ಮೆಲ್ಬೋರ್ನ್ (ಆಸ್ಟ್ರೇಲಿಯಾ): ದಾಖಲೆಯ 25ನೇ ಗ್ರಾನ್ಸ್ಲಾಮ್ ಮೇಲೆ ಕಣ್ಣಿಟ್ಟಿರುವ ಸರ್ಬಿಯಾದ ಟೆನಿಸ್ ತಾರೆ ನೊವಾಕ್ ಜೊಕೊವಿಕ್ ವೃತ್ತಿಜೀವನದ 48ನೇ, ಆಸ್ಟ್ರೇಲಿಯಾ ಓಪನ್ನಲ್ಲಿ 11 ನೇ ಬಾರಿಗೆ ಸೆಮಿಫೈನಲ್ ತಲುಪಿದರು. ಪ್ರಶಸ್ತಿ ಗೆಲುವಿಗೆ ಇನ್ನೊಂದೇ ಮೆಟ್ಟಿಲು ದೂರವಿದ್ದಾರೆ.
ಮಂಗಳವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಮೆರಿಕದ ಟೇಲರ್ ಫ್ರಿಟ್ಜ್ ವಿರುದ್ಧ ಸರ್ಬಿಯನ್ ಆಟಗಾರ ಮೂರು ಗಂಟೆ 45 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ 7-6 (7-3) 4-6, 6-2, 6-3 ಅಂತರದಲ್ಲಿ ಗೆಲುವು ಸಾಧಿಸಿದರು. ಪ್ರಬಲ ಪೈಪೋಟಿ ನೀಡಿದ ಅಮೆರಿಕದ ಟೇಲರ್ ಕೊನೆಯಲ್ಲಿ ದಿಗ್ಗಜ ಆಟಗಾರನ ಮುಂದೆ ಮಂಡಿಯೂರಿದರು.
ಮೊದಲ ಸೆಟ್ನಲ್ಲೇ ನೊವಾಕ್ಗೆ ಪ್ರಬಲ ಸ್ಪರ್ಧೆ ನೀಡಿದ ಟೇಲರ್ ಗೆಲ್ಲಲು ಅವಕಾಶ ನೀಡಲಿಲ್ಲ. ಇದರಿಂದ ಆರಂಭದ ಸೆಟ್ ಟ್ರೈ ಬೇಕರ್ಗೆ ಮೊರೆ ಹೋಗಬೇಕಾಯಿತು. ಆದರೆ, ಇಂತಹ ನೂರಾರು ಟ್ರೈ ಬೇಕರ್ ಆಡಿರುವ ದಿಗ್ಗಜನಿಗೆ ಟೇಲರ್ ದೊಡ್ಡ ಸವಾಲಾಗಲಿಲ್ಲ. 7-3 ಅಂಕಗಳಿಂದ ಮೊದಲ ಸೆಟ್ ಅನ್ನು ನೊವಾಕ್ ವಶಪಡಿಸಿಕೊಂಡರು. ಬಳಿಕ ಎರಡನೇ ಸೆಟ್ನಲ್ಲಿ ತಿರುಗಿಬಿದ್ದ ಟೇಲರ್ ದಾಖಲೆಯ ಗ್ರಾನ್ ಸ್ಲಾಮ್ ಮಾಸ್ಟರ್ಗೆ ಚಳ್ಳೆಹಣ್ಣು ತಿನ್ನಿಸಿದರು. ಅತ್ಯುತ್ತಮ ಹೊಡೆತಗಳಿಂದ 4-6 ರಲ್ಲಿ ಸೆಟ್ ವಶಪಡಿಸಿಕೊಂಡು 1-1 ರ ಸಮಬಲ ಸಾಧಿಸಿದರು.
ದಿಗ್ಗಜನ ಏಸ್ಗಳಿಗೆ ಫ್ರೀಜ್ ಆದ ಫ್ರಿಟ್ಜ್: ಮುಂದಿನ ಎರಡೂ ಸೆಟ್ಗಳಲ್ಲಿ ಅಮೆರಿಕದ ಫ್ರಿಟ್ಜ್ ಪ್ರತಿರೋಧ ಒಡ್ಡಿದರೂ ದಿಗ್ಗಜ ಟೆನಿಸ್ ಆಟಗಾರನ ಅನುಭವದ ಮುಂದೆ ಶಕ್ತಿ ಸಾಲಲಿಲ್ಲ. ಪ್ರಬಲ ಸರ್ವ್ಗಳ ಮೂಲಕ ಕಾಡಿದ ನೊವಾಕ್ ಮುಂದಿನ ಎರಡೂ ಸೆಟ್ಗಳನ್ನು 6-2, 6-3 ರಲ್ಲಿ ಸಲೀಸಾಗಿ ಗೆದ್ದರು. ಸರ್ಬಿಯಾ ಆಟಗಾರ ಸಿಡಿಸಿದ 20 ಏಸ್ಗಳಲ್ಲಿ 16 ನಿಖರ ಗುರಿ ಸಾಧಿಸಿದ್ದವು. ಇದು ಅಮೆರಿಕನ್ ಆಟಗಾರನ ಧೃತಿಗೆಡಿಸಿತು. ಈ ಗೆಲುವಿನ ಮೂಲಕ 36 ವರ್ಷ ನೊವಾಕ್ ಗ್ರಾನ್ಸ್ಲಾಮ್ ಟೂರ್ನಿಯಲ್ಲಿ 48ನೇ ಬಾರಿಗೆ ಸೆಮಿಫೈನಲ್ ತಲುಪಿದರು. ಇಷ್ಟು ಬಾರಿ ಸೆಮೀಸ್ ತಲುಪಿದ ವಿಶ್ವದ ಏಕೈಕ ಟೆನಿಸ್ಸಿಗ ಎಂಬ ದಾಖಲೆಯನ್ನು ಮತ್ತಷ್ಟು ವಿಸ್ತರಿಸಿದರು. ಇನ್ನೊಬ್ಬ ದಿಗ್ಗಜ ಆಟಗಾರ ರೋಜರ್ ಫೆಡರರ್ 46 ಬಾರಿ ಸೆಮೀಸ್ ಹಂತ ತಲುಪಿದ್ದಾರೆ.
ಇದರ ಜೊತೆಗೆ, ಆಸ್ಟ್ರೇಲಿಯನ್ ಓಪನ್ನಲ್ಲಿ ಸತತ 33 ಗೆಲುವು ಸಾಧಿಸುವ ಮೂಲಕ ಆಸ್ಟ್ರೇಲಿಯನ್ ಪಂದ್ಯಾವಳಿಯಲ್ಲಿ ಮಾಜಿ ಟೆನಿಸ್ ಆಟಗಾರ್ತಿ ಮೋನಿಕಾ ಸೆಲೆ ಅವರ ದಾಖಲೆಯನ್ನು ಸರಿಗಟ್ಟಿದರು. ಅಲ್ಲದೆ, ಫ್ರಿಟ್ಜ್ ವಿರುದ್ಧ 9-0 ಮುನ್ನಡೆ ಸಾಧಿಸಿದರು. ನಾಲ್ಕನೇ ಶ್ರೇಯಾಂಕದ ಜಾನಿಕ್ ಸಿನ್ನರ್ ಮತ್ತು ಐದನೇ ಶ್ರೇಯಾಂಕದ ಆಂಡ್ರೆ ರುಬ್ಲೆವ್ ನಡುವಿನ ಕ್ವಾರ್ಟರ್ ಫೈನಲ್ ಬಳಿಕ ಗೆದ್ದವರನ್ನು ಜೊಕೊವಿಕ್ ಎದುರಿಸಲಿದ್ದಾರೆ.
ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಆಗಿ ಆಡುವುದಿಲ್ಲ: ದ್ರಾವಿಡ್