Syed Mushtaq Ali Trophy 2024: ಸೈಯದ್ ಮುಷ್ತಾಕ್ ಅಲಿ ಟ್ರೋಫಿ ನಡೆಯುತ್ತಿದ್ದು, ಭಾರತದ ಯುವ ಆಟಗಾರರು ಭರ್ಜರಿ ದಾಖಲೆ ಬರೆಯುತ್ತಿದ್ದಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಮೂಲಕವೇ ಯುವ ಆಟಗಾರು ಗಮನ ಸೆಳೆಯುತ್ತಿದ್ದಾರೆ. ಸದ್ಯ ಟೂರ್ನಿ ಮುಕ್ತಾಯದ ಹಂತಕ್ಕೆ ತಲುಪಿದ್ದು, ಇದೇ ತಿಂಗಳು 15ನೇ ತಾರೀಖಿನಂದು ಫೈನಲ್ ಪಂದ್ಯದೊಂದಿಗೆ ಟೂರ್ನಿಗೆ ತೆರೆ ಬೀಳಲಿದೆ.
ಏತನ್ಮಧ್ಯೆ, ಬುಧವಾರ (ನಿನ್ನೆ) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದೆಹಲಿ ಮತ್ತು ಉತ್ತರ ಪ್ರದೇಶ ತಂಡಗಳ ಮಧ್ಯ 2ನೇ ಕ್ವಾರ್ಟರ್ ಫೈನಲ್ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಡೆಲ್ಲಿ ತಂಡ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್ಗೆ ಪ್ರವೇಶ ಪಡೆದಿದೆ. ಆದರೆ, ಈ ಪಂದ್ಯದ ನಡುವೆ ಇಬ್ಬರು ಆಟಗಾರರು ಜಗಳ ಮಾಡಿಕೊಂಡಿರುವ ಘಟನೆ ನಡೆದಿದೆ. ಇಬ್ಬರು ಮಾತಿನ ಚಕಮಕಿಯೊಂದಿಗೆ ಪರಸ್ಪರ್ ಜಗಳಕ್ಕೆ ಮುಂದಾಗುತ್ತಿದ್ದಂತೆ ಅಂಪೈರ್ ಇಬ್ಬರನ್ನೂ ತಡೆದು ಸಮಾಧಾನಪಡಿಸಿ ವಿವಾದ ಇತ್ಯರ್ಥಪಡಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
— Sunil Gavaskar (@gavaskar_theman) December 11, 2024
ದೆಹಲಿ ತಂಡದ ಬ್ಯಾಟಿಂಗ್ ವೇಳೆ ಈ ಘಟನೆ ನಡೆದಿದೆ. ವಾಸ್ತವವಾಗಿ ಉತ್ತರ ಪ್ರದೇಶದ ಆಟಗಾರ ನಿತೀಶ್ ರಾಣಾ ಬೌಲಿಂಗ್ ಮಾಡುತ್ತಿದ್ದರು. ಈ ವೇಳೆ, ಡೆಲ್ಲಿ ನಾಯಕ ಆಯುಷ್ ಬಡೋನಿ ಬ್ಯಾಟಿಂಗ್ ಮಾಡುತ್ತಿದ್ದರು. ಅವರು ನಿತೀಶ್ ಎಸೆದ ಚೆಂಡನ್ನು ಬೌಂಡರಿಗಟ್ಟಲು ಯತ್ನಿಸಿದ್ದಾರೆ. ಆದರೇ ಫೀಲ್ಡರ್ ತಡೆದಿದ್ದರಿಂದ ಕೇವಲ ಒಂದು ರನ್ ತೆಗೆದುಕೊಳ್ಳಲು ಮಾತ್ರ ಸಾಧ್ಯವಾಯಿತು. ಈ ವೇಳೆ, ಬಳಿಕ ಇಬ್ಬರು ಆಟಗಾರರ ನಡುವೆ ವಾಗ್ವಾದ ನಡೆದಿದೆ. ರನ್ ಗಳಿಸಲು ಓಡಿ ಬಂದ ಬಡೋನಿ ಅವರನ್ನು ನಿತೀಶ್ ರಾಣಾ ಕೆಣಕಿ ಜಗಳ ಮಾಡಿಕೊಂಡಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
ಕೂಡಲೇ ಮಧ್ಯೆಪ್ರವೇಶಿಸಿದ ಅಂಪೈರ್: ಇಬ್ಬರು ಆಟಗಾರರು ಜಗಳಕ್ಕಾಗಿ ಪರಸ್ಪರ ಎದುರು ಬದುರು ಆಗುತ್ತಿದ್ದನ್ನು ಗಮನಿಸಿದ ಅಂಪೈರ್ ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆ ಇತ್ಯರ್ಥಗೊಳಿಸಿದರು. ಈ ಹಿಂದೆ ಆಯುಷ್ ಬಡೋನಿ ಮತ್ತು ನಿತೀಶ್ ರಾಣಾ ಆತ್ಮೀಯ ಗೆಳೆಯರಾಗಿದ್ದರು. ನಿತೀಶ್ ರಾಣಾ ಈ ಹಿಂದೆ ದೆಹಲಿ ತಂಡದ ಪರ ಮಾತ್ರ ಆಡುತ್ತಿದ್ದರು. ಅವರು ಕ್ಯಾಪ್ಟನ್ ಕೂಡ ಆಗಿದ್ದರು. ಆದರೆ, ಅವರು 2023ರಲ್ಲಿ ಯುಪಿ ಪರ ಆಡಲು ನಿರ್ಧರಿಸಿದರು. ಈ ಹಿಂದೆ ಐಪಿಎಲ್ 2023ರ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್‌ನ ಹೃತಿಕ್ ಶಾಕೀನ್ ಅವರೊಂದಿಗೆ ಘರ್ಷಣೆ ಜಗಳಕ್ಕಿಳಿದು ಚರ್ಚೆಗೆ ಗ್ರಾಸವಾಗಿದ್ದರು.
ದೆಹಲಿಗೆ ಜಯ: ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಡೆಲ್ಲಿ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 193 ರನ್ ಕಲೆಹಾಕಿತು. ತಂಡದ ಪರ ರಾವತ್ 33 ಎಸೆತಗಳಲ್ಲಿ 73 ರನ್ ಗಳಿಸಿ ಅಜೇಯರಾಗುಳಿದರು. ಇದರಲ್ಲಿ 7 ಬೌಂಡರಿ ಹಾಗೂ 5 ಸಿಕ್ಸರ್ ಸಿಡಿಸಿದ್ದರು. ಉಳಿದಂತೆ ಯಶ್ ಧುಲ್ (42) ಮತ್ತು ಪ್ರಿಯಾಂಶ್ ಆರ್ಯ (44) ತಂಡಕ್ಕೆ ರನ್ ಕೊದುಗೆ ನೀಡಿದರು. ಈ ಗುರಿಯನ್ನು ಬೆನ್ನಟ್ಟಿದ ಯುಪಿ ತಂಡ 19.5 ಓವರ್‌ಗಳಲ್ಲಿ 174 ರನ್‌ಗಳಿಗೆ ಸರ್ವಪತನ ಕಂಡಿತು. ನಿತೀಶ್ ರಾಣಾ 3 ಎಸೆತಗಳಲ್ಲಿ 2 ರನ್ ಗಳಿಸಲಷ್ಟೇ ಶಕ್ತರಾದರು.
ಇದನ್ನೂ ಓದಿ: Match Fixing: ಸಹಾಯಕ ಕೋಚ್ 6 ವರ್ಷ ಕ್ರಿಕೆಟ್ನಿಂದ ಬ್ಯಾನ್!