ಲಂಡನ್ (ಇಂಗ್ಲೆಂಡ್): ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಹಾಗೂ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಹೊಸ ದಾಖಲೆ ಬರೆದಿದ್ದಾರೆ. ಲಂಡನ್‌ನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದ ಎರಡನೇ ದಿನ ವಿಶಿಷ್ಟ ಸಾಧನೆ ಮಾಡಿ ಎಲೈಟ್ ಲಿಸ್ಟ್‌ಗೆ ಸೇರ್ಪಡೆಯಾಗಿದ್ದಾರೆ. ಜಾಕ್ ಕಾಲಿಸ್ ಹಾಗೂ ಸರ್ ಗ್ಯಾರಿಫೀಲ್ಡ್ ಸೋಬರ್ಸ್ ನಂತರ 6000 ರನ್‌ಗಳು ಹಾಗೂ 200 ವಿಕೆಟ್‌ಗಳನ್ನು ಪಡೆದ ವಿಶ್ವದ ಮೂರನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಬೆನ್ ಸ್ಟೋಕ್ಸ್ ಪಾತ್ರರಾಗಿದ್ದಾರೆ. ಜೊತೆಗೆ ಈ ಸಾಧನೆ ಮಾಡಿದ ಮೊದಲ ಇಂಗ್ಲೆಂಡ್ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
2ನೇ ಇನ್ನಿಂಗ್ಸ್‌ನಲ್ಲಿ ಕಿರ್ಕ್ ಮೆಕೆಂಜಿ ಅವರನ್ನು ಔಟ್ ಮಾಡುವ ಮೂಲಕ ಮೈಲಿಗಲ್ಲು ಮುಟ್ಟಿದರು. ಅಲ್ಲದೇ, ಅವರು ಎಲ್ಲ ಮೂರು ಫಾರ್ಮೇಟ್ನಲ್ಲಿ 10,000 ರನ್ ಮತ್ತು 300 ವಿಕೆಟ್ ಗಳಿಸಿದ ಆರನೇ ಅಂತಾರಾಷ್ಟ್ರೀಯ ಕ್ರಿಕೆಟಿಗರಾಗಿ ಹೊರಹೊಮ್ಮಿದರು. ಇದಕ್ಕೂ ಮುನ್ನ ಕಾರ್ಲ್ ಹೂಪರ್, ಸನತ್ ಜಯಸೂರ್ಯ, ಜಾಕ್ವೆಸ್ ಕಾಲಿಸ್, ಶಾಹಿದ್ ಅಫ್ರಿದಿ ಮತ್ತು ಶಕೀಬ್ ಅಲ್ ಹಸನ್ ಈ ಸಾಧನೆ ಮಾಡಿದ್ದರು.
ಮೊದಲ ಇನ್ನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್ ಅನ್ನು 121 ರನ್‌ಗಳ ಅತ್ಯಲ್ಪ ಮೊತ್ತ ಗಳಿಸಿ ಆಲ್ಔಟ್ ಆಯಿತು. ಇದಕ್ಕೆ ಪ್ರತಿಯಾಗಿ ಇಂಗ್ಲೆಂಡ್ 371 ರನ್ ಗಳಿಸಿತು. ಎರಡನೇ ದಿನದಾಟದ ಅಂತ್ಯಕ್ಕೆ ವೆಸ್ಟ್ ಇಂಡೀಸ್ 105/9 ರನ್ ಗಳಿಸಿದೆ. ಆತಿಥೇಯರ ಪರ ಜೋ ರೂಟ್, ಆಲಿ ಪೋಪ್, ಹ್ಯಾರಿ ಬ್ರೂಕ್ ಮತ್ತು ಝಾಕ್ ಕ್ರಾಲಿ ಅರ್ಧಶತಕ ಗಳಿಸಿದರು.