ಹೈದರಾಬಾದ್: ಐಪಿಎಲ್ನಲ್ಲಿ ಕಳಪೆ ಆಟ, ರೋಹಿತ್ ಶರ್ಮಾ ಅಭಿಮಾನಿಗಳಿಂದ ತಿರಸ್ಕಾರ, ಪತ್ನಿ ನತಾಶಾ ಸ್ಟಾಂಕೋವಿಕ್ ವಿಚ್ಚೇದನ ವದಂತಿ ಹೀಗೆ ಸಾಲು ಸಾಲು ಸಮಸ್ಯೆಗಳಲ್ಲಿ ಸಿಲುಕಿರುವ ಭಾರತ ಕ್ರಿಕೆಟ್ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ವಿಶ್ವಕಪ್ನಲ್ಲಿ ಅಚ್ಚರಿಯ ರೀತಿಯಲ್ಲಿ ಪ್ರದರ್ಶನ ನೀಡುತ್ತಿದ್ದಾರೆ.
ತಂಡಕ್ಕೆ ಅಗತ್ಯವಿರುವಾಗ ಬೌಲಿಂಗ್ನಲ್ಲಿ ವಿಕೆಟ್, ಬ್ಯಾಟಿಂಗ್ನಲ್ಲಿ ರನ್ ಗಳಿಸಿ ಟಿ20 ವಿಶ್ವಕಪ್ನಲ್ಲಿ ಆಪತ್ಬಾಂಧವನಾಗಿದ್ದಾರೆ. ಇದೆಲ್ಲ ನೋಡಿದಾಗ ಹಾರ್ದಿಕ್ ಪಾಂಡ್ಯ ಎಲ್ಲ ಸಮಸ್ಯೆಗಳಿಂದ ಹೊರಬರುತ್ತಿದ್ದಾರಾ ಎಂಬುದು ವಿಧಿತವಾಗುತ್ತಿದೆ.
ಈ ಎಲ್ಲಕ್ಕಿಂತ ಪಾಂಡ್ಯರನ್ನು ಕಾಡಿದ್ದು, ಪತ್ನಿ ನತಾಶಾ ಸ್ಟಾಂಕೋವಿಕ್ ವಿಚ್ಛೇದನ ನೀಡಲಿದ್ದಾರೆ ಎಂಬ ವೈರಲ್ ಸುದ್ದಿ. ನತಾಶಾ ತನ್ನ ಇನ್‌ಸ್ಟಾಗ್ರಾಮ್ ಖಾತೆಯಿಂದ ಪಾಂಡ್ಯ ಎಂಬ ಹೆಸರನ್ನು ಕೈಬಿಟ್ಟು, ಮದುವೆಯ ಫೋಟೋಗಳನ್ನು ಡಿಲೀಟ್ ಮಾಡಿದ ಬಳಿಕ ಇಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಹರಿದಾಡಿತ್ತು. ಹಾರ್ದಿಕ್ ತನ್ನ ಆಸ್ತಿಯಲ್ಲಿ ಶೇಕಡಾ 70ರಷ್ಟು ಪರಿಹಾರವಾಗಿ ನೀಡಲು ಮುಂದಾಗಿದ್ದಾರೆ ಎಂಬಲ್ಲಿಗೆ ವರದಿಯಾಗಿತ್ತು.
ಆದರೆ, ಕೆಲ ದಿನಗಳ ನಂತರ ಈ ವಿಷಯವೇ ತಣ್ಣಗಾಯಿತು. ದಾಂಪತ್ಯದ ಬಂಡಿ ಮತ್ತೆ ಹಳಿಗೆ ಬಂದಿದೆ ಎಂಬ ಗುಸುಗುಸು ಹಬ್ಬಿತ್ತು. ಕಾರಣ, ನತಾಶಾ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಾರ್ದಿಕ್ ಫೋಟೋಗಳನ್ನು ಮರು ಪೋಸ್ಟ್ ಮಾಡಿದ್ದರು. ಇದೀಗ ಹಾರ್ದಿಕ್ ಪಾಂಡ್ಯ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗನ ಜೊತೆಗಿನ ಮಾತುಕತೆ ವಿಚ್ಚೇದನ ವದಂತಿಗೆ ಇತಿಶ್ರೀ ಹಾಡಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.
ರಿಕ್ಕಿ ಪಾಂಟಿಂಗ್-ಪಾಂಡ್ಯ ಮಾತಲ್ಲಿ ಏನಿದೆ?: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್ ಮತ್ತು ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ಆಗಿರುವ ರಿಕ್ಕಿ ಪಾಂಟಿಂಗ್ ಅವರು ಪಾಕಿಸ್ತಾನ ಮತ್ತು ಭಾರತದ ಪಂದ್ಯಕ್ಕೂ ಮೊದಲು ಉಭಯ ತಂಡಗಳ ಆಟಗಾರರ ಜೊತೆಗೆ ಚಿಟ್ಚಾಟ್ ನಡೆಸಿದ್ದಾರೆ. ಈ ವೇಳೆ ಹಾರ್ದಿಕ್ ಮತ್ತು ರಿಕ್ಕಿ ನಡುವಿನ ಸಂಭಾಷಣೆ ಕುತೂಹಲಕಾರಿಯಾಗಿದೆ.
ಹಲೋ ರಿಕ್ಕಿ, ಎಲ್ಲವೂ ಚೆನ್ನಾಗಿದೆಯಾ, ನಿಮ್ಮ ಫ್ಯಾಮಿಲಿ ಹೇಗಿದೆ ಎಂದು ಕೇಳುತ್ತಾರೆ. ಅದಕ್ಕೆ ಪಾಂಟಿಂಗ್ ಎಲ್ಲರೂ ಚೆನ್ನಾಗಿದ್ದಾರೆ. ನಿಮ್ಮ ಕುಟುಂಬ ಹೇಗಿದೆ? ಎಂದು ಕೇಳುತ್ತಾರೆ. ಅದಕ್ಕೆ ಪಾಂಡ್ಯ, "ಆಲ್ ಗುಡ್, ಆಲ್ ಸ್ವೀಟ್" ಎನ್ನುತ್ತಾರೆ. ಈ ಹೇಳಿಕೆ ಕ್ರಿಕೆಟಿಗನ ಕುಟುಂಬದಲ್ಲಿ ಬಿರುಕು ಇಲ್ಲ ಎಂಬುದನ್ನು ತೋರಿಸುತ್ತದೆ. ಈ ಹೇಳಿಕೆ ಮೂಲಕ ಹಾರ್ದಿಕ್ ಪಾಂಡ್ಯ ಎಲ್ಲ ವದಂತಿಗಳಿಗೆ ತೆರೆ ಎಳೆದಿದ್ದಾರೆ ಎಂದೂ ವಿಶ್ಲೇಷಿಸಲಾಗುತ್ತಿದೆ.
ಇಬ್ಬರ ನಡುವಿನ ಸಂಭಾಷಣೆಯ ವಿಡಿಯೋವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ 'ಎ ಡೇ ಇನ್ ರಿಕಿ ಪಾಂಟಿಂಗ್ಸ್ ಲೈಫ್' ಶೀರ್ಷಿಕೆಯಡಿ ಹಂಚಿಕೊಂಡಿದೆ. ಅದರಲ್ಲಿ ಪಾಂಡ್ಯರ ಈ ಹೇಳಿಕೆ ಕೇಳಬಹುದು.