ಕಿಂಗ್‌ಸ್ಟೌನ್ (ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್): ಇಲ್ಲಿನ ಅರ್ನೋಸ್ ವೇಲ್ ಮೈದಾನದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಡಿ ಗುಂಪಿನ ಅಂತಿಮ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವು ನೇಪಾಳ ವಿರುದ್ಧ 21 ರನ್ಗಳ ಜಯ ದಾಖಲಿಸಿದೆ. ಇದರೊಂದಿಗೆ ಬಾಂಗ್ಲಾ ಅಧಿಕೃತವಾಗಿ ಸೂಪರ್-8 ಹಂತಕ್ಕೆ ಲಗ್ಗೆ ಇಟ್ಟಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡವು ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿತು. ಅನುಭವಿ ಶಕಿಬ್ ಉಲ್ ಹಸನ್ ಇನ್ನಿಂಗ್ಸ್ನ ಸರ್ವಾಧಿಕ 17 ರನ್ ಗಳಿಸಿದರು. ಇನ್ನುಳಿದಂತೆ ಆರಂಭಿಕ ಆಟಗಾರ ಲಿಟನ್ ದಾಸ್ 10, ಮೊಹಮುದುಲ್ಲಾ 13, ಜಕರ್ ಅಲಿ 12, ರಿಶದ್ ಹೊಸೇನ್ 13 ಹಾಗೂ ವೇಗಿ ಟಸ್ಕಿನ್ ಅಹ್ಮದ್ 12* ರನ್ ಗಳಿಸಿ ತಂಡಕ್ಕೆ ಆಸರೆಯಾದರು.
ಆರಂಭಿಕ ಆಟಗಾರ ತಂಜಿದ್ ಹಸನ್ (0) ಖಾತೆ ತೆರೆಯದೇ ಔಟಾದರೆ, ನಾಯಕ ಶಾಂಟೊ 4, ತೊವ್ಹಿದ್ ಹೃದೋಯ್ 9, ಹಸನ್ ಶಕೀಬ್ 3 ಹಾಗೂ ಮುಸ್ತಾಫಿಜರ್ 3 ರನ್ಗೆ ವಿಕೆಟ್ ಒಪ್ಪಿಸಿದರು. ಬಾಂಗ್ಲಾದೇಶ 19.3 ಓವರ್ಗಳಲ್ಲೇ 106 ರನ್ಗಳಿಗೆ ಆಲೌಟ್ ಆಯಿತು. ನೇಪಾಳ ಪರ ಸೋಂಪಾಲ್ ಕಾಮಿ, ದಿಪೆಂದ್ರ ಸಿಂಗ್, ರೋಹಿತ್ ಪೌಡೆಲ್ ಹಾಗೂ ಸಂದೀಪ್ ಲಮಿಶಾನೆ ತಲಾ 2 ವಿಕೆಟ್ ಕಬಳಿಸಿದರು.
107 ರನ್ ಗುರಿ ಬೆನ್ನಟ್ಟಿದ ನೇಪಾಳದ ಇನ್ನಿಂಗ್ಸ್ ಕೂಡ ಏರಿಳಿತದಿಂದ ಕೂಡಿತ್ತು. 26 ರನ್ ಆಗುವಷ್ಟರಲ್ಲೇ ತಂಡದ ಅರ್ಧ ಬ್ಯಾಟರ್ಗಳು ಪೆವಿಲಿಯನ್ಗೆ ಮರಳಿದ್ದರು. ಕುಶಾಲ್ ಭುರ್ಟೆಲ್ 4, ವಿಕೆಟ್ ಕೀಪರ್ ಆಸಿಫ್ ಶೇಖ್ 17, ನಾಯಕ ರೋಹಿತ್ ಪೌಡೆಲ್ 1, ಅನಿಲ್ ಸಾಹ್ 0, ಸಂದೀಪ್ ಜೊರಾ 1 ರನ್ ಔಟಾಗಿ ನಿರಾಸೆ ಮೂಡಿಸಿದರು. ಬಾಂಗ್ಲಾ ತಂಡ ಭರ್ಜರಿ ಗೆಲುವಿನ ವಿಶ್ವಾಸದಲ್ಲಿತ್ತು.
ಈ ಹಂತದಲ್ಲಿ ಒಂದಾದ ಕುಶಾಲ್ ಮಲ್ಲಾ (27) ಹಾಗೂ ದಿಪೆಂದ್ರ ಸಿಂಗ್ (25) 6ನೇ ವಿಕೆಟ್ಗೆ 52 ರನ್ ಜೊತೆಯಾಟವಾಡಿ ನೇಪಾಳಕ್ಕೆ ಗೆಲುವಿನ ಭರವಸೆ ಮೂಡಿಸಿದರು. ಆದರೆ, ಈ ವೇಳೆ ದಾಳಿಗಿಳಿದ ಮುಸ್ತಾಫಿಜರ್ ಈ ಇಬ್ಬರನ್ನೂ ಔಟ್ ಮಾಡುವ ಮೂಲಕ ನೇಪಾಳಕ್ಕೆ ಡಬಲ್ ಶಾಕ್ ನೀಡಿದರು. ಬಳಿಕ ಕೆಳ ಕ್ರಮಾಂಕದ ಬ್ಯಾಟರ್ಗಳಲ್ಲಿ ಮೂವರು ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರಿಂದ ನೇಪಾಳ 85 ರನ್ಗೆ ಆಲೌಟ್ ಆಗುವ ಮೂಲಕ ಮತ್ತೊಂದು ಆಘಾತಕಾರಿ ಸೋಲು ಕಂಡಿತು. ಈ ಹಿಂದಿನ ಪಂದ್ಯದಲ್ಲಿಯೂ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಕೇವಲ 1 ರನ್ ಅಂತರದಿಂದ ಸೋತಿತ್ತು.
ಬಾಂಗ್ಲಾ ಪರ ತಂಜಿಮ್ ಹಸನ್ ಶಕಿಬ್ 7 ರನ್ಗೆ 4, ಮುಸ್ತಾಫಿಜರ್ ರಹ್ಮಾನ್ 7ಕ್ಕೆ 3 ಹಾಗೂ ಶಕಿಬ್ ಉಲ್ ಹಸನ್ 2 ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ ಬಾಂಗ್ಲಾದೇಶ ತಂಡವು ಸೂಪರ್ - 8 ಹಂತಕ್ಕೇರಿದ್ದು, ಭಾರತ, ಅಫ್ಘಾನಿಸ್ತಾನ ಹಾಗೂ ಆಸ್ಟ್ರೇಲಿಯಾ ವಿರುದ್ಧ ಕಾದಾಡಲಿದೆ.
ಇದನ್ನೂ ಓದಿ: ಐರ್ಲೆಂಡ್ ವಿರುದ್ಧ ಪ್ರಯಾಸದ ಗೆಲುವು; ಟಿ20 ವಿಶ್ವಕಪ್ನಿಂದ ಪಾಕ್ ನಿರ್ಗಮನ - Pakistan beats Ireland