ನವದೆಹಲಿ: ಸಾಧಿಸಬೇಕು ಎಂಬ ಛಲವಿದ್ದರೇ ಎಂತಹ ಕಠಿಣ ಪರಿಸ್ಥಿತಿಗಳನ್ನಾದರೂ ಎದುರಿಸಿ ನಿಲ್ಲಬೇಕಾಗುತ್ತದೆ. ಅಂದಾಗ ಮಾತ್ರ ಜೀವನದಲ್ಲಿ ಯಶಸ್ಸು ಸಿಗುತ್ತದೆ. ಇದಕ್ಕೆ ಸಾಕ್ಷಿ ಈ ಕ್ರಿಕೆಟರ್ಗಳು. ಹೌದು, ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಸಾವನ್ನೇ ಗೆದ್ದು ಬಂದಿರುವ ಈ ಆಟಗಾರರು ಕಷ್ಟದ ಸಮಯವನ್ನು ಮೆಟ್ಟಿನಿಂತು ಇಂದು ಕ್ರಿಕೆಟ್‌ನಲ್ಲಿ ಹಲವಾರು ದಾಖಲೆಗಳನ್ನು ಬರೆದಿದ್ದಾರೆ. ಯಾರು ಆ ಆಟಗಾರರು ಇಲ್ಲಿದೆ ನೋಡಿ ವಿವರ.
- ರಿಷಭ್ ಪಂತ್: ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಮತ್ತು ವಿಕೆಟ್ ಕೀಪರ್ ರಿಷಭ್ ಪಂತ್ ರಸ್ತೆ ಅಪಘಾತಕ್ಕೆ ತುತ್ತಾದ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ. ಪಂತ್ 2022 ಡಿಸೆಂಬರ್ 30 ರಂದು ಭೀಕರ ಕಾರು ಅಪಘಾತಕ್ಕೆ ತುತ್ತಾಗಿ ಗಂಭೀರವಾಗಿ ಗಾಯಗೊಂಡು 1 ವರ್ಷಕ್ಕೂ ಹೆಚ್ಚು ಕಾಲ ಕ್ರಿಕೆಟ್ನಿಂದ ದೂರ ಉಳಿದಿದ್ದ ಇವರು ಬಳಿಕ ಚೇತರಿಸಿಕೊಂಡ 2024ರ ಐಪಿಎಲ್ ಮೂಲಕ ಮೈದಾನಕ್ಕೆ ಮರಳಿದ್ದಾರೆ. ಬಳಿಕ ಟಿ20 ವಿಶ್ವಕಪ್‌ನಲ್ಲೂ ಭಾರತೀಯ ತಂಡದಲ್ಲೂ ಸ್ಥಾನ ಪಡೆದಿದ್ದರು. ಸಾವನ್ನೇ ಗೆದ್ದು ಬಂದ ಪಂತ್ ಅವರ ಕಥೆ ಹಲವರಿಗೆ ಸ್ಪೂರ್ತಿದಾಯಕವಾಗಿದೆ.
- ಒಶಾನೆ ಥಾಮಸ್: ವೆಸ್ಟ್ ಇಂಡೀಸ್ ಕ್ರಿಕೆಟಿಗ ಒಶಾನೆ ಥಾಮಸ್ ಕೂಡ ಕಾರು ಅಪಘಾತದಲ್ಲಿ ಗಾಯಗೊಂಡಿದ್ದರು. ಫೆಬ್ರವರಿ 2020ರಲ್ಲಿ ಜಮೈಕಾದಲ್ಲಿ ನಡೆದ ಅಪಘಾತದಲ್ಲಿ ಥಾಮಸ್ ಪ್ರಯಾಣಿಸುತ್ತಿದ್ದ ಕಾರು ಪಲ್ಟಿಯಾಗಿತ್ತು. ಘಟನೆಯಲ್ಲಿ ಥಾಮಸ್ ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಹಲವಾರು ದಿನಗಳ ಕಾಲ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಇದೀಗ ಚೇತರಿಸಿಕೊಂಡು ಮತ್ತೆ ವೆಸ್ಟ್ ಇಂಡೀಸ್ ತಂಡಕ್ಕೆ ಪುನರಾಗಮನ ಮಾಡಿದ್ದಾರೆ.
- ಕೌಶಲ್ ಲೋಕುರಾಚಿ: ಶ್ರೀಲಂಕಾ ಕ್ರಿಕೆಟ್ ತಂಡದ ಸ್ಪಿನ್ ಬೌಲರ್ ಕೌಶಲ್ ಲೋಕುರಾಚಿ ಕೂಡ ಕಾರು ಅಪಘಾತದಲ್ಲಿ ಗಾಯಗೊಂಡಿದ್ದರು. ಆಗಸ್ಟ್ 2003ರಲ್ಲಿ ರಸ್ತೆ ಅಪಘಾತದಲ್ಲಿ ಭುಜಕ್ಕೆ ಪೆಟ್ಟಾಗಿತ್ತು. ಬಳಿಕ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಅವರನ್ನು ತಂಡದಿಂದ ಬಿಟ್ಟಿತ್ತು. ನಂತರ ಚೇತರಿಸಿಕೊಂಡ ಅವರು ಅಭ್ಯಾಸದಲ್ಲಿ ನಿರತರಾಗಿ ಉತ್ತಮ ಪ್ರದರ್ಶನ ತೋರತೊಡಗಿದರು. ಹೀಗಾಗಿ ಅವರನ್ನು ಮಂಡಳಿ ಮತ್ತೆ ತಂಡದಲ್ಲಿ ಸೇರ್ಪಡೆ ಮಾಡಿಕೊಂಡಿದೆ. 2012ರ ವರೆಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮುಂದುವರೆದಿದ್ದರು.
- ಮನ್ಸೂರ್ ಅಲಿ ಖಾನ್ ಪಟೌಡಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಅದ್ಭುತ ಕ್ರಿಕೆಟಿಗ ಮನ್ಸೂರ್ ಅಲಿ ಖಾನ್ ಪಟೌಡಿ ಕೂಡ ಕಾರು ಅಪಘಾತದಲ್ಲಿ ಗಾಯಗೊಂಡಿದ್ದರು. ಅವರು 20 ನೇ ವಯಸ್ಸಿನಲ್ಲಿ ಸಂಭವಿಸಿದ ಅಪಘಾತದಲ್ಲಿ ಬಲಗಣ್ಣಿಗೆ ಹಾನಿಯಾಗಿತ್ತು. ಇದಾದ ನಂತರವೂ ಛಲ ಬಿಡದೇ ಅಬ್ಬರದಿಂದಲೇ ಕ್ರಿಕೆಟ್ ಮೈದಾನಕ್ಕೆ ಕಮ್ ಬ್ಯಾಕ್ ಮಾಡಿದ್ದರು. ಒಟ್ಟು 46 ಟೆಸ್ಟ್ ಪಂದ್ಯಗಳನ್ನು ಆಡಿ ಎರಡು ಸಾವಿರಕ್ಕೂ ಹೆಚ್ಚು ರನ್ ಕಲೆ ಹಾಕಿದ್ದರು.
- ಕರುಣ್ ನಾಯರ್: ಭಾರತೀಯ ಕ್ರಿಕೆಟಿಗ ಕರುಣ್ ನಾಯರ್ ಕೂಡ ಅಪಘಾತಕ್ಕೆ ತುತ್ತಾಗಿದ್ದರು. 2016ರಲ್ಲಿ ಕೇರಳದಲ್ಲಿ ನಾಯರ್ ಅಪಘಾತಕ್ಕೀಡಾಗಿದ್ದರು. ಅವರು ದೋಣಿಯಲ್ಲಿ ನದಿ ದಾಟಿದ ನಂತರ ದೇವಸ್ಥಾನಕ್ಕೆ ಹೋಗುತ್ತಿದ್ದರು, ಈ ಸಮಯದಲ್ಲಿ ಅವರ ದೋಣಿ ಅಪಘಾತಕ್ಕೀಡಾಗಿತ್ತು ಸ್ಥಳೀಯರು ನೀರಿನಿಂದ ನಾಯರ್ ಅವರನ್ನು ರಕ್ಷಿಣೆ ಮಾಡಿದ್ದರು. ಘಟನೆಯಲ್ಲಿ ಗಾಯಗೊಂಡಿದ್ದ ನಾಯರ್ ಚೇತರಿಸಿಕೊಂಡು ಮತ್ತೇ ಮೈದಾನಕ್ಕೆ ಮರಳಿದ್ದರು. ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿರುವ ಭಾರತೀಯ ಎರಡನೇ ಬ್ಯಾಟರ್ ಎಂಬ ದಾಖಲೆಯನ್ನು ಬರೆದಿದ್ದಾರೆ.