ಕರ ಘಟ್ಟಕ್ಕೆ ನೇರ ಎಂಟ್ರಿ ಪಡೆದು ಚೊಚ್ಚಲ ಬಾರಿಗೆ ಈ ಸಾಧನೆ ಮಾಡಲಿದೆ.
ಫಲಿತಾಂಶ ತಡವಾಗಿ ಬಂದಿದೆ: ಅನನುಭವಿಗಳ ಗುಂಪಾದ ಅಫ್ಘನ್ ತಂಡದ ಮಾಜಿ ಮುಖ್ಯ ತರಬೇತುದಾರರಾಗಿದ್ದ ಲಾಲ್ಚಂದ್ ರಜಪೂತ್ ಅವರು ಈ ಸಾಧನೆಯನ್ನು ಕೊಂಡಾಡಿದ್ದಾರೆ. ತಂಡದಲ್ಲಿ ಅದ್ಭುತ ಪ್ರತಿಭೆಗಳಿದ್ದು, ಅಸಾಧ್ಯ ಎಂಬುದನ್ನು ಸಾಧಿಸಿ ತೋರಿಸುವ ಚತುರರಿದ್ದಾರೆ ಎಂದು ಹೊಗಳಿದ್ದಾರೆ.
ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಅಫ್ಘಾನಿಸ್ತಾನದ ಗೆಲುವು ದೇಶದ ಇತರ ಆಟಗಾರರು ಕ್ರಿಕೆಟ್ನಲ್ಲಿ ತೊಡಗಿಸಿಕೊಳ್ಳಲು ಸ್ಫೂರ್ತಿ ನೀಡಲಿದೆ ಎಂದು ರಜಪೂತ್ ಅವರು ಅಭಿಪ್ರಾಯಪಟ್ಟಿದ್ದಾರೆ. ಭಾರತದ ಮಾಜಿ ಆಟಗಾರ ಮತ್ತು ಕ್ರಿಕೆಟ್ ಮ್ಯಾನೇಜರ್ ಆಗಿರುವ ಅವರು, ಆಸೀಸ್ ವಿರುದ್ಧ ಗೆಲುವು ಕಂಡಿದ್ದು ಅತ್ಯಾಶ್ಚರ್ಯವೇನು ತಂದಿಲ್ಲ. ಇದು ಕಳೆದ ವರ್ಷ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ನಲ್ಲಿಯೇ ಬರಬೇಕಿತ್ತು. ಅಲ್ಲಿ ಸಾಧ್ಯವಾಗದೇ ಇಲ್ಲಿ ಫಲಿತಾಂಶ ಬಂದಿದೆ ಅಷ್ಟೇ ಎಂದು ಹೇಳಿದರು.
ಏಕದಿನ ಅಥವಾ ಟಿ20 ಪಂದ್ಯ ಆಗಿರಲಿ ಅಫ್ಘನ್ ಎದುರು ನಿಜಕ್ಕೂ ಸವಾಲು ಇರುವುದು ಆಸ್ಟ್ರೇಲಿಯಾ ತಂಡಕ್ಕೆ. ಕಾರಣ ಅಫ್ಘನ್ ತಂಡ ಬಲಿಷ್ಠವಾಗುತ್ತಾ ಸಾಗಿದೆ. ಏಕದಿನ, ಟಿ-20 ವಿಶ್ವಕಪ್ ಗೆದ್ದಿರುವ ಆಸ್ಟ್ರೇಲಿಯಾ ಯಾವಾಗಲೂ ಅಫ್ಘಾನಿಸ್ತಾನದ ವಿರುದ್ಧ ಎಚ್ಚರಿಕೆಯಿಂದ ಆಡಬೇಕು. ಅಫ್ಘನ್ ಗೆಲುವಿನ ಮೂಲಕ ಗುಂಪು 1 ರಲ್ಲಿ ಸೆಮೀಸ್ ಹಾದಿ ಮತ್ತಷ್ಟು ರೋಚಕವಾಗಿದೆ. ಭಾರತ, ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ಮೂರು ತಂಡಕ್ಕೂ ಸಮಾನ ಅವಕಾಶವಿದೆ ಎಂದರು.
ರಶೀದ್ ಖಾನ್ ಬುದ್ಧಿವಂತ ನಾಯಕ: ಅಫ್ಘಾನಿಸ್ತಾನದ ನಾಯಕ ರಶೀದ್ ಖಾನ್ ಅವರನ್ನು ರಜಪೂತ್ ಹೊಗಳಿದರು. ಅವರ ನಾಯಕತ್ವ ಉತ್ತಮವಾಗಿದೆ ಎಂದು ಬಣ್ಣಿಸಿದರು. ರಶೀದ್ ಒಬ್ಬ ಉತ್ತಮ ಕ್ರಿಕೆಟಿಗ ಜೊತೆಗೆ ಚುರುಕಿನ ಮೆದುಳುಳ್ಳ ನಾಯಕ. ಐಪಿಎಲ್ ಸೇರಿದಂತೆ ಹಲವು ಟಿ20 ಕೂಟಗಳಲ್ಲಿ ಭಾಗಿಯಾಗಿ ಉತ್ತಮ ಅನುಭವ ಸಂಪಾದಿಸಿದ್ದಾರೆ. ಗುಲ್ಬದಿನ್ ನೈಬ್ರನ್ನು ಸರಿಯಾದ ಸಮಯದಲ್ಲಿ ಬೌಲಿಂಗ್ ಇಳಿಸಿ ಪಂದ್ಯದ ದಿಕ್ಕನ್ನೇ ಬದಲಿಸಿದರು. ಇದು ಚಾಣಕ್ಯ ನಾಯಕತ್ವದ ಲಕ್ಷಣ ಎಂದು ಗುಣಗಾನ ಮಾಡಿದರು.
ಅಫ್ಘಾನಿಸ್ತಾನದಲ್ಲಿ ಭಾರತದಂತೆಯೇ ಕ್ರಿಕೆಟ್ ತಂಡವನ್ನು ಅಲ್ಲಿನ ಜನರು ಪ್ರೀತಿಸುತ್ತಾರೆ. ಅವರ ಪಾಲಿಗೆ ಕ್ರಿಕೆಟಿಗರು ಸೂಪರ್‌ಸ್ಟಾರ್‌ಗಳು. ತಂಡ ಎಲ್ಲಿಯೇ ಆಡಲಿ, ಬೆಂಬಲಿಸಲು ಕ್ರೀಡಾಂಗಣದಲ್ಲಿ ಜನರು ನೆರೆದಿರುತ್ತಾರೆ. ಈ ಗೆಲುವು ತಂಡದ ಬದಲಾವಣೆಗೆ ಬುನಾದಿ ಹಾಕಲಿದೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಸರಣಿ ಕ್ಲೀನ್ಸ್ವೀಪ್: ಇದು 'ಸ್ಮೃತಿ'ಯಲ್ಲಿ ಉಳಿಯುವ ಟೂರ್ನಿ - INDW vs SAW match