ನವದೆಹಲಿ: ಪಾಕಿಸ್ತಾನ-ಬಾಂಗ್ಲಾದೇಶ ನಡುವಿನ 2 ಟೆಸ್ಟ್ ಕ್ರಿಕೆಟ್ ಸರಣಿಯ ಮೊದಲ ಪಂದ್ಯ ಆಗಸ್ಟ್ 21ರಿಂದ (ಬುಧವಾರ) ಆರಂಭವಾಗಲಿದೆ. ಈ ಪಂದ್ಯಕ್ಕೂ ಮುನ್ನ ಶಾನ್ ಮಸೂದ್ ಸಾರಥ್ಯದ ಪಾಕ್ ತಂಡ ದೊಡ್ಡ ಹಿನ್ನಡೆ ಅನುಭವಿಸಿದೆ. ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನವೇ ವೇಗದ ಬೌಲರ್ ಅಮೀರ್ ಜಮಾಲ್ ಗಾಯದಿಂದಾಗಿ ಸರಣಿಯಿಂದಲೇ ಹೊರಗುಳಿದಿದ್ದಾರೆ.
ಅಮೀರ್ ಜಮಾಲ್ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಆಡುವಾಗ ಬೆನ್ನುನೋವಿಗೆ ತುತ್ತಾಗಿದ್ದರು. ಇದರ ನಂತರ, ಚೇತರಿಸಿಕೊಳ್ಳಲು ಎಲ್ಲಾ ಪ್ರಯತ್ನ ಮಾಡಿದರೂ ಸಾಧ್ಯವಾಗಿಲ್ಲ.
ಜಮಾಲ್ ಪಾಕ್ ಪರ ಇದುವರೆಗೆ ಕೇವಲ 3 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ 6 ಇನಿಂಗ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ 18 ವಿಕೆಟ್ ಪಡೆದುಕೊಂಡಿದ್ದಾರೆ. ಎಕಾನಮಿ 4.9 ಆಗಿದ್ದರೆ, ಅತ್ಯುತ್ತಮ ಪ್ರದರ್ಶನ 6/69 ಆಗಿದೆ. ಇದರೊಂದಿಗೆ ಬ್ಯಾಟಿಂಗ್ ಮೂಲಕ 1 ಅರ್ಧಶತಕ ದಾಖಲಾಗಿದೆ. ಒಟ್ಟಾರೆ ಟೆಸ್ಟ್ನಲ್ಲಿ 143 ರನ್‌ಗಳನ್ನು ಕಲೆಹಾಕಿದ್ದಾರೆ.
ಬಾಂಗ್ಲಾ ವಿರುದ್ಧದ ಎರಡು ಟೆಸ್ಟ್‌ಗಳ ಸರಣಿಯ ಮೊದಲ ಪಂದ್ಯ ಆಗಸ್ಟ್ 21ರಿಂದ 25ರ ವರೆಗೆ ನಡೆಯಲಿದೆ. ಎರಡನೇ ಟೆಸ್ಟ್ ಆಗಸ್ಟ್ 30ರಿಂದ ಸೆಪ್ಟೆಂಬರ್ 3ರ ವರೆಗೆ ನಿಗದಿಯಾಗಿದೆ. ಈ ಎರಡೂ ಪಂದ್ಯಗಳು ಪಾಕಿಸ್ತಾನದ ಕಾಲಮಾನ ಪ್ರಕಾರ ಬೆಳಗ್ಗೆ 11 ಗಂಟೆಗೆ ಆರಂಭವಾಗುತ್ತವೆ. ರಾವಲ್ಪಿಂಡಿ ಕ್ರಿಕೆಟ್ ಮೈದಾನದಲ್ಲಿ ಪಂದ್ಯಗಳು ನಡೆಯಲಿವೆ.
ಇದನ್ನೂ ಓದಿ: ಯುವಿ ಅಭಿಮಾನಿಗಳಿಗೆ ಗುಡ್ ನ್ಯೂಸ್! ಶೀಘ್ರ ಸೆಟ್ಟೇರಲಿದೆ 'ಸಿಕ್ಸರ್' ಸಿಂಗ್ ಜೀವನಾಧರಿತ ಸಿನಿಮಾ - Yuvraj Singh Biopic