92 Runs in 4 Ball: ಕ್ರಿಕೆಟ್ನಲ್ಲಿ ಒಬ್ಬ ಬೌಲರ್ ಒಂದು ಓವರ್ನಲ್ಲಿ ಎಷ್ಟು ರನ್ ಬಿಟ್ಟುಕೊಡಬಹುದು ಎಂದು ಕೇಳಿದರೇ 36 ರನ್ ಎಂದು ಹೇಳಬಹುದು. ಆದರೆ ಇಲ್ಲೊಬ್ಬ ಬೌಲರ್ ಕೇವಲ 4 ಎಸೆತಗಳಲ್ಲಿ ಬರೋಬ್ಬರಿ 92 ರನ್ ಬಿಟ್ಟುಕೊಟ್ಟು ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕೆಟ್ಟ ದಾಖಲೆ ಬರೆದಿದ್ದಾರೆ. ಇದು ನಂಬಲಸಾಧ್ಯವಾದರೂ ನಿಜವಾದ ಸಂಗತಿ.
2017ರಲ್ಲಿ ಢಾಕಾ ಎರಡನೇ ಡಿವಿಷನ್ ಕ್ರಿಕೆಟ್ ಲೀಗ್ ಪಂದ್ಯಾವಳಿಗಳು ನಡೆದಿದ್ದವು. ಇದರಲ್ಲಿ ಆಕ್ಸಿಯೊಮ್ ಮತ್ತು ಲಾಲ್ಮಾಟಿಯಾ ತಂಡಗಳ ನಡುವೆ 50 ಓವರ್ಗಳ ಪಂದ್ಯವನ್ನು ಆಯೋಜಿಸಲಾಗಿತ್ತು. ಪಂದ್ಯ ಆರಂಭದಿಂದಲೇ ವಿವಾದಗಳಿಂದ ಶುರುವಾಗಿತ್ತು. ಇದರಲ್ಲಿ ಮೊದಲು ಬ್ಯಾಟ್ ಮಾಡಿದ್ದ ಲಾಲ್ಮಾಟಿಯಾ 14 ಓವರ್ಗಳಲ್ಲಿ 88 ರನ್ ಗಳಿಸಿ ಆಲೌಟ್ ಆಗಿತ್ತು. ಇದಕ್ಕುತ್ತರಾಗಿ ಆಕ್ಸಿಯೊಮ್ ತಂಡವೂ ಕೇವಲ 4 ಎಸೆತಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೇ 92 ರನ್ ಕಲೆಹಾಕಿ ಗೆಲುವು ಸಾಧಿಸಿತ್ತು. ಆದರೆ ಈ ಎಲ್ಲ ರನ್ ಬ್ಯಾಟರ್ನಿಂದ ಹರಿದು ಬಂದಿರಲಿಲ್ಲ. ಬದಲಿಗೆ ಅಂಪೈರ್ ವಿರುದ್ಧ ಸಿಟ್ಟಿನಿಂದ ಉದ್ದೇಶ ಪೂರ್ವಕವಾಗಿಯೇ ಬೌಲರ್ ರನ್ ಬಿಟ್ಟುಕೊಟ್ಟಿದ್ದರು.
ಬೌಲರ್ ಹೀಗೆ ಮಾಡಲು ಕಾರಣವೇನು? ವಾಸ್ತವಾಗಿ, ಉಭಯ ತಂಡಗಳ ನಡುವಿನ ಈ ಪಂದ್ಯವು ಟಾಸ್ನಿಂದಲೇ ವಿವಾದಕ್ಕೆ ಗುರಿಯಾಗಿತ್ತು. ಲಾಲ್ಮಾಟಿಯಾದ ನಾಯಕನಿಗೆ ಟಾಸ್ ಬಳಿಕ ನಾಣ್ಯವನ್ನು ನೋಡಲು ಅಂಪೈರ್ ಅವಕಾಶ ನೀಡದೇ ನೇರವಾಗಿ ಬ್ಯಾಟಿಂಗ್ ಮಾಡಲು ಕಳುಹಿಸಲಾಗಿತ್ತು. ನಂತರ ಪಂದ್ಯದಲ್ಲೂ ಅಂಪೈರ್‌ಗಳ ನಿರ್ಧಾರಗಳು ಲಾಲ್ಮಾಟಿಯ ವಿರುದ್ಧವಾಗಿ ಬಂದ ಕಾರಣ ಅಲ್ಪಮೊತ್ತಕ್ಕೆ ಕುಸಿದಿತ್ತು. ಇದರಿಂದಾಗಿ ಬೌಲರ್ ಸುಜೋನ್ ಮಹಮೂದ್ ಸೇರಿದಂತೆ ಇಡೀ ತಂಡ ಅಂಪೈರ್ ವಿರುದ್ಧ ಆಕ್ರೋಶ ಹೊರಹಾಕಿತ್ತು. ನಂತರ ಅಂಪೈರ್ ವರ್ತನೆ ಖಂಡಿಸಿ ಸುಜೋನ್ ಬೌಲಿಂಗ್ ಮೂಲಕ ಪ್ರತಿಭಟಿಸಿದ್ದರು.
4 ಎಸೆತಗಳಲ್ಲಿ 92 ರನ್ ಬಿಟ್ಟುಕೊಟ್ಟಿದ್ದು ಹೇಗೆ?
ಲಾಲ್ಮಾಟಿಯಾ ಪರ ಮೊದಲ ಓವರ್ ಬೌಲಿಂಗ್ ಮಾಡಿದ್ದ ಬೌಲರ್ ಸುಜೋನ್ ಮಹಮೂದ್ ತಮ್ಮ ಓವರ್ನಲ್ಲಿ ವೈಡ್ ಮತ್ತು ನೋಬಾಲ್ ಮೂಲಕವೇ 80 ರನ್ ಬಿಟ್ಟುಕೊಟ್ಟಿದ್ದರು. ಅವರ ಓವರ್ನಲ್ಲಿ 65 ವೈಡ್ ಬಾಲ್ಗಳನ್ನು ಎಸೆದಿದ್ದರು. ನಂತರ 15 ನೋ ಬಾಲ್ಗಳನ್ನು ಎಸೆದಿದ್ದರು. ಇದರಿಂದಾಗಿ ತಂಡಕ್ಕೆ ಹೆಚ್ಚುವರಿಯಾಗಿ 80 ರನ್ಗಳು ಹರಿದಬಂದವು. ನಂತರ 4 ಕಾನೂನುಬದ್ಧ ಬೌಲಿಂಗ್ ಮಾಡಿದರು. ಈ ವೇಳೆ ಮುಸ್ತಫಿಜುರ್ ರೆಹಮಾನ್ 4 ಬೌಂಡರಿ ಬಾರಿಸಿ 16 ರನ್ ಗಳಿಸಿದರು. ಇದರಿಂದಾಗಿ ಆಕ್ಸಿಯೊಮ್ ಕೇವಲ 4 ಎಸೆತಗಳಲ್ಲಿ 10 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.
ಇದನ್ನೂ ಓದಿ: ಒಂದೇ ಓವರ್ನಲ್ಲಿ 36 ಅಲ್ಲ 77ರನ್ ಬಿಟ್ಟುಕೊಟ್ಟ ಬೌಲರ್: ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಓವರ್ ದಾಖಲು!