ನವದೆಹಲಿ: ಇಲ್ಲಿನ ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್ 2024 ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಬ್ಯಾಟಿಂಗ್ ಆಯ್ದುಕೊಂಡಿದೆ. ಆರ್ಸಿಬಿ ವಿರುದ್ಧ ಡೆಲ್ಲಿ ನಾಯಕಿ ಮೆಗ್ ಲ್ಯಾನಿಂಗ್ ಈ ನಿರ್ಣಯ ಕೈಗೊಂಡಿದ್ದಾರೆ.
ಟೂರ್ನಿಯ 2ನೇ ಆವೃತ್ತಿಯ ಅಂತಿಮ ಪಂದ್ಯದಲ್ಲಿ ಎರಡೂ ತಂಡಗಳು ಚೊಚ್ಚಲ ಪ್ರಶಸ್ತಿಗಾಗಿ ಕಾದಾಡಲಿವೆ. ಬೆಂಗಳೂರು ತಂಡ ಮೊದಲ ಬಾರಿಗೆ ಫೈನಲ್ ತಲುಪಿದೆ. ಡೆಲ್ಲಿ ಕಳೆದ ಬಾರಿಯ ರನ್ನರ್ಅಪ್ ಆಗಿದೆ. ಟಾಸ್ ವೇಳೆ ಮಾತನಾಡಿದ ಲ್ಯಾನಿಂಗ್, ''ನಾವು ಮೊದಲು ಬ್ಯಾಟಿಂಗ್ ಮಾಡುತ್ತೇವೆ, ಪಂದ್ಯ ಗೆಲ್ಲಲು ಇದು ಅತ್ಯುತ್ತಮ ಅವಕಾಶ ಎಂದು ಭಾವಿಸಿದ್ದೇವೆ. ಪಿಚ್ ಉತ್ತಮವಾಗಿದ್ದು, ನಾವು ಒಳ್ಳೆಯ ಬ್ಯಾಟಿಂಗ್ ಮಾಡಬೇಕಾಗಿದೆ. ಹಿಂದೆ ಏನಾಯಿತು ಎಂಬುದು ಅಪ್ರಸ್ತುತ, ನಾವೀಗ ಉತ್ತಮ ತಂಡದ ವಿರುದ್ಧ ಆಡುತ್ತಿದ್ದೇವೆ. ಉತ್ತಮ ಪ್ರದರ್ಶನ ನೀಡಬೇಕಿದ್ದು, ಈ ಹಿಂದಿನ ಪಂದ್ಯವನ್ನಾಡಿದ ತಂಡವನ್ನೇ ಫೈನಲ್ಗೂ ಮುಂದುವರೆಸಲಾಗಿದೆ'' ಎಂದು ತಿಳಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಂದಾಳು ಸ್ಮೃತಿ ಮಂಧಾನ ಮಾತನಾಡಿ, ''ನಾವು ಕೂಡ ಮೊದಲು ಬ್ಯಾಟಿಂಗ್ ಮಾಡಲು ಬಯಸಿದ್ದೆವು. ಆದರೆ ಸಾಧ್ಯವಿಲ್ಲ. ಇದೀಗ ಉತ್ತಮ ಬೌಲಿಂಗ್ ಮಾಡಬೇಕು, ನಮ್ಮ ಯೋಜನೆಗಳಿಗೆ ತಕ್ಕಂತೆ ಉತ್ತಮ ಕ್ರಿಕೆಟ್ ಆಡಬೇಕಿದೆ. ನಾವು ಇಲ್ಲಿಯವರೆಗೆ ಸಾಕಷ್ಟು ಏರಿಳಿತಗಳನ್ನು ಕಂಡಿದ್ದೇವೆ. ಆದರೆ ಇಂದು ರಾತ್ರಿ ನಮ್ಮ ಆಟ ಅತ್ಯುತ್ತಮವಾಗಿರಬೇಕು. ಇದೇ ವಿಕೆಟ್‌ನಲ್ಲಿ 4ನೇ ಪಂದ್ಯ ಇದಾಗಿದ್ದು, ಕೊನೆಯ ಹಣಾಹಣಿ ನಿಧಾನಗತಿಯಲ್ಲಿ ಸಾಗಿತ್ತು. ನಮ್ಮಲ್ಲಿ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ದಿಶಾ ಕಾರಟ್ ಬದಲಿಗೆ ಮೇಘನಾ ಆಡಲಿದ್ದಾರೆ'' ಎಂದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಸಬ್ಬಿನೇನಿ ಮೇಘನಾ, ಎಲ್ಲಿಸ್ ಪೆರ್ರಿ, ರಿಚಾ ಘೋಷ್(ವಿ.ಕೀ), ಸೋಫಿ ಮೊಲಿನೆಕ್ಸ್, ಜಾರ್ಜಿಯಾ ವಾರೆಹಮ್, ದಿಶಾ ಕಸತ್, ಶ್ರೇಯಾಂಕ ಪಾಟೀಲ್, ಆಶಾ ಸೋಭಾನ, ರೇಣುಕಾ ಠಾಕೂರ್ ಸಿಂಗ್
ಡೆಲ್ಲಿ ಕ್ಯಾಪಿಟಲ್ಸ್: ಮೆಗ್ ಲ್ಯಾನಿಂಗ್(ನಾಯಕಿ), ಶಫಾಲಿ ವರ್ಮಾ, ಆಲಿಸ್ ಕ್ಯಾಪ್ಸೆ, ಜೆಮಿಮಾ ರಾಡ್ರಿಗಸ್, ಮರಿಝನ್ನೆ ಕಪ್, ಜೆಸ್ ಜೊನಾಸೆನ್, ರಾಧಾ ಯಾದವ್, ಅರುಂಧತಿ ರೆಡ್ಡಿ, ತಾನಿಯಾ ಭಾಟಿಯಾ (ವಿ.ಕೀ), ಶಿಖಾ ಪಾಂಡೆ, ಮಿನ್ನು ಮಣಿ
ಇದನ್ನೂ ಓದಿ: WPL Final: ಮಂಧಾನ ಪಡೆಗೆ ಲ್ಯಾನಿಂಗ್ ತಂಡದ ಸವಾಲು: ಚೊಚ್ಚಲ ಕಪ್ ಗೆಲ್ಲುತ್ತಾ ಆರ್ಸಿಬಿ?