ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತು ಭಾರತೀಯ ಅಭಿಮಾನಿಗಳನ್ನು ಓಲೈಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೊಸ ಕ್ರಮಕ್ಕೆ ಮುಂದಾಗಿದೆ. ಪಿಸಿಬಿ ಅಧ್ಯಕ್ಷ ಮತ್ತು ಫೆಡರಲ್ ಗೃಹ ಸಚಿವ ಮೊಹ್ಸಿನ್ ನಖ್ವಿ ಅವರು ಮುಂದಿನ ವರ್ಷದ ಆರಂಭದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ ಪಾಕಿಸ್ತಾನಕ್ಕೆ ಭೇಟಿ ನೀಡುವ ಆಶಯದೊಂದಿಗೆ ಭಾರತೀಯ ಅಭಿಮಾನಿಗಳಿಗೆ ತ್ವರಿತ ವೀಸಾ ನೀಡಿಕೆ ಭರವಸೆ ನೀಡಿದ್ದಾರೆ. ಅಮೆರಿಕದ ಸಿಖ್ ಯಾತ್ರಿಕರ ತಂಡವನ್ನು ಭೇಟಿಯಾದ ವೇಳೆ ಅವರು ಈ ಭರವಸೆ ನೀಡಿದ್ದಾರೆ.
ಭಾರತೀಯ ಅಭಿಮಾನಿಗಳಿಗೆ ಆದ್ಯತೆಯ ವೀಸಾ ನೀಡುವ ಆಶಯ; 'ನಾವು ಭಾರತೀಯ ಅಭಿಮಾನಿಗಳಿಗೆ ಟಿಕೆಟ್‌ಗಳ ವಿಶೇಷ ಕೋಟಾ ಇಡುತ್ತೇವೆ ಮತ್ತು ವೀಸಾ ನೀಡುವ ನೀತಿಯನ್ನು ವೇಗಗೊಳಿಸಲು ಪ್ರಯತ್ನಿಸುತ್ತೇವೆ' ಎಂದು ಮೊಹ್ಸಿನ್ ನಖ್ವಿ ಹೇಳಿರುವುದಾಗಿ ವರದಿ ಆಗಿದೆ ಎಂಬುದನ್ನು ಭಾರತೀಯ ಸುದ್ದಿ ಸಂಸ್ಥೆಯೊಂದು ತಿಳಿಸಿದೆ. ಭಾರತೀಯ ಅಭಿಮಾನಿಗಳು ಪಾಕಿಸ್ತಾನಕ್ಕೆ ಬಂದು ಲಾಹೋರ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯವನ್ನು ವೀಕ್ಷಿಸಲು ಪಿಸಿಬಿ ಬಯಸುತ್ತದೆ ಎಂದು ಅವರು ಹೇಳಿದ್ದಾರೆ ಎನ್ನಲಾಗಿದೆ.
ಎಲ್ಲಾ ತಂಡಗಳು ಭಾಗವಹಿಸುವ ವಿಶ್ವಾಸ: ಭಾರತ ಕ್ರಿಕೆಟ್ ತಂಡ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸುವ ವಿಶ್ವಾಸವಿದೆ ಎಂದು ನಖ್ವಿ ಹೇಳಿದ್ದಾರೆ. ಭಾರತ ತಂಡ ಪಾಕಿಸ್ತಾನಕ್ಕೆ ಬರಬೇಕು ಎಂದು ನಖ್ವಿ ಕರೆಕೊಟ್ಟಿದ್ದರು, ಅಷ್ಟೇ ಅಲ್ಲ ಟೀಂ ಇಂಡಿಯಾ ಪಾಕ್ ಪ್ರವಾಸವನ್ನು ರದ್ದುಗೊಳಿಸುತ್ತದೆ ಅಥವಾ ಮುಂದೂಡುತ್ತದೆ ಎಂದು ನಾನು ಭಾವಿಸುವುದಿಲ್ಲ. ನಾವು ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಎಲ್ಲಾ ತಂಡಗಳಿಗೆ ಆತಿಥ್ಯ ವಹಿಸುತ್ತೇವೆ ಎಂಬ ವಿಶ್ವಾಸವಿದೆ ಎಂದು ನಖ್ವಿ ಇತ್ತೀಚೆಗೆ ಹೇಳಿದ್ದರು.
ಇನ್ನೂ ಬಿಡುಗಡೆಯಾಗದ ಚಾಂಪಿಯನ್ಸ್ ಟ್ರೋಫಿಯ ವೇಳಾಪಟ್ಟಿ: ICC ಚಾಂಪಿಯನ್ಸ್ ಟ್ರೋಫಿ 2025 ಫೆಬ್ರವರಿ 19 ರಿಂದ ಪ್ರಾರಂಭವಾಗಲಿದೆ. ಅದರ ಫೈನಲ್ ಮಾರ್ಚ್ 9 ರಂದು ನಡೆಯಲಿದೆ ಎಂದು ಹೇಳಲಾಗಿದೆ. ಟೂರ್ನಿಯ ಎಲ್ಲಾ ಪಂದ್ಯಗಳು ಲಾಹೋರ್, ಕರಾಚಿ ಮತ್ತು ರಾವಲ್ಪಿಂಡಿಯಲ್ಲಿ ನಡೆಯಲಿವೆ. ಐಸಿಸಿ ಇನ್ನೂ ಪಂದ್ಯಾವಳಿಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಏಕೆಂದರೆ ಭಾರತ ಸರ್ಕಾರವು ತನ್ನ ತಂಡವನ್ನು ಟೂರ್ನಿಗಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಲು ಅವಕಾಶ ನೀಡುತ್ತದೆಯೇ ಎಂಬ ಬಗೆಗಿನ ದೃಢೀಕರಣಕ್ಕಾಗಿ ಕಾಯುತ್ತಿದೆ.
ಭಾರತ ಸರ್ಕಾರ ಪಾಕಿಸ್ತಾನಕ್ಕೆ ಹೋಗುವ ನಿರ್ಧಾರ ತೆಗೆದುಕೊಳ್ಳುತ್ತಾ?: ಪಾಕಿಸ್ತಾನ ಪ್ರವಾಸದ ವಿಷಯದಲ್ಲಿ ತನ್ನ ಸರ್ಕಾರ ಕೈಗೊಳ್ಳುವ ಯಾವುದೇ ನಿರ್ಧಾರಕ್ಕೆ ತಾವು ಬದ್ಧವಾಗಿರುವುದಾಗಿ ಬಿಸಿಸಿಐ ಸ್ಪಷ್ಟಪಡಿಸಿದೆ. 2008 ರ ಮುಂಬೈ ಭಯೋತ್ಪಾದಕ ದಾಳಿಯ ನಂತರ ಭಾರತೀಯ ತಂಡ ಪಾಕಿಸ್ತಾನ ಪ್ರವಾಸ ಕೈಗೊಂಡಿಲ್ಲ. 2007 ರಿಂದ ಉಭಯ ದೇಶಗಳ ನಡುವೆ ಯಾವುದೇ ಟೆಸ್ಟ್ ಸರಣಿ ಕೂಡಾ ನಡೆದಿಲ್ಲ.
ಇದನ್ನು ಓದಿ: ಮೂರನೇ ಟೆಸ್ಟ್: ಜಡೇಜಾ, ವಾಷಿಂಗ್ಟನ್ ಸುಂದರ್ ಮಾರಕ ಬೌಲಿಂಗ್ ದಾಳಿಗೆ ಕಿವೀಸ್ ತತ್ತರ