ನವದೆಹಲಿ: ಭಾರತದ ಮಹಿಳಾ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಮಹಿಳೆಯರ ವೈಯಕ್ತಿಕ ವಿಭಾಗದ ಆರ್ಚರಿ ಪಂದ್ಯದದಲ್ಲಿ ಪ್ರೀ ಕ್ವಾರ್ಟರ್ ಫೈನಲ್ಗೆ ಪ್ರವೇಶ ಪಡೆದಿದ್ದಾರೆ. ಭಾರತದ ಅಗ್ರ ಬಿಲ್ಲುಗಾರ್ತಿ ದೀಪಿಕಾ ನೆದರ್ಲೆಂಡ್ಸ್‌ನ ಕ್ವಿಂಟಿ ರೋಫೆನ್ ವಿರುದ್ಧ 6-2 ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಭಾರತೀಯ ಮಹಿಳಾ ಆರ್ಚರ್ಸ್ ತಂಡವು ಕ್ವಾರ್ಟರ್ ಫೈನಲ್‌ನಲ್ಲಿ ನೆದರ್ಲೆಂಡ್ಸ್ ವಿರುದ್ಧ ಸೋಲನುಭವಿಸಿತ್ತು. ಇದರಲ್ಲಿ ದೀಪಿಕಾ ಅವರು ಕಳಪೆ ಪ್ರದರ್ಶನದಿಂದಾಗಿ ಟೀಕೆಗೆ ಗುರಿಯಾಗಿದ್ದರು. ಇದೀಗ ಸಿಂಗಲ್ಸ್ನಲ್ಲಿ ಅದೇ ನೆದರ್ಲೆಂಡ್ಸ್ ವಿರುದ್ಧ ಗೆದ್ದು ಪದಕದ ಕನಸನ್ನು ಜೀವಂತವಾಗಿರಿಸಿಕೊಂಡಿದ್ದಾರೆ. ಆಗಸ್ಟ್ 3 ರಂದು ದೀಪಿಕಾ ಕುಮಾರಿ 16ನೇ ಸುತ್ತಿನ ಪಂದ್ಯದಲ್ಲಿ ಆಡಲಿದ್ದಾರೆ. ಅಲ್ಲಿ ಅವರು ಜರ್ಮನಿಯ ಮಿಚೆಲ್ ಕ್ರೊಪೆನ್‌ರನ್ನು ಎದುರಿಸಲಿದ್ದಾರೆ.
Women's Individual Recurve 1/16 Elimination Round 🏹
— SAI Media (@Media_SAI) July 31, 2024
Deepika Kumari defeats Netherlands' Quinty Roeffen 6-2 to qualifiy for the 1/8 Elimination Round scheduled for August 3.
Let’s #Cheer4Bharat, let's cheer for Deepika!
Catch all the live action on DD Sports and Jio Cinema… pic.twitter.com/mXddwoIwhA
ಇಂದು ನಡೆದ ಪಂದ್ಯದಲ್ಲಿ ದೀಪಿಕಾ ಮೊದಲ ಸೆಟ್ ಅನ್ನು 29 ಅಂಕಗಳೊಂದಿಗೆ ಗೆಲ್ಲುವ ಮೂಲಕ ಪ್ರಾರಂಭಿಸಿದರು. ಎರಡು ಸೆಟ್ ಪಾಯಿಂಟ್‌ಗಳಿಂದ ಮುನ್ನಡೆಯನ್ನೂ ಕಾಯ್ದುಕೊಂಡರು. ಎರಡನೇ ಸುತ್ತಿನಲ್ಲಿ ರೋಫೆನ್ ಪುನರಾಗಮನ ಮಾಡಿ 29-27 ಅಂಕಗಳಿಸುವ ಮೂಲಕ ಸಮಬಲ ಸಾಧಿಸಿದರು. ನಂತರ ಡಚ್ ಬಿಲ್ಲುಗಾರ್ತಿ ಮೂರನೇ ಸೆಟ್‌ನಲ್ಲಿ ಕೆಟ್ಟ ಹೊಡೆತದಿಂದಾಗಿ ಯಾವುದೇ ಅಂಕ ದಾಖಲಿಸಲು ಸಾಧ್ಯವಾಗಲಿಲ್ಲ. ದೀಪಿಕಾ ಕೊನೆಯ ಸೆಟ್‌ನಲ್ಲಿ ತಮ್ಮ ಪ್ರದರ್ಶನವನ್ನು ಮುಂದುವರೆಸಿ ಅಂತಿಮವಾಗಿ ಎದುರಾಳಿಯನ್ನು 6-2 ರಿಂದ ಸೋಲಿಸಿದರು.
ಇದಕ್ಕೂ ಮೊದಲು, ಟೈ ಬ್ರೇಕರ್ ಪಂದ್ಯದಲ್ಲಿ ಅವರು ಎಸ್ಟೋನಿಯಾದ ಪ್ರತಿಸ್ಪರ್ಧಿ ಪರ್ನಾತ್ ರೀನಾ ಅವರನ್ನು ಸೋಲಿಸಿದ್ದರು. ದೀಪಿಕಾ ಶೀಘ್ರದಲ್ಲೇ ಪಂದ್ಯವನ್ನು ಮುಕ್ತಾಯಗೊಳಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಅವರು ನಾಲ್ಕನೇ ಸೆಟ್‌ನಲ್ಲಿ ಎಡವಿದ್ದರಿಂದ 5-5 ಅಂತರದಿಂದ ಪಂದ್ಯ ಸಮಬಲಗೊಂಡಿತು. ಈ ವೇಳೆ ಶೂಟ್-ಆಫ್ ಸುತ್ತು ನಡೆಸಲಾಯಿತು. ಇದರಲ್ಲಿ ರೀನಾ ಎಂಟು ಅಂಕಗಳನ್ನು ಗಳಿಸಿದರೇ, ದೀಪಿಕಾ 9 ಅಂಕಗಳನ್ನು ಗಳಿಸುವ ಮೂಲಕ ಪಂದ್ಯವನ್ನು ಗೆದ್ದು ಮುಂದಿನ ಸುತ್ತಿಗೆ ಅರ್ಹತೆ ಪಡೆದರು.
ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಈವರೆಗೆ ಎರಡು ಚಿನ್ನದ ಪದಕ ಸೇರಿದಂತೆ ಹಲವು ಪದಕಗಳನ್ನು ಗೆದ್ದಿರುವ 30 ವರ್ಷದ ದೀಪಿಕಾ ದೇಶದ ಅತ್ಯಂತ ಯಶಸ್ವಿ ಬಿಲ್ಲುಗಾರ್ತಿಯಾಗಿದ್ದಾರೆ.