ನವದೆಹಲಿ: ಅಭ್ಯಾಸ ಶಿಬಿರ, ಟೂರ್ನಿಗಳಲ್ಲಿ ಭಾಗವಹಿಸುವಿಕೆ ಸೇರಿದಂತೆ ವಿದೇಶಿ ಕ್ರಿಕೆಟ್ ಮಂಡಳಿಗಳ ಜೊತೆ ರಾಜ್ಯ ಕ್ರಿಕೆಟ್ ಸಂಸ್ಥೆಗಳು ನೇರವಾಗಿ ಒಪ್ಪಂದ ಮಾಡಿಕೊಳ್ಳುವುದನ್ನು ನಿಷೇಧಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂದಾಗಿದೆ. ಈ ಬಗ್ಗೆ ಮಾರ್ಚ್ 18 ರಂದು ನಡೆಯುವ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ದೆಹಲಿ ಮತ್ತು ಪುದುಚೇರಿ ಸೇರಿದಂತೆ ಹಲವು ರಾಜ್ಯ ಕ್ರಿಕೆಟ್ ಸಂಸ್ಥೆಗಳು ತಮ್ಮ ತಂಡಗಳಿಗೆ ಆತಿಥ್ಯ ವಹಿಸಲು ವಿದೇಶಿ ಕ್ರಿಕೆಟ್ ಮಂಡಳಿಗಳೊಂದಿಗೆ, ವಿಶೇಷವಾಗಿ ನೆರೆ ರಾಷ್ಟ್ರಗಳೊಂದಿಗೆ ಬಿಸಿಸಿಐ ಒಪ್ಪಿಗೆ ಇಲ್ಲದೇ ಒಪ್ಪಂದ ಮಾಡಿಕೊಂಡಿರುವುದು ಆಕ್ಷೇಪಕ್ಕೆ ಕಾರಣವಾಗಿದೆ. ಹೀಗಾಗಿ ನೇರ ಸಂಪರ್ಕವನ್ನು ಕಡಿದು ಹಾಕುವ ನಿಯಮ ರೂಪಿಸಲು ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಚಿಂತಿಸಿದೆ.
ಇತ್ತೀಚೆಗೆ ದೆಹಲಿ ಮತ್ತು ಪುದುಚೇರಿ ಜಿಲ್ಲಾ ಕ್ರಿಕೆಟ್ ಸಂಸ್ಥೆಗಳು ನೇಪಾಳ ಕ್ರಿಕೆಟ್ ಮಂಡಳಿಯ ಜೊತೆ ಕ್ರಿಕೆಟ್ ಕುರಿತಾಗಿ ಬಿಸಿಸಿಐ ಮುಂದಾಳತ್ವ ಇಲ್ಲದೇ ಒಪ್ಪಂದ ಮಾಡಿಕೊಂಡಿರುವುದು ಖಚಿತವಾಗಿದೆ. ರಾಜ್ಯ ಕ್ರಿಕೆಟ್ ಸಂಸ್ಥೆಗಳ ಮೇಲುಸ್ತುವಾರಿ ವಹಿಸುವ ಬಿಸಿಸಿಐಗೆ ಈ ಬಗ್ಗೆ ಮಾಹಿತಿ ನೀಡದೇ ವ್ಯವಹಾರ ನಡೆಸಿರುವುದು ಕಣ್ಣು ಕೆಂಪಾಗಿಸಿದೆ.
ಹೊಸ ನಿಯಮವೇನು?: ಬಿಸಿಸಿಐ ಮೂಲಗಳ ಪ್ರಕಾರ, 'ಕ್ರಿಕೆಟ್ಗೆ ಸಂಬಂಧಿತ ಚಟುವಟಿಕೆಗಳಿಗಾಗಿ ರಾಜ್ಯ ಸಂಸ್ಥೆಗಳು ವಿದೇಶಿ ಕ್ರಿಕೆಟ್ ಮಂಡಳಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬಹುದು. ಆದರೆ, ಅಂತಹ ಪಾಲುದಾರಿಕೆಗಳು ಬಿಸಿಸಿಐನ ಪೌರೋಹಿತ್ಯದಲ್ಲೇ ಇರಬೇಕು. ಏಕೆಂದರೆ ಅದು ಮಾತೃ ಸಂಸ್ಥೆಯಾಗಿದೆ. ಎಲ್ಲ ಪ್ರಸ್ತಾಪಗಳನ್ನು ಬಿಸಿಸಿಐ ಮೂಲಕವೇ ನಡೆಸಬೇಕು. ವಿದೇಶಿ ಮಂಡಳಿಗಳ ಜೊತೆಗೂಡಿ ರಾಜ್ಯ ಕ್ರಿಕೆಟ್ ಸಂಸ್ಥೆಗಳು ಪಂದ್ಯಗಳನ್ನು ಆಯೋಜಿಸಲು ಒಪ್ಪಂದದ ಕುರಿತು ಮುಂಬರುವ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಚರ್ಚೆ ನಡೆಯಲಿದೆ. ಇದಾದ ಬಳಿಕ ಬಿಸಿಸಿಐ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿದು ಬಂದಿದೆ.
ಈ ವರ್ಷ ಜೂನ್‌ನಲ್ಲಿ ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್‌ಗೆ ಅರ್ಹತೆ ಪಡೆದಿರುವ ನೇಪಾಳ ತಂಡ ಕ್ರಿಕೆಟ್ ಕೌಶಲ್ಯ ವೃದ್ಧಿಸಿಕೊಳ್ಳಲು ಭಾರತದ ರಾಜ್ಯ ತಂಡಗಳ ಜೊತೆ ಪಂದ್ಯಗಳನ್ನು ಆಡಲಿದೆ. ವಿಶ್ವಕಪ್ಗೂ ಮುನ್ನ ಆ ತಂಡ ಇಲ್ಲಿಗೆ ಬಂದು ಅಭ್ಯಾಸ ನಡೆಸಲಿದೆ. ನೇಪಾಳ ಕ್ರಿಕೆಟ್ ಮಂಡಳಿಯ ಅಧಿಕಾರಿಗಳು ಕಳೆದ ತಿಂಗಳು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರೊಂದಿಗೆ ಸಭೆ ನಡೆಸಿ ಮಾತುಕತೆ ನಡೆಸಿದ್ದರು.
ನೆರೆ ರಾಷ್ಟ್ರಗಳಿಗೆ ಬಿಸಿಸಿಐ ಈ ಹಿಂದೆಯೂ ಸಹಾಯ ಮಾಡಿದೆ. ಕ್ರಿಕೆಟ್ನಲ್ಲಿ ಪ್ರವರ್ಧಮಾನಕ್ಕೆ ಬಂದಿರುವ ಅಫ್ಘಾನಿಸ್ತಾನ ತಂಡ ಕೆಲ ವರ್ಷಗಳ ಹಿಂದೆ ಭಾರತವನ್ನೇ ತನ್ನ ನೆಲೆಯನ್ನಾಗಿ ಮಾಡಿಕೊಂಡಿತ್ತು. ಡೆಹ್ರಾಡೂನ್ ಮತ್ತು ಗ್ರೇಟರ್ ನೋಯ್ಡಾದಲ್ಲಿ ಸ್ಥಳೀಯ ತಂಡಗಳ ಜೊತೆಗೆ ಕ್ರಿಕೆಟ್ ಆಡಿ ಅಭ್ಯಾಸ ಮಾಡುತ್ತಿತ್ತು. ಈಗ ಅಂತಾರಾಷ್ಟ್ರೀಯ ದೈತ್ಯ ತಂಡಗಳನ್ನು ಸೆಣಸಾಡುವಷ್ಟು ಸಾಮರ್ಥ್ಯವನ್ನು ಗಳಿಸಿದೆ.
ಇನ್ನು, ಶ್ರೀಲಂಕಾ ಕ್ರಿಕೆಟ್ ಮಂಡಳಿ ಜೊತೆ, ಜಪಾನ್ ಕ್ರಿಕೆಟ್ ಸಂಸ್ಥೆಯು ಒಡಂಬಡಿಕೆ ಬುಧವಾರ (ಮಾರ್ಚ್ 13) ಮಾಡಿಕೊಂಡಿದೆ. ಅದರಂತೆ ಜಪಾನ್‌ನಲ್ಲಿ ಕ್ರಿಕೆಟ್ ಅನ್ನು ಉತ್ತೇಜಿಸಲು ಶ್ರೀಲಂಕಾ ಸಹಾಯ ಮಾಡಲಿದೆ.
ಇದನ್ನೂ ಓದಿ: ಬಿಸಿಸಿಐ: ಟೆಸ್ಟ್ ಪಂದ್ಯ ಆಡಲು ಹೆಚ್ಚುವರಿ 45 ಲಕ್ಷ, ಟೆಸ್ಟ್ ಕ್ರಿಕೆಟ್ ಇನ್ಸೆಂಟೀವ್ ಸ್ಕೀಮ್ ಘೋಷಿಸಿದ ಜೈ ಶಾ