ನವದೆಹಲಿ: ಭಾರತದ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಅವರು ಪ್ಯಾರಿಸ್ ಒಲಿಂಪಿಕ್ 2024ರ ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಸೋಲನುಭವಿಸಿದ್ದಾರೆ. ಇದರೊಂದಿಗೆ ಸೆಮಿಫೈನಲ್‌ಗೆ ಪ್ರವೇಶಿಸಲು ಸಾಧ್ಯವಾಗದೇ ಒಲಿಂಪಿಕ್ನಿಂದ ಹೊರ ಬಿದ್ದಿದ್ದಾರೆ.
ದೀಪಿಕಾ ಕುಮಾರಿ ಅವರು ಕೊರಿಯಾದ ನಾಮ್ ಸುಹ್ಯೋನ್ ಅವರೊಂದಿಗೆ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾಗವಹಿಸಿದ್ದರು. ಈ ಪಂದ್ಯದಲ್ಲಿ ದೀಪಿಕಾ 6-4 ಅಂತರದಿಂದ ಸೋಲನ್ನು ಕಂಡರು. ದೀಪಿಕಾ ಆರಂಭಿಕ ಸುತ್ತನ್ನು 9, 10, 9 ಅಂಕಗಳೊಂದಿಗೆ 28-26 ಅಂತರದಿಂದ ಗೆದ್ದುಕೊಂಡರು. ನಂತರ ಎರಡನೇ ಸುತ್ತಿನಲ್ಲಿ ಕೊರಿಯಾದ ನಾಮ್ ಸುಹ್ಯೋನ್ 9, 9, 8 ಅಂಕಗಳೊಂದಿಗೆ 28-25 ಅಂತರದಿಂದ ಗೆದ್ದರು.
ಮೂರನೇ ಸುತ್ತಿನಲ್ಲಿ ದೀಪಿಕಾ ಮೊದಲ ಶಾಟ್ 10, ಎರಡನೇ ಶಾಟ್ 9 ಮತ್ತು ಮೂರನೇ ಶಾಟ್ 10 ಗಳಿಸಿದರೇ, ಕೊರಿಯಾದ ಆಟಗಾರ್ತಿ ಮೊದಲ ಶಾಟ್ 10, ಎರಡನೇ ಶಾಟ್ 10 ಮತ್ತು ಮೂರನೇ ಶಾಟ್ 8 ಹೊಡೆದರು. ಇದರೊಂದಿಗೆ ದೀಪಿಕಾ ಪಂದ್ಯದಲ್ಲಿ 29-28 ರಿಂದ ಮುನ್ನಡೆ ಸಾಧಿಸಿದರು.
ನಾಲ್ಕನೇ ಸುತ್ತಿನಲ್ಲಿ, ಕೊರಿಯಾದ ಆಟಗಾರ್ತಿ ಮೊದಲ ಶಾಟ್ 10, ಎರಡನೇ ಶಾಟ್ 9 ಮತ್ತು ಮೂರನೇ ಶಾಟ್ 10 ಅನ್ನು ಪಡೆದರು. ದೀಪಿಕಾ ಕುಮಾರಿ ಮೊದಲ ಶಾಟ್ 10, ಎರಡನೇ ಶಾಟ್ 7 ಮತ್ತು ಮೂರನೇ ಶಾಟ್ 10 ಅಂಕಗಳನ್ನು ಗಳಿಸಿದರು. ಇದರೊಂದಿಗೆ ದೀಪಿಕಾ ಈ ಸೆಟ್ ಅನ್ನು 27-29ರಿಂದ ಕಳೆದುಕೊಂಡರು.
ಐದನೇ ಮತ್ತು ಅಂತಿನ ಸುತ್ತಿನಲ್ಲಿ ದೀಪಿಕಾ ಮೊದಲ ಶಾಟ್ 9, ಎರಡನೇ ಶಾಟ್ 9 ಮತ್ತು ಮೂರನೇ ಶಾಟ್ 9 ಹೊಡೆದರು. ಕೊರಿಯಾದ ಆಟಗಾತಿ 10, 9, 10 ಅಂಕಗಳೊಂದಿಗೆ ದೀಪಿಕಾ ವಿರುದ್ಧ 28- 29 ಅಂತರದಿಂದ ಗೆದ್ದರು. ಇದಕ್ಕೂ ಮುನ್ನ ದೀಪಿಕಾ ಕುಮಾರಿ 1/8 ಎಲಿಮಿನೇಷನ್ ಸುತ್ತಿನ ಪಂದ್ಯದಲ್ಲಿ ಜರ್ಮನಿಯ ಮಿಚೆಲ್ ಕ್ರೊಪ್ಪೆನ್ ಅವರನ್ನು 6-4 ಅಂತರದಿಂದ ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.