ಚೆನ್ನೈ: ಸತತ ಎರಡು ಪಂದ್ಯಗಳಲ್ಲಿ ಸೋಲನುಭವಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡ ಮತ್ತೆ ಗೆಲುವಿನ ಟ್ರ್ಯಾಕ್ಗೆ ಮರುಳಿದೆ. ಸೋಮವಾರ ಚೆಪಾಕ್ ಮೈದಾನದಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ದದ ಪಂದ್ಯದಲ್ಲಿ ಸರ್ವಾಂಗೀಣ ಪ್ರದರ್ಶನ ತೋರಿದ ಸಿಎಸ್ಕೆ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಕೋಲ್ಕತ್ತಾ ನೀಡಿದ್ದ 138 ರನ್ಗಳ ಗುರಿಯನ್ನು ಬೆನ್ನಟ್ಟಿದ ಚೆನ್ನೈ, ಋತುರಾಜ್ ಗಾಯಕ್ವಾಡ್ (ಅಜೇಯ 67) ಅರ್ಧಶತಕ, ಡೇರಿಲ್ ಮಿಚೆಲ್ (25), ಶಿವಮ್ ದುಬೆ (28) ಬ್ಯಾಟಿಂಗ್ ನೆರವಿನಿಂದ ಚೆಪಾಕ್ ಮೈದಾದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿತು. ಮತ್ತೊಂದೆಡೆ, ಕೋಲ್ಕತ್ತಾ ತಂಡ ಈ ಋತುವಿನ ಮೊದಲ ಸೋಲನುಭವಿಸಿತು.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೆಕೆಆರ್ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 137 ರನ್ ಗಳಿಸಲಷ್ಟೇ ಶಕ್ತವಾಯಿತು. ಸಿಎಸ್ಕೆ ಬೌಲಿಂಗ್ ದಾಳಿಗೆ ಕ್ರೀಸ್ನಲ್ಲಿ ನೆಲೆಯೂರಲು ಪರದಾಡಿದ ಕೋಲ್ಕತ್ತಾ ಬ್ಯಾಟರ್ಗಳು ಅಲ್ಪ ಮೊತ್ತಕ್ಕೆ ಪೆವಿಲಿಯನ್ ಪರೇಡ್ ಮಾಡಿದರು.
ಆರಂಭಿಕ ಬ್ಯಾಟರ್ ಫಿಲಿಪ್ ಸಾಲ್ಟ್ ಶೂನ್ಯಕ್ಕೆ ನಿರ್ಗಮಿಸಿದ್ದರಿಂದ ತಂಡ ಖಾತೆ ತೆರೆಯುವ ಮುನ್ನವೇ ಮೊದಲ ವಿಕೆಟ್ ಕಳೆದುಕೊಂಡು ಹಿನ್ನಡೆ ಅನುಭವಿಸಿತು. ನಂತರ 2ನೇ ವಿಕೆಟ್ಗೆ ಸುನಿಲ್ ನರೈನ್ (27), ರಘುವಂಶಿ (24) 56 ರನ್ಗಳ ಜತೆಯಾಟ ನೀಡಿ ಪವರ್ ಪ್ಲೇನಲ್ಲಿ ತಂಡದ ಸ್ಕೋರ್ ಸುಧಾರಿಸುವಲ್ಲಿ ನೆರವಾದರು.
7ನೇ ಓವರ್ನಲ್ಲಿ ಈ ಇಬ್ಬರೂ ಬ್ಯಾಟರ್ಗಳು ಜಡೇಜಾ ಸ್ಪಿನ್ ದಾಳಿಗೆ ಸಿಲುಕಿ ವಿಕೆಟ್ ಒಪ್ಪಿಸಿ ಹೊರನಡೆದರು. ನಂತರ ಬಂದ ರಮನ್ದೀಪ್ (13), ರಿಂಕು ಸಿಂಗ್ (9), ರಸೆಲ್ (10), ಅನುಕುಲ್ ರಾಯ್ (3) ಕೂಡ ಹೆಚ್ಚು ಪ್ರದರ್ಶನ ತೋರದೆ ಪೆವಿಲಿಯನ್ ದಾರಿ ಹಿಡಿದರು. ಪಿಚ್ನ ಲಾಭ ಪಡೆದ ಸಿಎಸ್ಕೆ ಬೌಲರ್ಗಳು ಕೆಕೆಆರ್ ತಂಡವನ್ನು 137 ರನ್ಗಳ ಅಲ್ಪಮೊತ್ತಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ಕೆಕೆಆರ್ ಪರ ಶ್ರೇಯಸ್ ಅಯ್ಯರ್ (34) ಹೈಸ್ಕೋರರ್ ಎನಿಸಿಕೊಂಡರು. ಬೌಲಿಂಗ್ನಲ್ಲಿ ಸಿಎಸ್ಕೆ ಪರ ರವೀಂದ್ರ ಜಡೇಜಾ ಮತ್ತು ತುಷಾರ್ ದೇಶಪಾಂಡೆ ತಲಾ ಮೂರು ವಿಕೆಟ್ ಪಡೆದರೆ, ಮುಸ್ತುಫಿಜರ್ 2, ತೀಕ್ಷಣ 1 ವಿಕೆಟ್ ಪಡೆದರು.
ಜಡೇಜಾ ದಾಖಲೆ: ಆಲ್ರೌಂಡರ್ ರವೀಂದ್ರ ಜಡೇಜಾ ಈ ಪಂದ್ಯದಲ್ಲಿ 100 ಕ್ಯಾಚ್‌ಗಳನ್ನು ಪೂರೈಸಿದರು. ಈ ಮೂಲಕ ಮೈಲಿಗಲ್ಲನ್ನು ಸಾಧಿಸಿದ ನಾಲ್ಕನೇ ಭಾರತೀಯ ಮತ್ತು ಒಟ್ಟಾರೆ ಐದನೇ ಕ್ರಿಕೆಟಿಗರನಿಸಿಕೊಂಡರು. ಈ ಪಟ್ಟಿಯಲ್ಲಿ ಕಿಂಗ್ ಕೊಹ್ಲಿ 110 ಕ್ಯಾಚ್‌ಗಳನ್ನು ಪಡೆದು ಮೊದಲ ಸ್ಥಾನದಲ್ಲಿದ್ದಾರೆ. ಸುರೇಶ್ ರೈನಾ (109), ಕೀರಾನ್ ಪೊಲಾರ್ಡ್ (103) ಮತ್ತು ರೋಹಿತ್ ಶರ್ಮಾ (100) ನಂತರದ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: ಧೋನಿ ಭಾರತ ಕ್ರಿಕೆಟ್ ತಂಡದ ಅತ್ಯಂತ ಯಶಸ್ವಿ ನಾಯಕ: ಗೌತಮ್ ಗಂಭೀರ್ - Gautam Gambhir