ನವದೆಹಲಿ : ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 2023-2024ರ ರಾಷ್ಟ್ರೀಯ ಗುತ್ತಿಗೆ ಆಟಗಾರರ ಪಟ್ಟಿಯನ್ನು ಬುಧವಾರ ಪ್ರಕಟಿಸಿದ್ದು, ಭಾರತದ ನಾಯಕ ರೋಹಿತ್ ಶರ್ಮಾ ಮತ್ತು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅತ್ಯುನ್ನತ ವಿಭಾಗದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಬಿಸಿಸಿಐ 30 ಆಟಗಾರರಿಗೆ ರಾಷ್ಟ್ರೀಯ ಒಪ್ಪಂದಗಳನ್ನು ಘೋಷಿಸಿದೆ. ಅವರ ಸಂಭಾವನೆಯನ್ನು ಅವಲಂಬಿಸಿ ನಾಲ್ಕು ವಿಭಾಗಗಳಲ್ಲಿ ಆಟಗಾರರ ಸ್ಥಾನವನ್ನು ನೀಡಲಾಗಿದೆ. ಕಳೆದ ಋತುವಿಗೆ ಹೋಲಿಸಿದರೆ ಬಿಸಿಸಿಐ ನಾಲ್ವರು ಆಟಗಾರರಿಂದ ಒಪ್ಪಂದಗಳ ಪಟ್ಟಿಯನ್ನು ವಿಸ್ತರಿಸಿದೆ. ಆದರೆ ನಾಲ್ಕು ಗುತ್ತಿಗೆ ವಿಭಾಗಗಳ ಮೊತ್ತವನ್ನು ಬಿಸಿಸಿಐ ಉಲ್ಲೇಖಿಸಿಲ್ಲ. ಕ್ರಿಕೆಟ್ ಆಟಗಾರರು ಸಾಮಾನ್ಯವಾಗಿ ಎ+ ವರ್ಗಕ್ಕೆ 7 ಕೋಟಿ ರೂ., ಎ ವರ್ಗಕ್ಕೆ 5 ಕೋಟಿ ರೂ., ಬಿ ವರ್ಗಕ್ಕೆ 3 ಕೋಟಿ ರೂ. ಮತ್ತು ಸಿ ವರ್ಗಕ್ಕೆ 1 ಕೋಟಿ ರೂ. ಪಡೆಯುತ್ತಾರೆ.
ಪ್ರಸ್ತುತ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಸರಣಿಯಲ್ಲಿ ಭಾರತ 3-1 ಮುನ್ನಡೆ ಸಾಧಿಸಿದ್ದು, ಸರಣಿ ಕೈ ವಶ ಮಾಡಿಕೊಂಡಿದೆ. ನಾಯಕ ರೋಹಿತ್ ತವರು ನೆಲದಲ್ಲಿ ಸತತ 17ನೇ ಟೆಸ್ಟ್ ಸರಣಿ ಗೆಲುವು ದಾಖಲಿಸಿರುವ ಯುವ ಭಾರತೀಯ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣಗಳಿಂದ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಿಂದ ದೂರ ಉಳಿದುಕೊಂಡಿದ್ದಾರೆ. ಆದರೂ ಈ ಇಬ್ಬರು ಆಟಗಾರರು ಬಿಸಿಸಿಐನ ಗುತ್ತಿಗೆ ಪಟ್ಟಿಯ ಎ ಪ್ಲಸ್ ವಿಭಾಗದಲ್ಲಿ ಉಳಿದುಕೊಂಡಿದ್ದಾರೆ. ಇನ್ನೊಂದೆಡೆ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಮತ್ತು ವಿಶ್ವದ ನಂಬರ್ ಒನ್ ಆಲ್‌ರೌಂಡರ್ ರವೀಂದ್ರ ಜಡೇಜಾ ಕೂಡ ಎ ಪ್ಲಸ್ ಗ್ರೇಡ್ ವಿಭಾಗದಲ್ಲಿದ್ದಾರೆ.
ಬಿಸಿಸಿಐ ವಾರ್ಷಿಕ ಗುತ್ತಿಗೆ ಪಟ್ಟಿ ಪ್ರಕಟ :
ಗ್ರೇಡ್ A+ (4 ಆಟಗಾರರು) : ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ.
ಗ್ರೇಡ್ ಎ (6 ಆಟಗಾರರು) : ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕೆ.ಎಲ್ ರಾಹುಲ್, ಶುಭಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯ.
ಗ್ರೇಡ್ ಬಿ (5 ಆಟಗಾರರು) : ಸೂರ್ಯ ಕುಮಾರ್ ಯಾದವ್, ರಿಷಭ್ ಪಂತ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್ ಮತ್ತು ಯಶಸ್ವಿ ಜೈಸ್ವಾಲ್.
ಗ್ರೇಡ್ ಸಿ (15 ಆಟಗಾರರು) : ರಿಂಕು ಸಿಂಗ್, ತಿಲಕ್ ವರ್ಮಾ, ರುತುರಾಜ್ ಗಾಯಕ್ವಾಡ್, ಶಾರ್ದೂಲ್ ಠಾಕೂರ್, ಶಿವಂ ದುಬೆ, ರವಿ ಬಿಷ್ಣೋಯ್, ಜಿತೇಶ್ ಶರ್ಮಾ, ವಾಷಿಂಗ್ಟನ್ ಸುಂದರ್, ಮುಖೇಶ್ ಕುಮಾರ್, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಕೆಎಸ್ ಭರತ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್ ಮತ್ತು ರಜತ್ ಪಾಟಿದಾರ್.
ಈ ಆಟಗಾರರನ್ನು ಹೊರತುಪಡಿಸಿ, ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಈ ಇಬ್ಬರು 30 ಆಟಗಾರರ ಗುತ್ತಿಗೆ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಯುವ ವಿಕೆಟ್ ಕೀಪರ್ ಬ್ಯಾಟರ್ ಧ್ರುವ ಜುರೆಲ್ ಮತ್ತು ಬ್ಯಾಟರ್ ಸರ್ಫರಾಜ್ ಖಾನ್ ಅವರು ಇಲ್ಲಿಯವರೆಗೆ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಆದರೆ ಮುಂಬರುವ ಧರ್ಮಶಾಲಾ ಟೆಸ್ಟ್‌ನಲ್ಲಿ ಆಡಿದರೆ ಅವರನ್ನು ಗ್ರೇಡ್ ಸಿ ಒಪ್ಪಂದಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ಆಯ್ಕೆ ಸಮಿತಿಯು ತಿಳಿಸಿದೆ. ಆಕಾಶ್ ದೀಪ್, ವಿಜಯ್‌ಕುಮಾರ್ ವೈಶಾಕ್, ಉಮ್ರಾನ್ ಮಲಿಕ್, ಯಶ್ ದಯಾಳ್ ಮತ್ತು ವಿದ್ವತ್ ಕಾವೇರಪ್ಪ ಅವರಿಗೆ ವೇಗದ ಬೌಲಿಂಗ್ ಗುತ್ತಿಗೆಯನ್ನು ಬಿಸಿಸಿಐ ಶಿಫಾರಸು ಮಾಡಿದೆ.
ಇದನ್ನೂ ಓದಿ : ಬಿಸಿಸಿಐ ಎಚ್ಚರಿಕೆಗೆ ಬಗ್ಗಿದ ಕ್ರಿಕೆಟರ್ಸ್: ರಣಜಿಯಲ್ಲಿ ಶ್ರೇಯಸ್ ಅಯ್ಯರ್, ಪಾಟೀಲ್ ಕಪ್ನಲ್ಲಿ ಇಶಾನ್ ಕಿಶನ್ ಕಣಕ್ಕೆ